ಬೋರುಕಟ್ಟೆ-ನಾಯರ್‌ಕೋಡಿ- ಬಾಜಾವು ರಸ್ತೆ ಧ್ವಂಸ – ನಾಗರಿಕರಿಂದ ಪ್ರತಿಭಟನೆ

Spread the love

ಬೋರುಕಟ್ಟೆ-ನಾಯರ್‌ಕೋಡಿ- ಬಾಜಾವು ರಸ್ತೆ ಧ್ವಂಸ – ನಾಗರಿಕರಿಂದ ಪ್ರತಿಭಟನೆ

ಸುರತ್ಕಲ್ : ಪೆರ್ಮುದೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಬೋರುಕಟ್ಟೆ – ನಾಯರ್ ಕೋಡಿ – ಬಾಜಾವು ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಭೂಮಿಯನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ನಾಶಪಡಿಸಿ ಪರಿಸರದ ಸುಮಾರು ಎಂಭತ್ತರಿಂದ ನೂರು ಮನೆಯವರಿಗೆ ತೊಂದರೆ ಉಂಟು ಮಾಡಿರುವುದನ್ನು ವಿರೋಧಿಸಿ ತೀವ್ರವಾದ ಪ್ರತಿಭಟನೆ ಇಂದು ಕುತ್ತೆತ್ತೂರಿನ ನಾಯರ್‌ಕೋಡಿ ಬಳಿ ನಡೆಯಿತು.

ಎರಡು ಖಾಸಗಿಯವರಿಗೆ ಸೇರಿದ ಸಂಸ್ಥೆಗಳು ಇಲ್ಲಿ ಸುಮಾರು ನಲುವತ್ತು ಎಕರೆ ಪ್ರದೇಶದಲ್ಲಿ ಭೂ ಆಭಿವೃದ್ಧಿಯನ್ನು ಮಾಡುತ್ತಿರುವುದು, ರಸ್ತೆಯನ್ನು ಕಬಳಿಸಿದ ಬಗ್ಗೆ ಸ್ಥಳೀಯರಿಂದ ಪ್ರತಿಭಟನೆ ವ್ಯಕ್ತವಾದಾಗ ಒಂದು ಸಂಸ್ಥೆಯವರು ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರ ಸಮಕ್ಷಮದಲ್ಲಿ ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ರಸ್ತೆಯನ್ನು ರಚಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡಲಾಗುವುದು ಎಂದು ಪಂಚನಾಮೆಯ ಮೂಲಕ ಬರೆದು ಕೊಟ್ಟಿದ್ದರು. ಆದರೆ ಇದರ ಪಕ್ಕದಲ್ಲಿ ಇನ್ನೊಂದು ಖಾಸಗಿ ಸಂಸ್ಥೆಗೆ ಸೇರಿದವರು ಭೂಮಿಯನ್ನು ಅಭಿವೃದ್ಧಿಪಡಿಸುತ್ತಿದ್ದು ಅವರು ಬೋರುಕಟ್ಟೆ – ಬಾಜಾವು ಡಾಮಾರು ರಸ್ತೆಯನ್ನು ಸಂಪೂರ್ಣವಾಗಿ ಕಬಳಿಸಿ ರಸ್ತೆಯೇ ಇಲ್ಲದಂತೆ ಮಾಡಿ ಬಿಟ್ಟಿದ್ದಾರೆ. ಇಲ್ಲಿ ರಸ್ತೆ ಇರಲೇ ಇಲ್ಲ ಎಂಬ ಮೊಂಡು ವಾದವನ್ನು ಮಾಡುತ್ತಿದ್ದಾರೆ. ಸ್ಥಳೀಯ ಶಾಸಕ ಅಭಯಚಂದ್ರ ಜೈನ್‌ರವರ ೨೦೦೮- ೨೦೦೯ರ ಶಾಸಕರ ನಿಧಿಯ ಅನುದಾನದಲ್ಲಿ ಎರಡು ಲಕ್ಷ ರೂಪಾಯಿಗಳ ಮೊತ್ತದಲ್ಲಿ ಪಂ.ರಾ.ಇಂ. ಇಲಾಖೆ ಮಂಗಳೂರು ಇವರು ನಿರ್ಮಾಣ ಮಾಡಿದ ಬೋರುಕಟ್ಟೆ ನಾಯರ್‌ಕೋಡಿ ಡಾಮಾರೀಕೃತ ರಸ್ತೆಯನ್ನು ನೆಲಸಮ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಈ ರಸ್ತೆಯಲ್ಲಿ ಹೋಗುವ ಹೆಂಗಸರು, ಹಿರಿಯನಾಗರಿಕರು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಕನಿಷ್ಠ ಗೌರವ ಕೊಡುವ ಕೆಲಸವನ್ನೂ ಇಲ್ಲಿ ಕೆಲಸ ಮಾಡುತ್ತಿರುವವರು ಮಾಡುತ್ತಿಲ್ಲ. ಎಲ್ಲಾ ಅಧಿಕಾರಿಗಳು ಯಾವುದೋ ಕಾರಣಕ್ಕಾಗಿ ಜನರನ್ನು ಮತ್ತು ಜನಪ್ರತಿನಿಧಿಗಳನ್ನು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಬೋರುಕಟ್ಟೆಯಿಂದ ನಾಯರ್‌ಕೋಡಿ ಮತ್ತು ಬಾಜಾವಿಗೆ ಇದ್ದ ಸರಕಾರಿ ರಸ್ತೆಯನ್ನು ಸಂಪೂರ್ಣವಾಗಿ ಹಾಳುಗೆಡವಿದ ಇವರು ಮೊದಲು ಇಲ್ಲಿ ಸುಸಜ್ಜಿತವಾದ ರಸ್ತೆಯನ್ನು ಮಾಡಿಕೊಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ಜನರನ್ನು ಎದುರು ಹಾಕಿಕೊಂಡು, ತೊಂದರೆ ನೀಡಿ ಖಾಸಗಿಯವರು ಯಾವುದೇ ಕೆಲಸ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಾಲೂಕು ಪಂಚಾಯ್ ಸದಸ್ಯೆ ಶಶಿಕಲಾ ಹೇಳಿದರು.

ಸ್ಥಳೀಯ ನಿವಾಸಿ ಶಶಿಕಲಾ ನಾಯರ್ ಕೋಡಿಯವರು ಈ ರಸ್ತೆಯನ್ನು ಹಾಳುಗೆಡವಿ ಸಂಚಾರ ಮಾಡಲು ತೊಂದರೆ ನೀಡಿದ ಬಗ್ಗೆ ನಾವು ಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕರು, ಸಂಸದರು ಮತ್ತು ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯನ್ನು ಮುಚ್ಚುವ ಪ್ರಯತ್ನವನ್ನು ಯಾವುದೇ ಬೆಲೆ ತೆತ್ತು ತಡೆಯಲಾಗುವುದು. ಈ ಬಗ್ಗೆ ಖಾಸಗಿಯವರಿಂದ ಬರುವ ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪಂಚಾಯತ್ ಸದಸ್ಯ ಜಗನ್ನಾಥ ಶೆಟ್ಟಿ ರಸ್ತೆಯನ್ನು ಮುಚ್ಚುವುದರ ವಿರುದ್ಧ ಪಂಚಾಯತ್ ಸದಸ್ಯರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದನ್ನು ವಿವರಿಸಿದರು. ಕುತ್ತೆತ್ತೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ರಸ್ತೆಧ್ವಂಸ ಮಾಡಿದವರ ವಿರುದ್ಧ ಘೋಷಣೆ ಕೂಗಿದರು.


Spread the love