ಭಗವದ್ಗೀತೆಯ ಚಿಂತನೆ ಬದುಕಿನಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ – ಪುತ್ತಿಗೆ ಸ್ವಾಮೀಜಿ

Spread the love

ಭಗವದ್ಗೀತೆಯ ಚಿಂತನೆ ಬದುಕಿನಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ – ಪುತ್ತಿಗೆ ಸ್ವಾಮೀಜಿ

ಉಡುಪಿ: ಮನಸ್ಸಿನ ಹಸಿವು ತೀರಿದರೆ ಆ ಮೂಲಕ ಹೊಟ್ಟೆಯ ಹಸಿವು ಕೂಡು ತೀರುತ್ತದೆ ಎಂದು ಭಾವಿ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅವರು ಸೋಮವಾರ ಸಂಜೆ ರಥಬೀದಿಯಲ್ಲಿ ತಮ್ಮ ಶಿಷ್ಯರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಉಡುಪಿ ಜನತೆಯ ಪರವಾಗಿ ನಗರಸಭೆ-ಜಿಲ್ಲಾಡಳಿತದ ವತಿಯಿಂದ ಪೌರಸನ್ಮಾನ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು.

ಜಗತ್ತಿನದಲ್ಲಿ ದುಃಖ ಮನುಷ್ಯನ ಸೃಷ್ಟಿ, ಸುಖ ದೇವರ ಸೃಷ್ಟಿ. ಮನುಷ್ಯ ಅಜ್ಞಾನದಿಂದ ನಷ್ಟ ಅನುಭವಿಸಿದರೆ, ಸುಜ್ಞಾನ ಗಳಿಕೆಯಿಂದ ಸುಖ ಪಡೆಯುತ್ತಾನೆ. ನಮ್ಮದೆನ್ನುವುದು ಏನೂ ಇಲ್ಲ, ಎಲ್ಲವೂ ದೇವರದ್ದು ಎನ್ನುವ ಭಾವ ಎಲ್ಲರಲ್ಲೂ ಇರಬೇಕು . ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆಯಲಾಗುತ್ತದೆ ಆತ ಕೇವಲ ಹೊಟ್ಟೆಗೆ ಅನ್ನ ನೀಡಿದ್ದಲ್ಲ ಗೀತಿಯ ಮೂಲಕ ಮನಸ್ಸಿಗೂ ಅನ್ನನೀಡಿದ್ದಾನೆ. ಗೀತೆಯನ್ನು ಬದುಕಿನ್ನಲ್ಲಿ ಅಳವಡಿಸಿಕೊಂಡರೆ ಯಸಶ್ಸು ಸಾಧ್ಯ ಇದೆ ತಮ್ಮ ಕೋಟಿ ಗೀತ ಯಜ್ಞಕ್ಕೆ ಕಾರಣ ಎಂದರು.

ಜಗತ್ತಿನ ಮೂಲೆ ಮೂಲೆ ಸುತ್ತಿದ್ದೇವೆ. ಆದರೆ ಉಡುಪಿಗೆ ಬಂದಾಗ ವಿಶೇಷ ವೈಬ್ರೇಷನ್ ಆಗುತ್ತದೆ. ಇದರಿಂದ ತಿಳಿಯುವುದು ನಮ್ಮೂರೇ ವಾಸಿ ಎಂಬುದು. ಈ ಅನುಭವ ಪಡೆಯಲು ಇಲ್ಲಿಯೇ ಇದ್ದರೆ ಆಗುವುದಿಲ್ಲ. ಸಂಚಾರ ಮಾಡಬೇಕು. ಮೂರು ಲೋಕವು ನಮ್ಮ ದೇಶ. ವಿದೇಶ ಎಂಬುದು ಯಾವುದು? ಆಡಳಿತಾತ್ಮಕ ಗಡಿ ಅಷ್ಟೆ. ಆಧ್ಯಾತ್ಮಿಕವಾಗಿ ಎಲ್ಲವೂ ಒಂದೇ. ಹೀಗಾಗಿ ನಾವು ವಿದೇಶಿ ಪ್ರವಾಸ ಮಾಡಿಲ್ಲ ಎಂದರು.

ಭಗವದ್ಗೀತೆಯ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡಾಗ ಆನಂದ ಸಿಗಲಿದೆ. ಈಗ ಎಲ್ಲೆಡೆ ಹೊಟ್ಟೆಯ ಹಸಿವಿಲ್ಲ. ಮನಸ್ಸಿನ ಹಸಿವು ಹೆಚ್ಚಾಗಿದೆ. ಇದಕ್ಕೆ ಸರಿಯಾದ ಆಹಾರ ನೀಡಿದರೆ ಯಾವುದೇ ದುಃಖ ಇರುವುದಿಲ್ಲ. ಹೀಗಾಗಿ ಎಲ್ಲ ಭಾರವನ್ನು ಶ್ರೀಕೃಷ್ಣ ದೇವರ ಮೇಲೆ ಹಾಕಿ, ನಮ್ಮ ಕಾರ್ಯಸಾಧನೆ ಮಾಡಬೇಕು. ದೇವರ ಮೇಲೆ ನಂಬಿಕೆ ಇರಬೇಕು. ಈ ಪರ್ಯಾಯದಲ್ಲಿ ಅನ್ನಬ್ರಹ್ಮನ ಜತೆಗೆ ಜ್ಞಾನ ಬ್ರಹ್ಮನ ಆರಾಧನೆಯು ಕೋಟಿ ಗೀತಾ ಲೇಖನ ಯಜ್ಞದ ಮೂಲಕ ನಡೆಯಲಿದೆ ಎಂದು ಅನುಗ್ರಹಿಸಿದರು.

ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಗೀತೆಯನ್ನು ಎಲ್ಲರು ಬರೆದು ಶ್ರೀಕೃಷ್ಣನಿಗೆ ಸಮರ್ಪಿಸುವ ಮೂಲಕ ದೇವರ ಅನು ಗ್ರಹ ಪಡೆಯಲು ಸಾಧ್ಯ ವಾಗಲಿದೆ ಎಂದರು.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾತನಾಡಿ, ಎಲ್ಲರ ಬದುಕು ಸುಗಮವಾಗಿ ಸಾಗಲಿ, ಎಲ್ಲರಿಗೂ ನೆಮ್ಮದಿಯ ಬದುಕು ದೇವರು ಕರುಣಿಸಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಪುತ್ತಿಗೆ ಶ್ರೀಪಾದರು ಹಿಂದೂ ಧರ್ಮದ ಪ್ರಚಾರದ ಮೂಲಕ ಸಮಾಜದ ಆಸ್ತಿಯಾಗಿದ್ದಾರೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಲೂರ, ಕಟೀಲ್ ದೇವಳದ ಧರ್ಮದರ್ಶಿ ಲಕ್ಷ್ಮೀ ನಾರಾಯಣ ಅಸ್ರಣ್ಣ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ದರ್ಮದರ್ಶಿ ಶ್ರೀ ರಮಣ ಉಪಾಧ್ಯಾಯ, ಪರ್ಯಾಯ ಸಮಿತಿ ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ ರಘುಪತಿ ಭಟ್, ಅಧ್ಯಕ್ಷ ಡಾ. ಎಚ್ ಎಸ್ ಬಲ್ಲಾಳ್, ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ, ನಗರಸಭೆಯ ಪೌರಾಯುಕ್ತ ರಾಯಪ್ಪ ಹಾಗೂ ಇತರರು ಉಪಸ್ಥಿತರಿದ್ದರು.


Spread the love