ಭಟ್ಕಳ : ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಸಚಿವ ಆರ್. ವಿ. ದೇಶಪಾಂಡೆ

Spread the love

ಭಟ್ಕಳ: ನೀರಿನ ಸಮಸ್ಯೆ ಒಂದು ಮಾನವೀಯ ಸಮಸ್ಯೆಯಾಗಿದ್ದು ಇದರಲ್ಲಿ ಯವುದೇ ಜಾತಿ, ಪಕ್ಷ, ಪಂಥ ಎನ್ನುವ ಬೇಧ ಭಾವವಿಲ್ಲ. ಜನರ ಕಷ್ಟಕಾಲದಲ್ಲಿ ಅಧಿಕಾರಿಗಳು ತಕ್ಷಣ ಸ್ಪಂಧಿಸಬೇಕು. ಇದು ಮಾನವೀಯ ಸಮಸ್ಯೆಯಾಗಿದ್ದು ಸ್ಪಂಧಿಸದೇ ಇದ್ದರೆ ಹುಷಾರ್! ಇದು ಆರ್. ವಿ. ದೇಶಪಾಂಡೆಯವರು ಭಟ್ಕಳ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಯ ಕುರಿತು ಪುರಸಭಾ ಸಭಾ ಭವನದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಕಡಕ್ ಆದೇಶ.

water-crisis-bhatkal-despande20160425

ಸಭೆಯಲ್ಲಿ ಉಪಸ್ಥಿತರಿದ್ದ ಸಹಾಯಕ ಆಯುಕ್ತ ಚಿದಾನಂದ ವಠಾರೆ ಅವರು ತಾಲೂಕಿನಲ್ಲಿ 16 ಗ್ರಾಮ ಪಂಚಾಯತ್‍ಗಳಲ್ಲಿ 10ರಲ್ಲಿ ನೀರಿನ ಅಭಾವ ತಲೆದೋರಿದೆ, 52 ಮಜಿರೆಗಳಿಗೆ ಈಗಾಗಲೇ ನೀರು ಕೊಡುತ್ತಿದ್ದು ಇನ್ನಾವುದೇ ಕಡೆಯಿಂದ ದೂರು ಬಂದಿಲ್ಲ ಎಂದರು. ಕಳೆದ ಬಾರಿ ಶೇ.22 ರಿಂದ 30ರಷ್ಟು ಕಡಿಮೆ ಮಳೆ ಬಿದ್ದಿದ್ದು ಅಲ್ಲದೇ ಕೆಲವೆಡೆ ಉಪ್ಪು ನೀರು ಬಾವಿಯಲ್ಲಿ ನುಗ್ಗಿ ತೀವ್ರ ಸಮಸ್ಯೆಗೆ ಕಾರಣವಾಗಿದೆ ಎಂದೂ ಹೇಳಿದರು.
ಶಾಸಕ ಮಂಕಾಳ ವೈದ್ಯ ನೀರಿನ ಕೊರತೆ ಇರುವಲ್ಲಿ ಸರಿಯಾಗಿ ನೀರು ಕೊಡುತ್ತಿಲ್ಲ. ಕೆಲವೆಡೆಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಕೊಡುತ್ತಾರೆ. ನೀರಿನ ಸರಬರಾಜು ತಕ್ಷಣ ಸರಿಯಾಗಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಾಂಬಾರು ಮಂಡಳಿಯ ಅಧ್ಯಕ್ಷ ಹಾಗೂ ತಂಜೀಂ ಅಧ್ಯಕ್ಷ ಮುಝಮ್ಮಿಲ್ ಖಾಜಿಯಾ ಹಲವೆಡೆ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಗೌಸಿಯಾ ಸ್ಟ್ರೀಟ್‍ನಲ್ಲಿಯ ಪುರಸಭೆಯ ಯು.ಜಿ.ಡಿ. ಟ್ಯಾಂಕ್‍ನಿಂದಾಗಿ ಸುಮಾರು 200-300 ಬಾವಿಗಳು ಹಾಳಾಗಿದ್ದು ನೀರಿನ ಸಮಸ್ಯೆ ಹೆಚ್ಚಲು ಕಾರಣವಾಗಿದೆ. ತಕ್ಷಣ ಅಲ್ಲಿಯ ಯು.ಜಿ.ಡಿ. ವೆಲ್‍ಗೆ ಕಾಯಕಲ್ಪವಾಗಬೇಕು. ಶರಾಬಿ ಹೊಳೆಗೆ ಹೊಲಸು ನೀರು ಹೋಗುವುದನ್ನು ತಡೆಗಟ್ಟಬೇಕು. ಶರಾಬಿ ಹೊಳೆಯಲ್ಲಿ ಹೂಳು ತುಂಬಿದ್ದು ಕಳೆದ ಮಳೆಗಾದಲ್ಲಿ ಓರ್ವ ಯುವಕ ಬಿದ್ದು ಮೃತಪಟ್ಟಿದ್ದು ಇನ್ನೂ ತನಕ ಆತನ ದೇಹ ಪತ್ತೆಯಾಗಿಲ್ಲ ಎಂದರು.
ಕಡವಿನಕಟ್ಟೆ ಡ್ಯಾಂ ಸೈಟ್‍ನಲ್ಲಿ ಈ ಹಿಂದೆ ರಿಪೇರಿಗೆಂದು ಸುರಿದ ಸುಮಾರು 40 ಲೋಡ್ ಮಣ್ಣು ಹಾಗೇ ಇದ್ದು ಅದನ್ನು ಹೊರತೆಗೆದರೆ ಭಟ್ಕಳ ತಾಲೂಕಿಗೆ ಸಾಕಾಗುವಷ್ಟು ನೀರು ದೊರೆಯುತ್ತದೆ. ಇದರಿಂದ ನೀರಿನ ಸಮಸ್ಯೆ ಅರ್ಧ ಪರಿಹಾರವಾಗುತ್ತದೆ ಎಂದು ಪುರಸಭಾ ಸದಸ್ಯ ಕೆ.ಎಂ. ಅಷ್ಪಾಕ್ ಹೇಳಿದರು.
ಜನತೆಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಯಾವುದೇ ಅಧಿಕಾರಿಗಳು ಸ್ವಸ್ಥಾನ ಬಿಡಬಾರದು. ಮೇವು ಕಡಿಮೆಯಾಗುವ ಸಂಭವವಿದ್ದರೆ, ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮೊದಲೇ ಸಂಗ್ರಹಿಸಬೇಕು. ಸಮಸ್ಯೆ ಬರುವ ಮೊದಲೇ ಪರಿಹಾರ ಮಾಡಿಕೊಳ್ಳಲು ಸೂಚಿಸಿದರು. ಕುಡಿಯುವ ನೀರಿನ ಕಾಮಗಾರಿಗಳು ಎಲ್ಲೆಲ್ಲಿ ನಡೆಯುತ್ತಿದೆ ಅವುಗಳನ್ನು ಜೂ.15 ಒಳಗಾಗಿ ಪೂರೈಸಲು ಕ್ರಮ ಕೈಗೊಳ್ಳಬೇಕು. ನೀರಿನ ಅವಶ್ಯಕತೆಯಿರುವಲ್ಲಿ ಯಾವುದೇ ಖಾಸಗೀ ಬೋರ್‍ವೆಲ್‍ಗಳಲ್ಲಿರುವ ನೀರನ್ನು ಖರೀಧಿ ಮಾಡಿ ಜನತೆಗೆ ಒದಗಿಸುವಂತೆಯೂ ದೇಶಪಾಂಡೆ ಸೂಚಿಸಿದರು.
ಶಾಶಕ ಮಂಕಾಳ ವೈದ್ಯ, ಜಿ.ಪಂ. ಸದಸ್ಯರಾದ ಆಲ್ಬರ್ಟ ಡಿಕೋಸ್ತ, ಜಯಶ್ರೀ ಮೊಗೇರ, ಸಿಂಧು ಭಾಸ್ಕರ ನಾಯ್ಕ, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ್ ಘೋಷ್, ಜಿ.ಪಂ.ಕಾರ್ಯ ನಿರ್ವಹಣಾಧಿಕಾರಿ ರಾಮಪ್ರಸಾತ್ ಮನೋಹರ್ ಮುಂತಾದವರು ಉಪಸ್ಥಿತರಿದ್ದರು.


Spread the love