ಭಾರತೀಯ ಸಂವಿಧಾನವು ಪ್ರಪಂಚದಲ್ಲಿಯೇ ವಿಸ್ತೃತ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

Spread the love

ಭಾರತೀಯ ಸಂವಿಧಾನವು ಪ್ರಪಂಚದಲ್ಲಿಯೇ ವಿಸ್ತೃತ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಮಂಗಳೂರು:  ಭಾರತೀಯ ಸಂವಿಧಾನವು ಪ್ರಪಂಚದಲ್ಲಿಯೇ ವಿಸ್ತೃತವಾದ ಸಂವಿಧಾನ. ಭಾರತೀಯರಲ್ಲಿ ಸಮಾನತೆ, ಭ್ರಾತೃತ್ವ ಮತ್ತು ಸಮಾನ ಅವಕಾಶಗಳನ್ನು ಪ್ರತಿಪಾದಿಸುವ ಈ ಗ್ರಂಥವು ಭಾರತೀಯರ ಪ್ರಜಾಸತ್ತಾತ್ಮಕ ಧೋರಣೆಗಳಿಗೆ ಆಧಾರವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.

ಅವರು ಫೆ. 22 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‍ಮೆಂಟ್‍ನ ಎನ್‍ಎಸ್‍ಎಸ್ ಘಟಕದ ವತಿಯಿಂದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಭಾರತೀಯರಲ್ಲಿ ಸಮಾನತೆ, ಭ್ರಾತೃತ್ವ ಮತ್ತು ಸಮಾನ ಅವಕಾಶಗಳನ್ನು ಪ್ರತಿಪಾದಿಸುವ ಈ ಗ್ರಂಥವು ಭಾರತೀಯರ ಪ್ರಜಾಸತ್ತಾತ್ಮಕ ಧೋರಣೆಗಳಿಗೆ ಆಧಾರವಾಗಿದೆ. ಸಂವಿಧಾನವನ್ನು ಗೌರವಿಸಿ ಅದರ ಮೂಲ ಆಶಯಗಳನ್ನು ಅರಿತುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದರು.

ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಓದಿ ಅರ್ಥಮಾಡಿಕೊಂಡು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ಸಮಾನ ವಯಸ್ಕರಿಗೆ ತಲುಪುವಂತೆ ಪ್ರಚಾರ ಮಾಡಬೇಕೆಂದು ತಿಳಿಸಿದರು.

ಕಾಲೇಜಿನ ಮೈದಾನದಲ್ಲಿ ವೃತ್ತಾಕಾರದಲ್ಲಿ ಮಾನವ ಸರಪಳಿ ನಿರ್ಮಿಸಿದ ಸುಮಾರು ಸಾವಿರದ ಐನೂರು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.

ಕಾಲೇಜಿನ ವಿದ್ಯಾರ್ಥಿಗಳ ಬೈಕ್ ರ್ಯಾಲಿಯೊಡನೆ ಕಾಲೇಜಿನ ಆವರಣಕ್ಕೆ ಆಗಮಿಸಿದ ಟ್ಯಾಬ್ಲೋಗಳಲ್ಲಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಹಾರಾರ್ಪಣೆ ಮಾಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ನಾಡ ಗೀತೆ ಹಾಗೂ ಸಂವಿಧಾನ ಪೀಠಿಕೆ ಗೀತೆ ಹಾಡಿದರು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಲತಿ ಬಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಅಡಿಗ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎಸ್ ಇಂಜಗನೇರಿ ಉಪಸ್ಥಿತರಿದ್ದರು.

ಕಾಲೇಜಿನ ಸಿಬ್ಬಂದಿ ವರ್ಗದವರು ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಕಾಲೇಜಿನ ಎನ್‍ಎಸ್‍ಎಸ್ ಯೋಜನಾಧಿಕಾರಿ ಸ್ಮಿತ ಶೆಣೈ ನಿರೂಪಿಸಿದರು.


Spread the love