ಭಾರತ ಅತ್ಯಂತ‌ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆದಿದೆ

Spread the love

ಭಾರತ ಅತ್ಯಂತ‌ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆದಿದೆ

78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಎಸಿ ಕೆ. ಮಹೇಶ್ಚಂದ್ರ

ಕುಂದಾಪುರ: ತಮ್ಮ ಅರ್ಥಹೀನ ಆದರ್ಶವನ್ನು ಪಾಲಿಸುವ ಸಲುವಾಗಿ ಗುಲಾಮರಿಗಿಂತ‌ ಅತ್ಯಂತ‌ ಕೀಳಾಗಿ‌ ಭಾರತದ‌ ಪ್ರಜೆಗಳನ್ನು ನಡೆಸಿಕೊಂಡ ಬ್ರಿಟಿಷರ ದಾಸ್ಯದಿಂದ‌ ಹೊರಬಂದ‌ ದಿನವಿದು. ಇಂದು ನಮ್ಮ ದೇಶ ಸರಿಯಾದ ಅಭಿವೃದ್ದಿಯ ಹಾದಿಯಲ್ಲಿದ್ದು, ವಿಶ್ವದಲ್ಲೇ ಅತ್ಯಂತ‌ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆದು ನಿಂತಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ಕೆ. ಮಹೇಶ್ಚಂದ್ರ ಹೇಳಿದರು.

ಅವರು ತಾಲೂಕು ಆಡಳಿತದ ವತಿಯಿಂದ ಗುರುವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ಜರುಗಿದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಸಂದೇಶ ಸಾರಿದರು.

ಉಡುಪಿ‌ ಜಿಲ್ಲೆ‌ ಅನೇಕ‌ ಧರ್ಮಕೇಂದ್ರಗಳ ತವರೂರಾಗಿದೆ. ಕೃಷ್ಣಮಠದ ರಥಬೀದಿಯಲ್ಲಿ ಸ್ವಾತಂತ್ರ್ಯ ಹೋರಾಟದ ಸಭೆ, ನಾಟಕಗಳು ನಡೆದಿದ್ದು, ಮಹಾತ್ಮ‌ ಗಾಂಧೀಜಿಯೂ ಉಡುಪಿ‌,‌ ಕುಂದಾಪುರಕ್ಕೆ‌ ಬಂದಿದ್ದಾರೆ. ಸಾಹಿತಿ ಡಾ. ಶಿವರಾಮ‌ ಕಾರಂತರು ಸ್ವಾತಂತ್ರ್ಯ ಚಳವಳಿಗೆ ನೀಡಿದ‌ ಕೊಡುಗೆ ಅವಿಸ್ಮರಣೀಯ. ಭಾರತ ನಮ್ಮ‌ ತಾಯಿ ದೇಶ. ನಮ್ಮ‌ ದೇಶವನ್ನು ಮುನ್ನಡೆಸಲು ವಿಶ್ವದ ಅತ್ಯುತ್ತಮ‌ ರಾಷ್ಟ್ರವಾಗಿ ಶ್ರಮಿಸುವುದು ನಮ್ಮ ಜವಾಬ್ದಾರಿಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಪರಿಸ್ಥಿತಿ ಹೇಗಿತ್ತು, ಬಳಿಕ ಹೇಗೆ ಅಭಿವೃದ್ದಿಯಾಗಿದೆ ಎಂಬುವುದನ್ನು ಇಂದಿನ‌ ಯುವಕರು, ವಿದ್ಯಾರ್ಥಿಗಳು ತಿಳಿಯುವುದು ಅವಶ್ಯಕ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಮಹಾನ್ ಚೇತನಗಳನ್ನು ಸ್ಮರಿಸಿಕೊಳ್ಳಬೇಕು. ಸ್ವಾತಂತ್ರ್ಯ ಸಿಕ್ಕಿ ದೇಶ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಈ‌ ಹೊತ್ತಿಗೆ ಎಲ್ಲರಿಗೂ ಒಂದೇ ರೀತಿ ಸ್ವಾತಂತ್ರ್ಯ ಸಿಕ್ಕಿದೆಯಾ ಎನ್ನುವ ಜಿಜ್ಞಾಸೆ ನಮ್ಮೊಳಗಿದೆ. ಧರ್ಮ-ಜಾತಿಗಳ ಮಧ್ಯೆ ವೈಷಮ್ಯ ಹರಡಿ ಅನೇಕ‌ ಮಂದಿ ಅದರ ಲಾಭ ಪಡೆಯುತ್ತಿದ್ದಾರೆ. ಹೊಂದಾಣಿಕೆಯ ಮೂಲಕ ನಾವೆಲ್ಲರೂ ಒಗ್ಗಟ್ಟಾದಾಗ ನಮ್ಮ‌ ದೇಶ ಪ್ರಗತಿಯ ಪಥದತ್ತ ಸಾಗುತ್ತದೆ ಎಂದರು.

2023 ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಗರಿಷ್ಠ ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಹಾಗೂ ತಾಳೆ ಬೆಳೆ ಯೋಜನೆಯಡಿ ರೈತರಿಗೆ ತಾಳೆ ಗಿಡಗಳನ್ನು ವಿತರಿಸಲಾಯಿತು. ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ‌ ವಿತರಿಸಲಾಗುವ ಟಾಕಿಂಗ್‌ ಲ್ಯಾಪ್ ಟಾಪ್, ಹೊಲಿಗೆ ಯಂತ್ರ ಹಾಗೂ ಶ್ರವಣ ಸಾಧನಗಳನ್ನು ಹಸ್ತಾಂತರಿಸಲಾಯಿತು.

ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ತಾ.ಪಂ ಇಒ ಶಶಿಧರ ಕೆ.ಜಿ, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ವರ್ಣೇಕರ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಮೀನುಗಾರಿಕಾ ಇಲಾಖೆಯ ಸಹಾಯಕ‌ ನಿರ್ದೇಶಕಿ ಸುಮಲತಾ, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಸಂದೀಪ್ ಖಾರ್ವಿ, ಸಂತೋಷ್ ಶೆಟ್ಟಿ, ಪ್ರಭಾಕರ ವಿ, ಶ್ರೀಧರ ಶೇರಿಗಾರ್, ನಿತ್ಯಾನಂದ ಕೆ.ಜಿ, ವೀಣಾ ಭಾಸ್ಕರ್, ಪ್ರಭಾವತಿ ಶೆಟ್ಟಿ, ಶ್ವೇತಾ ಸಂತೋಷ್, ವನಿತಾ ಬಿಲ್ಲವ, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ ಉಪಸ್ಥಿತರಿದ್ದರು.

ತಹಸೀಲ್ದಾರ್ ಶೋಭಾಲಕ್ಷ್ಮೀ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶೋಭಾ ಶೆಟ್ಟಿ ವಂದಿಸಿದರು, ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಪಥಸಂಚಲನ:
ಪೊಲೀಸ್ ತಂಡ, ಗೃಹ ರಕ್ಷಕದಳ, ಕುಂದಾಪುರದ ವಿವಿಧ ಶಾಲೆಗಳ ಎನ್.ಸಿ.ಸಿ, ಸ್ಕೌಟ್-ಗೈಡ್ಸ್ ತಂಡಗಳು ಹಾಗೂ ಪೌರ ಕಾರ್ಮಿಕರ ತಂಡ ಪಥಸಂಚಲನದಲ್ಲಿ ಪಾಲ್ಗೊಂಡರು. ಗಂಗೊಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಬಸವರಾಜ್ ಕನಶೆಟ್ಟಿ ಪಥಸಂಚಲನದ ನೇತೃತ್ವ ವಹಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.


Spread the love
Subscribe
Notify of

0 Comments
Inline Feedbacks
View all comments