ಭೂಮಿಯ ದಾಹ ತಣಿಸುವ ಪ್ರಯತ್ನದಲ್ಲಿ ಜೋಸೆಫ್ ಜಿ ಎಮ್ ರೆಬೆಲ್ಲೊ

Spread the love

ಭೂಮಿಯ ದಾಹ ತಣಿಸುವ ಪ್ರಯತ್ನದಲ್ಲಿ ಜೋಸೆಫ್ ರೆಬೆಲ್ಲೊ

ಮಾರ್ಚ್ 22 ರ ವಿಶ್ವ ಜಲ ದಿನ ಪ್ರಯುಕ್ತ ಲೇಖನ


ಉಡುಪಿ:
ಬಾಯಾರಿದ್ದೇನೆ, ನೀರುಣಿಸುವಿರಾ ಎಂಬ ಭೂ ಮಾತೆಯ ದಾಹಕ್ಕೆ, ಖಂಡಿತವಾಗಿಯೂ ನಿನಗೆ ನೀರುಣಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ದೃಡ ನಿರ್ಧಾರದೊಂದಿಗೆ ಕಾರ್ಯರೂಪದಲ್ಲ್ಲಿ ತೊಡಗಿರುವ ಉಡುಪಿಯ ಕಲ್ಯಾಣಪುರದ ಯುವಕ ಜೋಸೆಫ್ ಜಿ ಎಮ್ ರೆಬೆಲ್ಲೊ.

ಪ್ರಕೃತಿಯ ಬಗ್ಗೆ ತುಂಬು ಕಾಳಜಿ ಹೊಂದಿದ ಇವರು ಕಳೆದ 5 ವರುಷಗಳಿಂದ ಪ್ರಕೃತಿಯ ಬಗ್ಗೆ ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದವರು. ತನ್ನ ಆರೋಗ್ಯದ ಮೇಲೆ ಅತಿಯಾದ ಕಾಳಜಿ ಹೊಂದಿರುವ ಮನುಷ್ಯ, ತಾನು ಆಶ್ರಯಿಸಿಕೊಂಡಿರುವ ಈ ಭೂಮಿಯನ್ನು, ಸುಂದರ ಪ್ರಕೃತಿಯ ಆರೋಗ್ಯವನ್ನು, ವಾತಾವರಣದ ಆರೈಕೆಯನ್ನು, ಜೀವಜಲದ ಸಂರ್ಷಣೆಯನ್ನು ಕಾಪಾಡುವುದು ಕೂಡ ಮನುಷ್ಯನ ಜವಾಬ್ದಾರಿಯಲ್ಲವೇ? ಎಂಬ ಕಲ್ಪನೆ ಹೊಂದಿರುವ ಇವರು ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇತರೆಡೆ ಕೂಡಾ ವನಮಹೋತ್ಸವ ಕಾರ್ಯಕ್ರಮಗಳು, ಜಲ ಸಂರಕ್ಷಣಾ ಕಾರ್ಯಕ್ರಮಗಳು, ಸ್ವಚ್ಛತೆಯ ಬಗ್ಗೆ ಘನ ತ್ಯಾಜ್ಯ, ದ್ರವ ತ್ಯಾಜ್ಯ ಮತ್ತು ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯದ ವಿಲೆವಾರಿಯ ಬಗ್ಗೆ ಪರಿಸರ ಸಂರಕ್ಷಣೆಯ ವಿಚಾರವಾಗಿ ವಿಬಿನ್ನ ಶೈಲಿಯಲ್ಲಿ ಜಾಗ್ರತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡವರು.

ಇತ್ತಿಚಿಗಿನ ದಿನಗಳಲ್ಲಿ ಭರದಿಂದ ಸಾಗುತ್ತಿರುವ ಇವರ ಸೇವೆ ಅಂದರೆ, ತೆರೆದ ಬಾವಿಗೆ, ನಿರ್ಜಿವ ಹಾಗೂ ಜೀವಂತ ಕೊಳವೆ ಬಾವಿಗೆ ಮಳೆ ನೀರನ್ನು ಇಳಿಸುವ ವಿಧಾನಗಳನ್ನು ತಿಳಿಸುತ್ತಿದ್ದಾರೆ. ಜಲ ಜಾಗೃತಿ ಎಂಬ ಶಿರ್ಷಿಕೆಯಡಿಯಲ್ಲಿ ಕಳೆದ ಕೇವಲ ಒಂದೇ ವರುಷದಲ್ಲಿ ಸುಮಾರು 150ಕ್ಕೂ ಹೆಚ್ಚು ಕಡೆಗಳಲ್ಲಿ 8ನೇ ತರಗತಿ ಮೇಲ್ಪಟ್ಟು ಶಾಲಾ ಮತ್ತು ಕಾಲೇಜು ಪದವಿ ವಿದ್ಯಾರ್ಥಿಗಳಿಗೆ, ಎಮ್.ಎಸ್.ಡಬ್ಲ್ಯೂ ವಿದ್ಯಾರ್ಥೀಗಳಿಗೆ ನರ್ಸಿಂಗ್ ವಿದ್ಯಾರ್ಥಿಗಳಿಗೆ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, ಸ್ವಸಹಾಯ ಸಂಘಗಳಿಗೆ, ಪ್ರತಿಷ್ಟಿತ ಸಂಘ ಸಂಸ್ಥೆಗಳಿಗೆ, ಗ್ರಾಮ ಪಂಚಾಯತ್ ಸಭೆಗಳಲ್ಲಿ, ಪೊಲೀಸ್ ಸಿಬ್ಬಂದಿಗಳಿಗೆ, ವಸತಿ ಸಮುಚ್ಛಯ ಇನ್ನಿತರಕಡೆಗಳಲ್ಲಿ ಈ ಜಗತ್ತಿಗೆ ಆನಿವಾರ್ಯವಾಗಿರುವ ನಿಸರ್ಗದ ಉಚಿತ ಕೊಡುಗೆಯಾಗಿರತಕ್ಕಂತಹ ಮತ್ತು ಅತ್ಯಂತ ಸುಲಭವಾಗಿ ನಮಗೆ ಲಭಿಸುತ್ತಿರುವಂತಹ ಮಳೆ ನೀರನ್ನು ವ್ಯರ್ಥವಾಗಿ ಹರಿಯಲು ಬಿಡದೆ ಸಂಪೂರ್ಣ ಸದ್ಬಳಕೆ ಮಾಡಬಹುದು ಎಂಬುವುದಾಗಿ ಪಿಪಿಟಿ ದೃಶ್ಯ ಶ್ರಾವ್ಯದ ಮೂಲಕ ಪ್ರಭಾವಶಾಲಿಯಾದ ಮಾಹಿತಿ ಕಾರ್ಯಾಗಾರವನ್ನು ನಡೆಸಿ ಪ್ರೇರೇಪಿಸುತ್ತಾರೆ.

ಭೂಗರ್ಭ ಶಾಸ್ತ್ರಜ, ಜಲ ತಜÐರೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಹೊಸದಾಗಿ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸುತ್ತಾರೆ. ತೆರೆದ ಬಾವಿಗೆ ಮತ್ತು ಕೊಳವೆ ಬಾವಿಗೆ ಮಳೆನೀರನ್ನು ಇಂಗಿಸುವ ಘಟಕಗಳನ್ನು ಇವರು ಖುದ್ದಾಗಿ ನಿರ್ಮಿಸಿರುತ್ತಾರೆ ಹಾಗೂ ಹೊಸದಾಗಿ ನಿರ್ಮಿಸುವವರಿಗೆ ಮಾರ್ಗದರ್ಶನ ಮಾಡುತ್ತಾರೆ.

ಹೌದು, ದೇವರು ಈ ಪ್ರಕೃತಿಗೆ ಅಗತ್ಯವಿರುವ ವಾತಾವರಣ, ಕಾಲ ಕಾಲಕ್ಕೆ ಮಳೆ ಬೆಳೆ ಎಲ್ಲವನ್ನೂ ಈಗ ನೀಡುತ್ತಲಿದ್ದರೂ, ಮನುಷ್ಯ ಅದರ ಸರಿಯಾದ ಪರಿಪಾಲನೆ ಮಾಡದೆ, ನೀರಿನ ದುರ್ಬಳಕೆಯನ್ನು ಮಾಡುತ್ತಾ ಮಳೆಯ ಬೇಡಿಕೆಗಾಗಿ ದೇವರನ್ನು ಕುರಿತು ಪ್ರಾರ್ಥನೆ ಸಲ್ಲಿಸುವುದರಲ್ಲಿ ಅರ್ಥವಿಲ್ಲ ಎನ್ನಬಹುದು.

ನಮ್ಮ ನಮ್ಮ ಹಿತ್ತಲಲ್ಲಿ, ಮನೆಯ ಛಾವಣಿಯಲ್ಲಿ ಮಳೆಗಾಲದಲ್ಲಿ ಬಿದ್ದಂತಹ ಮಳೆನೀರು, ನಮ್ಮ ಹಿತ್ತಲ ಆವರಣದಿಂದ ಚರಂಡಿಗೆ, ನಂತರ ತೋಡು, ಹಳ್ಳ, ನದಿಯ ಮೂಲಕ ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿರುವುದು ನಮಗೆಲ್ಲರಿಗೂ ತೀಳಿದಿರುವ ವಿಷಯ. ಪ್ರತೀ ವ್ಯಕ್ತಿ, ಖಾಸಗಿ ಮತ್ತು ಧಾರ್ಮಿಕ ಹಾಗೂ ಇನ್ನಿತರ ಸಂಘ ಸಂಸ್ಥೆಗಳು, ಕಟ್ಟಡ ನಿರ್ಮಾಣಗಾರರು, ವಸತಿ ಸಂಕೀರ್ಣ ನಿರ್ಮಿಸುವವರು, ಹೊಸದಾಗಿ ಕೃಷಿ ಆರಂಭಿಸುವವರು, ರಿಯಲ್ ಎಸ್ಟೇಟ್ ಉದ್ಯಮದವರು, ಕೈಗಾರಿಕೆ ಮತ್ತು ಕಾರ್ಖಾನೆ, ಶಾಲಾ ಕಾಲೇಜುಗಳಲ್ಲಿ, ಇನ್ನು ಮುಂದೆಯಾದರೂ ಈ ವಿಷಯವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಕೇವಲ ಜಾಗೃತಿ ಕಾರ್ಯಕ್ರಮಗಳನ್ನು ಸಾಂಕೇತಿಕವಾಗಿ ಮಾತ್ರ ಮಾಡದೆ, ಗಿಡ ಮರಗಳನ್ನು ಬೆಳೆಸಲು ಮತ್ತು ಮಳೆ ನೀರಿನ ಸಂಗ್ರಹಣೆಯ ಅಥವ ನೀರು ಇಂಗಿಸುವಿಕೆ ವ್ಯವಸ್ಥೆಯನ್ನು ತಮ್ಮ ಕಟ್ಟಡಗಳಲ್ಲಿ ಅಥವ ತಮ್ಮ ಜಾಗ ಮತ್ತು ತೋಟಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕಾದ ಕೆಲಸ/ಕಾರ್ಯವನ್ನು ಈ ಕೂಡಲೇ ಆರಂಭಿಸಬೇಕಿದೆ. ಒಂದು ವೇಳೆ ನೀರಿನ ಮಿತವ್ಯಯ ಬಳಕೆ ನೀರಿನ ಉಳಿಸುವಿಕೆ ಭೂಮಿಯಲ್ಲಿ ನೀರು ಇಂಗಿಸಿ ಅಂತರ್ಜಲವನ್ನು ವೃದ್ಧಿಸಿ, ನೀರಿನ ಸಮಸ್ಯೆಗೆ ಸುಲಭ ಪರಿಹಾರದ ಪ್ರಕ್ರಿಯೆ ಈ ಕೂಡಲೆ ಆರಂಭಿಸದೇ ಹೋದಲ್ಲಿ ಮುಂದೆ ಅಂತರ್ಜಲ ಸಂಪತ್ತಿಗಾಗುವ ಬಹು ದೊಡ್ಡ ಅಪಾಯವನ್ನೇ ನಾವು ಎದುರಿಸಬೇಕಾದೀತು ಎಂದನ್ನುತ್ತಾರೆ ಜೋಸೆಫ್ ರೆಬೆಲ್ಲೊ.

ಮನುಷ್ಯ ಹಸಿದಾಗಲೇ ಆಹಾರದ ಮಹತ್ವ ತಿಳಿಯುವುದು, ಬಾಯಾರಿದಾಗಲೇ ನೀರಿನ ಮಹತ್ವ ಅರಿವಾಗುವುದು. ಈಗ ಬೇಸಿಗೆ ಸಮಯ, ಎಲ್ಲೆಂದರಲ್ಲಿ ನೀರಿನ ಸಮಸ್ಯೆ. ಮಳೆ ನೀರನ್ನು ಇಂಗಿಸುವ ಸುವ್ಯವಸ್ಥಿತ ವಿಧಾನದಲ್ಲಿ ಜಲಮರುಪೂರಣ ಘಟಕಗಳನ್ನು ನಿರ್ಮಿಸಿ ಮಳೆ ನೀರನ್ನು ಭೂಗರ್ಭದಲ್ಲಿ ಸಂಗ್ರಹಿಸಿ ಅಂತರ್ಜಲ ಹೆಚ್ಚಿಸಲ್ಲಿ ಪ್ರೇರೇಪಿಸುವಂತಹ ಮತ್ತು ಮನಮುಟ್ಟುವಂತಹ ಅದ್ಬುತವಾದ ಪಿಪಿಟಿ ದ್ರಶ್ಯ ಶ್ರಾವ್ಯಗಳೊಂದಿಗೆ ಪ್ರಭಾವಾತ್ಮಕವಾದ ಮಾಹಿತಿಯನ್ನು ಅಪೇಕ್ಷಿಸುವವರು ಜೋಸೆಫ್ ಜಿ ಎಮ್ ರೆಬೆಲ್ಲೊ ರವರನ್ನು 9964100520 ಸಂಪರ್ಕಿಸಬಹುದು.

ಬರಹ: ಶಿವಕುಮಾರ್, ವಾರ್ತಾಇಲಾಖೆ, ಉಡುಪಿ


Spread the love