ಮಂಗಳೂರಿನಲ್ಲಿ ವಸತಿರಹಿತ ನಗರವಾಸಿ ಬಡವರಿಗೆ ಲಾಟರಿ ಮೂಲಕ ಫ್ಲ್ಯಾಟ್ ಹಂಚಿಕೆ ಪ್ರಕ್ರಿಯೆ ಚಾಲನೆ

Spread the love

ಮಂಗಳೂರಿನಲ್ಲಿ ವಸತಿರಹಿತ ನಗರವಾಸಿ ಬಡವರಿಗೆ ಲಾಟರಿ ಮೂಲಕ ಫ್ಲ್ಯಾಟ್ ಹಂಚಿಕೆ ಪ್ರಕ್ರಿಯೆ ಚಾಲನೆ

ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಮಂಗಳೂರು ಪಾಲಿಕೆ ಮತ್ತು ಫಲಾನುಭವಿಗಳ ಮೊತ್ತದಿಂದ ವಸತಿ ರಹಿತ ನಗರವಾಸಿ ಬಡವರಿಗೆ ಮೊದಲ ಬಾರಿಗೆ ಲಾಟರಿ ಆಯ್ಕೆ ಮೂಲಕ ಕೊಡಲು ಉದ್ದೇಶಿಸಲಾಗಿರುವ ಫ್ಲ್ಯಾಟ್ ಅಪಾರ್ಟ್ ಮೆಂಟ್ ಗಳ ಹಂಚಿಕೆ ಪ್ರಕ್ರಿಯೆಯು ಮಂಗಳವಾರ ನಗರದ ಪುರಭವನದಲ್ಲಿ ನಡೆಯಿತು.

ಯೋಜನೆಯ ಮೊದಲ ಹಂವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನಗರಾಶ್ರಯ ಸಮಿತಿ ಆಶ್ರಯದಲ್ಲಿ ಶಕ್ತಿನಗರ ಸಮೀಪದ ರಾಜೀವ ನಗರದ 10 ಎಕರೆ ಪ್ರದೇಶದಲ್ಲಿ ಜಿ+3 ಮಾದರಿಯಲ್ಲಿ ಸುಮಾರು 930 ಮನೆಗಳನ್ನು ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಮಂಗಳವಾರಿ ಯಾರಿಗೆ ಯಾವ ಫ್ಲ್ಯಾಟಿನ ಯಾವ ಬ್ಲಾಕಿನಲ್ಲಿ ಮನೆ ಎಂಬುದನ್ನು ಲಾಟರಿ ಎತ್ತಿ ಹಂಚಿಕೆ ಮಾಡಲಾಯಿತು.

ಈ ಸಂದರ್ಭ ಶಾಸಕ ಜೆ ಆರ್ ಲೋಬೊ ಮಾತನಾಡಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 3000ಕ್ಕಿಂತಲೂ ಜಾಸ್ತಿ ಆಶ್ರಯ ಮನೆ ನಿವೇಶನಗಳಿಗೆ ಅರ್ಜಿಗಳು ಬಾಕಿ ಇದ್ದು, ಈ ಬಡ ಜನರ ವಾಸಕ್ಕೆ ಸೂರು ಮಾಡಿಕೊಡಬೇಕೆಂಬ ಹಂಬಲ ನಾನೂ ಶಾಸಕನಾಗಿನಿಂದಲೂ ಇದ್ದಿತ್ತು. ಈ ಹಿಂದೆ ನಾನು ಮಹಾನಗರಪಾಲಿಕೆಗೆ ಆಯುಕ್ತನಾಗಿದ್ದ ಸಮಯದಲ್ಲಿ ಅಂದರೆ ಸುಮಾರು 2001ನೇ ಇಸವಿಯಲ್ಲಿ ಹಾಗೂ ಅದರ ಹಿಂದೆ ಕೂಡ ನಮ್ಮ ಮಂಗಳೂರಿನಲ್ಲಿ ಬಡ ಜನರಿಗೆ ಹೆಚ್ಚಿನ ಮನೆ ನಿವೇಶನ ಕೊಡಲಿಲ್ಲ ಆಗ ಬಾಕಿ ಇದ್ದ ಅರ್ಜಿಗಳಿಗೆ ಮನೆ ನಿವೇಶನ ಕೊಡಬೇಕೆಂಬ ಕಾರಣದಿಂದ ನಮ್ಮ ಶಕ್ತಿ ನಗರದಲ್ಲಿ ಒಂದು ಖಾಸಗಿ ಜನರ ಕುಮ್ಕಿ ಜಾಗವನ್ನು ನಾವು ಸ್ವಾಧೀನ ಮಾಡಿ ಸುಮಾರು 250 ಆಶ್ರಯ ಮನೆಗಳನ್ನು ನಾವು ಅಲ್ಲಿ ಮಂಜೂರು ಮಾಡಿ ವಿತರಣೆ ಮಾಡಿದ್ದೇವು. ನಂತರ ನಾನು ಅದಕ್ಕೆ ಆಶ್ರಯ ಮನೆಗಳನ್ನು ಕೊಟ್ಟೆ, ಆ ಕಾರಣದಿಂದ ಇವತ್ತಿಗೆ ಅಲ್ಲಿ ರಾಜೀವ್ ಕಾಲೋನಿ ಅಂತ ಒಂದು ಕಾಲೋನಿ ತಲೆ ಎತ್ತಲಿಕ್ಕೆ ಕಾರಣವಾಯಿತು. ನಂತರ ನಾನು ಆಯುಕ್ತನಾಗಿ ಅಧಿಕಾರ ಕೊಟ್ಟ ನಂತರ ಇವರೆಗೂ ಕೂಡ ನಮ್ಮ ಮಂಗಳೂರು ನಗರದಲ್ಲಿ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ಕೊಡಲಿಕ್ಕೆ ಹಾಗೂ ಆಶ್ರಯ ಮನೆಗಳನ್ನು ಮಾಡಲಿಕ್ಕೆ ಸಾಧ್ಯವಾಗಿರಲಿಲ್ಲ. ನಾನು ಶಾಸಕನಾಗಿದ್ದಾಗ 3000ಕ್ಕಿಂತಲೂ ಜಾಸ್ತಿ ಅರ್ಜಿಗಳು ಬಾಕಿ ಇರುವುದನ್ನು ಕಂಡು ಈ ಬಡವರಿಗೆ ಎಲ್ಲಿಯಾದರೂ ನಾವು ಮನೆಗಳನ್ನು ಕೊಡಬೇಕು, ನಿವೇಶನಗಳನ್ನು ಕೊಡಬೇಕು ಅಂತ ಹುಡುಕಾಡಿದಾಗ ಶಕ್ತಿನಗರದಲ್ಲಿ ರಾಜೀವ್ ಕಾಲೋನಿಯ ಪಕ್ಕಕ್ಕೆ ಸುಮಾರು 10 ಎಕರೆ ಜಾಗವನ್ನು ಗುರುತಿಸಲಿಕ್ಕೆ ಅವಕಾಶ ಸಿಕ್ಕಿತ್ತು. ಆ 10 ಎಕರೆ ಜಾಗದಲ್ಲಿ ನಿವೇಶನಗಳನ್ನು ಮಾಡಿದ್ದೇ ಆದರೆ ಹೆಚ್ಚೆಂದರೆ 200ರಿಂದ 250 ನಿವೇಶನಗಳನ್ನು ಕೊಡಬಹುದು. ಅದರ ನಂತರ ಅದಕ್ಕೆ ಮೂಲಭೂತ ಸೌಕರ್ಯ ಇತ್ಯಾದಿಗಳನ್ನು ಕೊಡಲಿಕ್ಕೆ ಕಷ್ಟವಾದರೆ ಮುಂದೆ ಎಲ್ಲಾ ಮನೆಗಳು ಸ್ಲಂ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ.

ಇದಕ್ಕಾಗಿ ಕಡಿಮೆ ಜಾಗದಲ್ಲಿ ಹೆಚ್ಚಿನ ಜನರಿಗೆ ಮನೆಗಳನ್ನು ಕೊಡುವ ಉದ್ದೇಶದಿಂದ ಬಹುಮಹಡಿಯ ಪ್ಲಾಟ್ ಸಿಸ್ಟಮ್‍ನಲ್ಲಿ ಈ ಆಶ್ರಯ ಯೋಜನೆಯನ್ನು ನಾವು ಮಾಡಬೇಕೆಂಬ ಚಿಂತನೆಯನ್ನು ನಾವು ಮಾಡಿದೆವು. ಇದಕ್ಕೆ ಒಂದು ವಿನೂತನ ಯೋಜನೆಯನ್ನು ಕೂಡ ನಾವು ರೂಪಿಸಿದೆವು. ಇದು ನಮ್ಮ ಕರ್ನಾಟಕ ರಾಜ್ಯದಲ್ಲಿ ಆಶ್ರಯ ಯೋಜನೆಗೆ ಮೊತ್ತ ಮೊದಲಿಗೆ ಬಹುಮಹಡಿಯ ಪ್ಲಾಟ್ ಮಾದರಿಯಲ್ಲಿ ಮಾಡುವಂತ ಯೋಜನೆ. ಇದರ ಪ್ರಕ್ರಿಯೆಯನ್ನು ಕಳೆದ ಎರಡುವರೆ ವರ್ಷಗಳಿಂದ ನಾನು ಮಾಡಿಸುತ್ತಿದ್ದೆ. ಕೇಂದ್ರ ಸರ್ಕಾರದ ಮಂಜುರಾತಿ, ರಾಜ್ಯ ಸರ್ಕಾರದ ಮಂಜೂರಾತಿ ಹಾಗೂ ಇದಕ್ಕೆ ಹಣಕಾಸಿನ ಪೂರೈಸುವಿಕೆ ಸೇರಿದಂತೆ ಎಲ್ಲಾ ವಿಷಯಗಳ ಮೇಲೆ ಚಿಂತನೆ ಮಾಡುವುದಕ್ಕೆ ಇಷ್ಟು ಸಮಯದ ವರೆಗೆ ಈ ಪ್ರಕ್ರಿಯೆ ನಡೆಸಿಕೊಂಡು ಬರಬೇಕಾಯಿತು. ಇವಾಗ ಈ ಇಡಿ ಯೋಜನೆಯಲ್ಲಿ ನಾವು 5 ಲಕ್ಷ ರೂಪಾಯಿಯಲ್ಲಿ ಬಡವರಿಗೆ ಸೂರು ಕೊಡುವ ಆಶ್ರಯ ಯೋಜನೆ ಮಂಜೂರಾಗಿದೆ. 5 ಲಕ್ಷ ರೂಪಾಯಿ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ ರಾಜ್ಯ ಸರ್ಕಾರದಿಂದ ರೂ. 1.80 ಲಕ್ಷ (ಒಂದು ಲಕ್ಷ ಎಂಬತ್ತು ಸಾವಿರ ರೂಪಾಯಿ) ಕೇಂದ್ರ ಸರ್ಕಾರದಿಂದ ರೂ. 1.50 ಲಕ್ಷ (ಒಂದು ಲಕ್ಷ ಐವತ್ತು ಸಾವಿರ ರೂಪಾಯಿ) ಮತ್ತು ಮಹಾನಗರಪಾಲಿಕೆಯಿಂದ 1 ಲಕ್ಷ (ಒಂದು ಲಕ್ಷ ರೂಪಾಯಿ) ಇದಲ್ಲದೇ ಬ್ಯಾಂಕಿನಿಂದ ಅಥವಾ ಫಲಾನುಭವಿಗಳಿಂದ ರೂ. 70 ಸಾವಿರಗಳು. ಈ ರೀತಿ ಒಟ್ಟು ರೂ. 5.00 ಲಕ್ಷ ರೂಪಾಯಿಯ ಯೋಜನೆಯಾಗಿದೆ. ಇತರರಿಗೆ ರಾಜ್ಯ ಸರ್ಕಾರದಿಂದ ರೂ. 1.20 ಲಕ್ಷ, (ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ) ಕೇಂದ್ರ ಸರ್ಕಾರದಿಂದ ರೂ. 1.50 ಲಕ್ಷ (ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ) ಹಾಗೂ ಮಹಾನಗರಪಾಲಿಕೆಯಿಂದ ರೂ. 70 ಸಾವಿರ ರೂಪಾಯಿ ಹಾಗೂ ಅರ್ಜಿದಾರರು ರೂ. 1.60 ಸಾವಿರ ರೂಪಾಯಿ ಹಾಕಬೇಕಾಗುತ್ತದೆ ಹೀಗೆ ರೂ. 5 ಲಕ್ಷ ರೂಪಾಯಿಯ ಯೋಜನಾ ವೆಚ್ಚವಾಗಿದೆ.

ಈ ಯೋಜನೆಯಲ್ಲಿ ಮನೆ ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಜಾಗ, ಎಲ್ಲವನ್ನು ಒಟ್ಟಿಗೆ ಹಾಕಿದರೆ ಒಬ್ಬ ಅರ್ಜಿದಾರರಿಗೆ ಒಟ್ಟಿಗೆ ಸುಮಾರು ರೂ. 20 ಲಕ್ಷ ಮೌಲ್ಯದ ಆಸ್ತಿ ದೊರಕುವಂತಾಗಿದೆ. ಹಾಗೂ 6 ರಾಷ್ಟ್ರೀಕೃತ ಬ್ಯಾಂಕಿನವರೊಂದಿಗೆ ನಾವು ಮಾತನಾಡಿ, ಅವರ ಒಪ್ಪಿಗೆಯನ್ನು ಪಡೆದು ಅವರಿಂದ ಈಗಾಗಲೇ ಸಾಲವನ್ನು ಕೊಡುವಂತ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ. ಇವತ್ತು 900 ಮನೆಗಳನ್ನು ಕೂಡ ವಿತರಣೆ ಮಾಡಿ ವಿತರಣಾ ನಂಬರನ್ನು ಕೊಟ್ಟಿದ್ದೇವೆ. ನಂತರ ಪ್ರತಿಯೊಂದು ಬ್ಯಾಂಕಿಗೆ ಸುಮಾರು 200 ಮನೆಗಳನ್ನು ವಿತರಣೆ ಮಾಡುತ್ತೇವೆ. 6 ರಾಷ್ಟ್ರೀಕೃತ ಬ್ಯಾಂಕಿನವರಿಗೆ ಬ್ಲಾಕ್ ಪ್ರಕಾರ ನಾವು ನೀಡುತ್ತೇವೆ, ಅವರು ಅದಕ್ಕೆ ಸಾಲವನ್ನು ನೀಡುತ್ತಾರೆ ಅರ್ಜಿದಾರರು ಅದನ್ನು ಭರಿಸಬೇಕಾಗುತ್ತದೆ. ಈ ಇಡಿ ಯೋಜನೆಗೆ ನಾವು ಟೆಂಡರ್‍ನ್ನು ಕರೆದಿದ್ದೇವೆ.  ಇದು ಒಟ್ಟು ರೂ. 70 ಕೋಟಿಯ ಯೋಜನೆಯಾಗಿದ್ದು ಗುತ್ತಿಗೆದಾರರನ್ನು ನಿರ್ಧರಿಸಲಾಗಿದೆ. ಇನ್ನೂ 15 ತಿಂಗಳಿನಲ್ಲಿ ಈ ಯೋಜನೆ ಸಂಪೂರ್ಣಗೊಂಡು ಫಲಾನುಭವಿಗಳಿಗೆ ಮನೆಯ ಕೀಲಿಕೈಯನ್ನು ನೀಡುವ ಆತ್ಮವಿಶ್ವಾಸ ನಮಗಿದೆ. ಎಲ್ಲಾ ವಿವಿಧ ಹಂತಗಳನ್ನು ನಾವು ದಾಟಿ ಇವತ್ತು ಅಂತಿಮ ಹಂತಕ್ಕೆ ಬಂದಿದೆ. ಇನ್ನೂ ಕೇವಲ ಕಾಮಗಾರಿಗಳನ್ನು ಕೈಗೊಳ್ಳುವುದು ಹಾಗೂ ಇದಕ್ಕೆ ಬೇಕಾದ ಹಣದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಇದು ಆಗಿದ್ದೇ ಆದರೆ ನಮ್ಮ ರಾಜ್ಯದಲ್ಲೇ ಒಂದು ಪ್ರಥಮ ಯೋಜನೆ ಮಾಡಿದ್ದೇನೆ ಎಂಬ ಒಂದು ಸಂತೋಷ ಜೊತೆಯಲ್ಲಿ 930 ಅರ್ಜಿದಾರರಾಗಿರುವ ಬಡವರಿಗೆ ಮನೆ ಕೊಟ್ಟಂತಹ ಸಂತೋಷ ನಮ್ಮದಾಗುತ್ತದೆ. ಅಲ್ಲದೇ ಇನ್ನೂ ಕೂಡ 2500 ದಿಂದ 3500 ಅರ್ಜಿಗಳು ಇದ್ದು, ಈ ಕಾಮಗಾರಿ ಆದಾಕ್ಷಣ ಇನ್ನೊಂದು ಯೋಜನೆಗೆ ನಾನು ಚಾಲನೆ ನೀಡುತ್ತೇನೆ.

ಈ ಇನ್ನೊಂದು ಯೋಜನೆಯಲ್ಲಿ 1500 ಮನೆಗಳನ್ನು ಕಟ್ಟಬೇಕೆಂಬ ಆಶೆ ನನಗಿದೆ. ಆ ಯೋಜನೆಗೂ ಕೂಡ ಪ್ರಕ್ರಿಯೆಯನ್ನು ನಾನು ಆರಂಭ ಮಾಡುತ್ತೇನೆ.  ಇದರಿಂದ 2500 ಮನೆಗಳನ್ನು ಮಂಗಳೂರಿನ ಜನತೆಗೆ ಕೊಟ್ಟಂತಾಗುತ್ತದೆ. ಅಷ್ಟೋಂದು ಸಂಖ್ಯೆಯ ಮನೆಗಳನ್ನು ಅಂದರೆ ನಮ್ಮ ಎರಡನೇ ದರ್ಜೆ ಟೈರ್ ಟೂ ಸಿಟೀಸ್‍ಗಳ ಪೈಕಿ ಬೇರೆಲ್ಲಿ ಇಂತಹ ದೊಡ್ಡ ಗಾತ್ರದ ಯೋಜನೆಗಳು ಇರಲಿಕ್ಕಿಲ್ಲ ಅಂತ ನನ್ನ ನಂಬಿಕೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಯ  ಉನ್ನತ ಅಧಿಕಾರಿಗಳು ನನಗೆ ಬಹಳ ಸಹಕಾರ ನೀಡಿದ್ದಾರೆ. ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳಿಗೂ ಕೂಡ ಸಹಕಾರ ನೀಡಿದ್ದಾರೆ ಎಂದರು.

ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಮೇಯರ್ ಕವಿತಾ ಸನೀಲ್, ಮನಾಪಾ ಮುಖ್ಯ ಸಚೇತಕ ಎಂ ಶಶಿಧರ್ ಹೆಗ್ಡೆ ಹಾಗೂ ಇತರರು ಉಪಸ್ತಿತರಿದ್ದರು.


Spread the love