ಮಂಗಳೂರಿನಲ್ಲಿ ಸಿಸಿಬಿ ಬೃಹತ್ ದಾಳಿ – ಆರು ಮಂದಿ ಬಂಧನ, ಎಂಡಿಎಂಎ, ಕೊಕೇನ್ ವಶ
ಮಂಗಳೂರು: ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲವನ್ನು ಪತ್ತೆ ಹಚ್ಚಿದ ಸಿಸಿಬಿ ಘಟಕದ ಪೊಲೀಸರು ಭಾನುವಾರ (ಸೆಪ್ಟೆಂಬರ್ 21) ಮತ್ತು ಸೋಮವಾರ ನಡೆಸಿದ ದಾಳಿಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ₹24 ಲಕ್ಷಕ್ಕೂ ಹೆಚ್ಚು ಮೌಲ್ಯದ ಎಂಡಿಎಂಎ ಹಾಗೂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಚಿರಾಗ್ ಸನಿಲ್ – ಗಾಂಧಿನಗರ, ಕಾವೂರು, ಆಲ್ವಿನ್ ಕ್ಲಿಂಟನ್ ಡಿ’ಸೋಜಾ – ಅಶೋಕನಗರ, ಅಬ್ದುಲ್ ಕರೀಂ ಇ.ಕೆ (52) – ಮಲ್ಲಾಪುರಂ ಜಿಲ್ಲೆ, ಕೇರಳ, ಜಾನನ್ ಜಗನ್ನಾಥ (28) – ಕುಲಶೇಖರ, ಮಂಗಳೂರು, ರಾಜೇಶ್ ಬಂಗೇರ (30) – ಬೋಳೂರು ಪರಪು, ಮಂಗಳೂರು, ವರುಣ್ ಗಾಣಿಗ (28) – ಅಶೋಕನಗರ, ಮಂಗಳೂರು ಎಂದು ಗುರುತಿಸಲಾಗಿದೆ
ಕಾವೂರು ಗಾಂಧಿನಗರದ ಮಲ್ಲಿ ಲೇಔಟ್‌ನಲ್ಲಿ ದಾಳಿ ನಡೆಸಿದ ವೇಳೆ, ಚಿರಾಗ್ ಸನಿಲ್ ಮತ್ತು ಆಲ್ವಿನ್ ಕ್ಲಿಂಟನ್ ಡಿ’ಸೋಜಾ ಎಂಬ ಇಬ್ಬರನ್ನು ವಶಕ್ಕೆ ಪಡೆದು, ಅವರ ಬಳಿ ಇದ್ದ 111.83 ಗ್ರಾಂ ಎಂಡಿಎಂಎ (ಮೌಲ್ಯ ₹22.3 ಲಕ್ಷ)ವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡರು. ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿ ಚಿರಾಗ್ ಸನಿಲ್ ಮುಂಬೈನಲ್ಲಿ ವಾಸವಿರುವ ಆಫ್ರಿಕನ್ ಪ್ರಜೆ ಬೆಂಜಮಿನ್‌ನಿಂದ ಎಂಡಿಎಂಎ ಖರೀದಿಸಿದ್ದು, ಇದಕ್ಕೆ ಅಗತ್ಯ ಹಣವನ್ನು ಕೇರಳದ ಅಬ್ದುಲ್ ಕರೀಂ ಇ.ಕೆ. ಒದಗಿಸಿದ್ದಾನೆ ಎಂಬುದು ಬಹಿರಂಗವಾಯಿತು. ಬಳಿಕ ಕರೀಂನನ್ನು ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದ ಬಳಿ ಬಂಧಿಸಲಾಯಿತು.
ಇದಾದ ನಂತರ, ಆರೋಪಿ ಬಳಗವು ಈಗಾಗಲೇ ಕೊಕೇನ್ ಮಾರಾಟ ಮಾಡಿರುವ ಮಾಹಿತಿ ಆಧಾರದಲ್ಲಿ, ಪೊಲೀಸರು ಮಣ್ಣಗುಡ್ಡೆಯ ಸೆಂಟ್ರಲ್ ವೇರ್‌ಹೌಸ್ ಬಳಿ ದಾಳಿ ನಡೆಸಿ ಜಾನನ್ ಜಗನ್ನಾಥ, ರಾಜೇಶ್ ಬಂಗೇರ ಮತ್ತು ವರುಣ್ ಗಾಣಿಗ ಎಂಬ ಮೂವರನ್ನು ಬಂಧಿಸಿದರು. ಅವರ ಬಳಿ ಇದ್ದ 21.03 ಗ್ರಾಂ ಕೊಕೇನ್ (ಮೌಲ್ಯ ₹1.9 ಲಕ್ಷ) ವಶಪಡಿಸಿಕೊಳ್ಳಲಾಯಿತು.
ಒಟ್ಟು ಆರು ಮಂದಿಯ ವಿರುದ್ಧ ಕಾವೂರು ಹಾಗೂ ಬರ್ಕೆ ಪೊಲೀಸ್ ಠಾಣೆಗಳಲ್ಲಿ NDPS ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸರು ಮಾದಕ ವಸ್ತು ಪೂರೈಕೆದಾರರು, ಖರೀದಿದಾರರು ಮತ್ತು ಪೆಡ್ಲರ್‌ಗಳ ಸಂಪೂರ್ಣ ಜಾಲದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.