ಮಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 6,49,440 ರೂ. ಮೌಲ್ಯದ ಅಕ್ರಮ ವಿದೇಶಿ ಕರೆನ್ಸಿ ವಶ

Spread the love

 ಮಂಗಳೂರು: ಭಾರತದಿಂದ ವಿದೇಶಕ್ಕೆ ಅಕ್ರಮವಾಗಿ ಸಾಗಿಸಲೆತ್ನಿಸಿದ ವಿದೇಶಿ ಕರೆನ್ಸಿ 6,49,440 ರೂಪಾಯಿ ಮೌಲ್ಯದ 6600 ಬ್ರಿಟಿಷ್‌ ಪೌಂಡ್ಸ್‌ (ಜಿಬಿಪಿ)ಗಳನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಮೇ 20 ರಂದು ಪತ್ತೆ ಹಚ್ಚಿ ವಶ ಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳದ ಕಾಸರಗೋಡು ಜಿಲ್ಲೆಯ ಪಳ್ಳಿಕೆರೆಯ ಮುಹಮದ್‌ ಸಾಲಿಹ್‌ ಯರೂಲ್‌ (36) ಮತ್ತು ಮುಹಮದ್‌ ಅಶ್ರಫ್‌ ಅಬ್ದುಲ್ಲಾ (35)  ಎಂದು ಗುರುತಿಸಲಾಗಿದೆ.

ಮೇ 20 ರಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಇವರಿಬ್ಬರು ದುಬಾಯಿಗೆ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿದ್ದಾಗ ಆರೋಪಿಗಳ ಲಗ್ಗೇಜ್‌ ತಪಾಸಣೆ ಮಾಡಿದಾಗ ಇಬ್ಬರ ಬಳಿ ತಲಾ 3300 ಗ್ರೇಟ್‌ ಬ್ರಿಟನ್‌ ಪೌಂಡ್ಸ್‌ ಪತ್ತೆಯಾಗಿವೆ. ಈ ವಿದೇಶಿ ಕರೆನ್ಸಿಯ ಬಗ್ಗೆ ಯಾವುದೇ ಅಧಿಕೃತ ಹಣ ವಿನಿಮಯ ದಾಖಲೆ ಪತ್ರಗಳನ್ನು ಹೊಂದಿಲ್ಲದ ಕಾರಣ ಅವರನ್ನು ವಶಕ್ಕೆ ಪಡೆದುಕೊಂಡು ಅಕ್ರಮವಾಗಿ ಸಾಗಿಸಲೆತ್ನಿಸಿದ ವಿದೇಶಿ ವಿನಿಮಯವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love