ಮಂಗಳೂರು: ಅಕ್ರಮ ಮರಳುಗಾರಿಕೆಯಿಂದ ದ್ವೀಪ ಉಳಿಸಲು ಬೃಹತ್ ಪ್ರತಿಭಟನೆ 

Spread the love

ಮಂಗಳೂರು: ಅಕ್ರಮ ಮರಳುಗಾರಿಕೆಯಿಂದ ದ್ವೀಪ ಉಳಿಸಲು ಬೃಹತ್ ಪ್ರತಿಭಟನೆ 

ಮಂಗಳೂರು: ಅಕ್ರಮ ಮರಳುಗಾರಿಕೆಯಿಂದ ಮುಳುಗಡೆಯಾಗುತ್ತಿರುವ ಪಾವೂರು ಉಳಿಯ ಅಡ್ಯಾರ್, ಉಳ್ಳಾಲ ಹೊಯ್ಗೆ, ರಾಣಿಪುರ ದ್ವೀಪಗಳನ್ನು ಉಳಿಸಿ ದ್ವೀಪವಾಸಿಗಳನ್ನು ರಕ್ಷಿಸಬೇಕೆಂದು ಬೃಹತ್ ಪ್ರತಿಭಟನೆ ನಗರದ ಮಿನಿವಿಧಾನಸೌಧದ ಮುಂಭಾಗ ನಡೆಯಿತು.

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಸೇರಿದಂತೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 2-3 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು. ಪ್ರತಿಭಟನೆಗಿಂತ ಮೊದಲು ಪ್ರತಿಭಟನಾಕಾರರು ನಗರದ ಬಲ್ಮಠದ ಸಿಎಸ್ಐ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಜಾಥಾ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ದಂಧೆಕೋರರನ್ನು ಹೆಡೆಮುರಿಕಟ್ಟುವ ಬದಲು ಪೊಲೀಸರು ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ದಂಡ ವಿಧಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಗೊತ್ತಿದ್ದರೂ ಪೊಲೀಸರು, ಜಿಲ್ಲಾಧಿಕಾರಿಯವರು ಯಾಕೆ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಅಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿರುವುದು ಹೌದಾದಲ್ಲಿ ದಂಧೆಕೋರರೊಂದಿಗೆ ಶಾಮೀಲಾಗಿರುವ ಗಣಿ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಮೇಲೆಯೂ ಕ್ರಮವಾಗಬೇಕು. ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಯಾರಾದರೂ ಮಾಹಿತಿ ನೀಡಿದ್ದಲ್ಲಿ ಅವರೇ ಅಕ್ರಮ ಮರಳುದಂಧೆಕೋರರಿಗೆ ಕರೆಮಾಡಿ ತಿಳಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಎಲ್ಲರೂ ಮೂರೂ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮರಳು ಮಾಫಿಯಾಗಳೊಂದಿಗೆ ಕೈಜೋಡಿಸುತ್ತಿರುವ ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು. ಈ ಪ್ರತಿಭಟನೆಯ ಬಳಿಕ ಮರಳುಗಾರಿಕೆ ನಿಂತಲ್ಲಿ ಜನಪ್ರತಿನಿಧಿಗಳಿಗೆ ಜೈಕಾರ ಹಾಕುತ್ತೇವೆ. ಇಲ್ಲದಿದಲ್ಲಿ ಅವರಿಗೂ ಧಿಕ್ಕಾರ ಕೂಗುತ್ತೇವೆ‌. ಅದೇ ರೀತಿ ಕೊಣಾಜೆ, ಉಳ್ಳಾಲ ಸೇರಿದಂತೆ ಎಲ್ಲಾ ಠಾಣೆಗಳ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.


Spread the love
Subscribe
Notify of

0 Comments
Inline Feedbacks
View all comments