ಮಂಗಳೂರು : ಕಮ್ಯುನಿಸ್ಟ್ ಐಕ್ಯತೆಗಾಗಿ ಶ್ರಮಿಸಿದವರು ಎಬಿ ಬರ್ಧನ್ -ಬಿಕೆ ಕೃಷ್ಣಪ್ಪ

Spread the love

ಮಂಗಳೂರು, ಜ.5: ಕಾರ್ಮಿಕರ ಐಕ್ಯತೆ ಮತ್ತು ಜಾಗೃತಿಯ ಮೂಲಕ ಪ್ರಜಾ ಸರಕಾರದ ಅಧಿಕಾರ ಸ್ಥಾಪನೆಗಾಗಿ ದೇಶದ ಎಲ್ಲಾ ಕಮ್ಯುನಿಸ್ಟ್ ಕೂಟಗಳನ್ನು ಒಗ್ಗೂಡಿಸಲು ಭಾರತ ಕಮ್ಯುನಿಸ್ಟ್ ಪಕ್ಷದ ಮಾಜಿ ಕಾರ್ಯದರ್ಶಿ, ರಾಷ್ಟ್ರ ಕಂಡ ಅಪ್ರತಿಮ ಹೋರಾಟಗಾರ ಕಾಮ್ರೇಡ್ ಎಬಿ ಬರ್ಧನ್ ಶ್ರಮಿಸಿದವರು. ಬಲಪಂಥೀಯರ ಸ್ವಾರ್ಥಪರ, ಮನು ಸಂಸ್ಕøತಿಯ ರಾಜಕಾರಣದ ವಿರುದ್ಧ ಸಿಡಿದೆದ್ದು ದೇಶದ ಐಕ್ಯತೆಗಾಗಿ, ಜನರ ನೆಮ್ಮದಿಗಾಗಿ ತನ್ನ ಜೀವನವನ್ನು ಮುಡಿಪಿಟ್ಟವರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುವಜನರನ್ನು ಒಗ್ಗೂಡಿಸಿ ಜಾತ್ಯಾತೀತವಾಗಿ ಯುವಜನ ಫೆಡರೇಶನ್ ಕಟ್ಟಿ ಬೆಳೆಸಿದವರು.
ಮಹಾರಾಷ್ಟ್ರದಲ್ಲಿ ಬೇರೆ ಬೇರೆ ವಿಭಾಗದಲ್ಲಿ ದುಡಿಯುವ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕಿಗಾಗಿ ಹೋರಾಡಿದ ಇವರು ಅಖಿಲ ಬಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ಧಾರಿ ನಿರ್ವಹಿಸಿದವರು. ಭಾರತದಲ್ಲಿ ಶಾಂತಿ ಸೌಹಾರ್ದತೆ ಸ್ಥಾಪನೆಗಾಗಿ ದುಡಿದ ಭಾರತೀಯರ ಕಣ್ಮಣಿ ಎಬಿ ಬರ್ಧನ್ ಅಲ್ಪ ಸಮಯದ ಅಸೌಖ್ಯದ ನಂತರ ಕಳೆದ ಶನಿವಾರ ಮರಣ ಹೊಂದಿರುವುದರಿಂದ ದೇಶ ಮಹಾನ್ ನಾಯಕನೊಬ್ಬನನ್ನು ಕಳೆದುಕೊಂಡಿದೆ. ಅವರ ಚಿಂತನೆ ಮತ್ತು ಹೋರಾಟಗಳು ಎಂದೆಂದಿಗೂ ಅಮರವಾಗಲಿ ಎಂದು ಸಿಪಿಐ ಜಿಲ್ಲಾ ಮಾಜಿ ಕಾರ್ಯದರ್ಶಿ ಹಾಗೂ ಮನಪಾದ ಮಾಜಿ ಕಾರ್ಪೊರೇಟರ್ ಬಿಕೆ ಕೃಷ್ಣಪ್ಪ ಅಭಿಪ್ರಾಯ ಪಟ್ಟರು.
ಅವರು ಇಂದು ಮಂಗಳೂರಿನಲ್ಲಿ ನಡೆದ ಎಬಿ ಬರ್ಧನ್‍ರ ಸಂತಾಪ ಸೂಚಕ ಸಭೆಯಲ್ಲಿ ವಿಚಾರ ವಿನಿಮಯ ಮಾಡುತ್ತಿದ್ದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ ಕುಕ್ಯಾನ್ ಅಗಲಿದ ನಾಯಕನ ಹೋರಾಟಗಳ ಬಗ್ಗೆ ವಿವರ ನೀಡಿದರು. ಜಿಲ್ಲಾ ನಾಯಕ ಹೆಚ್ ವಿ ರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿ.ಎಸ್ ಬೇರಿಂಜ ಸ್ವಾಗತಿಸಿದರು.


Spread the love