ಮಂಗಳೂರು: ಕಾರ್ಯಕ್ಷಮತೆ ಮತ್ತು ದೂರಾಗಾಮಿ ಚಿಂತನೆಯಿಂದ ದೇಶದ ಅಭಿವೃದ್ಧಿ – ದ.ಕ.ಜಿಲ್ಲಾ ಬಿಜೆಪಿ

Spread the love

ಮಂಗಳೂರು: ಗರೀಭಿ ಹಠಾವೊ ಘೋಷಣೆ ಮಾಡಿ 60 ವರ್ಷ ಈ ದೇಶವನ್ನು ಆಳಿ ದೇಶದ ಜನರನ್ನು ವಿದೇಶಿ ಸಾಲಕ್ಕೆ ದೂಡಿ, ಇದೀಗ ಲೋಕಸಭೆಯಲ್ಲಿ ವಿರೋಧಪಕ್ಷದ ಸ್ಥಾನವನ್ನು ಕಳೆದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆ ಮತ್ತು ದೂರಾಗಾಮಿ ಚಿಂತನೆಯಿಂದ ದೇಶ ಅಭಿವೃದ್ಧಿಯನ್ನು ಕಂಡುಕೊಳ್ಳುತ್ತಿರುವುದನ್ನು ಸಹಿಸದೆ ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿಯವರು ಬಿಜೆಪಿ ಸರಕಾರವನ್ನು ಜೂಟ್ ಸರಕಾರವೆಂದು ಹೇಳುತ್ತಿರುವುದು ಮತ್ತು ಅವರನ್ನು ಸಮರ್ಥಿಸುವ ಕರಾವಳಿ ಕಾಂಗ್ರೇಸ್ ನಾಯಕರು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಿಜೆಪಿ ದ.ಕ.ಜಿಲ್ಲಾ ಸಮಿತಿ ಟೀಕಿಸಿದೆ.

ರಾಜ್ಯದಲ್ಲಿ ಆಡಳಿತ ದಿವಾಳಿ ಹೋಗಿದೆಯೆಂದು ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪನವರು ಬಹಿರಂಗ ಹೇಳಿಕೆ ಕೊಟ್ಟಾಗ, ಮೌನವಾಗಿದ್ದ ಕಾಂಗ್ರೆಸ್ ನಾಯಕರಿಗೆ ಎನ್.ಡಿ.ಎ. ಸರಕಾರದ ಆಡಳಿತವನ್ನು  ಟೀಕಿಸುವ ನೈತಿಕತೆ ಇಲ್ಲ ಎಂದು ಬಿಜೆಪಿ ಹೇಳಿದೆ.

ದೇಶದಲ್ಲಿ ಎನ್.ಡಿ.ಎ. ಆಡಳಿತಕ್ಕೆ ಬಂದ ನಂತರ ಬೆಲೆ ಏರಿಕೆ ನಿಯಂತ್ರಣದಲ್ಲಿದೆ. ಹಣದುಬ್ಬರ, ತೈಲ ಬೆಲೆಗಳು ಇಳಿದಿವೆ. ಚಿಲ್ಲರೆ, ಸಗಟು ಹಣದುಬ್ಬರ ಇಳಿದಿದೆ. ಜಿ.ಡಿ.ಪಿ. ದರ ಹೆಚ್ಚಾಗಿದೆ. ಪ್ರಧಾನ ಮಂತ್ರಿಯವರ ವಿದೇಶ ಪ್ರವಾಸದಿಂದಾಗಿ ದೇಶಕ್ಕೆ ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂದು ಬಿಜೆಪಿ ಹೇಳಿದೆ.

ಪ್ರಸ್ತುತ ಪ್ರಪಂಚದಲ್ಲಿ ಬಿಜೆಪಿ ಅತೀ ದೊಡ್ಡ ರಾಜಕೀಯ ಪಕ್ಷವಾಗಿದ್ದು, ದೇಶದಲ್ಲಿ ಕಾಂಗ್ರೆಸ್ 9 ರಾಜ್ಯಗಳಲ್ಲಿ ಆಳ್ವಿಕೆ ಮಾಡುತ್ತಿದ್ದರೆ, ಬಿಜೆಪಿ 12 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ದೇಶದಲ್ಲಿ ಕಾಂಗ್ರೇಸ್ 949 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 1058 ಶಾಸಕರನ್ನು ಹೊಂದಿದೆ.

ಇದೆಲ್ಲಾ ಗೊತ್ತಿದ್ದು, ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ ಮತ್ತು ಕರಾವಳಿ ಕಾಂಗ್ರೆಸ್ ನಾಯಕರು ಹತಾಶ ಭಾವನೆಯಿಂದ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ದುರದೃಷ್ಟಕರ ಎಂದು ಜಿಲ್ಲಾ ವಕ್ತಾರ ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.


Spread the love