ಮಂಗಳೂರು| ಕೇಂದ್ರ ಸಚಿವೆ, ರಾಜ್ಯಸಭಾ ಸದಸ್ಯೆಯ ಜಾಹೀರಾತು ಲಿಂಕ್ ಕ್ಲಿಕ್: 13.91 ಲಕ್ಷ ರೂ. ವಂಚನೆ
ಮಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸುಧಾಮೂರ್ತಿ ಮಾತನಾಡುವಂತಹ ಜಾಹಿರಾತು ನೋಡಿ ಅದರಲ್ಲಿರುವ ಲಿಂಕ್ ಕ್ಲಿಕ್ ಮಾಡಿದ ಹಿರಿಯ ನಾಗರಿಕರೊಬ್ಬರು 13.91 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
63 ವರ್ಷದ ದೂರುದಾರರು ಆ.28ರಂದು ಮೊಬೈಲ್ ವೀಕ್ಷಿಸುತ್ತಿರುವಾಗ ನಿರ್ಮಲಾ ಸೀತಾರಾಮನ್ ಹಾಗೂ ಸುಧಾಮೂರ್ತಿ ಮಾತನಾಡುತ್ತಿರುವ ವೀಡಿಯೋ ಕಂಡು ಬಂದಿದೆ. ಅದನ್ನು ಕ್ಲಿಕ್ ಮಾಡಿದಾಗ ಬೇರೆ ಪೇಜ್ ತೆರೆದುಕೊಂಡಿದ್ದು, ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಸಂದೇಶ ಬಂತು. ಬಳಿಕ ನಂದಿನಿ ತ್ಯಾಗಿ ಎಂದು ಹೇಳಿಕೊಂಡು ಬಂದ ಮೊಬೈಲ್ ಕರೆಯಲ್ಲಿ ತಾನು ನಾಕಾ ಸೊಲ್ಯೂಷನ್ಸ್ ಸಂಸ್ಥೆಯಿಂದ ಮಾತನಾಡುತ್ತಿದ್ದೇನೆ. ಹಣವನ್ನು ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ತಿಳಿಸಿದ್ದಾರೆ. ಅನಂತರ ವಿಕ್ರಂ ಸಿಂಗ್ ಎಂಬಾತ ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿ ಫೈನಾನ್ಸಿಯಲ್ ಎಕ್ಸ್‌ಪರ್ಟ್ ಎಂದು ತಿಳಿಸಿದ್ದಾನೆ. ಆತನನ್ನು ನಂಬಿ ಆತ ಹೇಳಿದಂತೆ ಆಗಸ್ಟ್ 28ರಿಂದ ಅಕ್ಟೋಬರ್ 22ರವರೆಗೆ ಆತ ಹೇಳಿದ ವಿವಿಧ ಖಾತೆಗಳಿಗೆ 13,91,092 ರೂ. ಪಾವತಿಸಿರುವೆ. ಅ.22ರಂದು ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಆತ ಕೊಡದೆ ತಪ್ಪಿಸಿಕೊಂಡಿದ್ದಾನೆ ಎಂದು 63 ವರ್ಷದ ವ್ಯಕ್ತಿ ಬರ್ಕೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.













