ಮಂಗಳೂರು: ಕೊಲೆ ಹಾಗೂ ದರೋಡೆಗೆ ಸಂಚು ರೂಪಿಸುತ್ತಿದ್ದ ಇಬ್ಬರ ಬಂಧನ

Spread the love

ಮಂಗಳೂರು: ನಗರದ ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಬಳಿಯಲ್ಲಿ ಕೊಲೆ ಹಾಗೂ ದರೋಡೆಗೆ ಸಂಚು ರೂಪಿಸುತ್ತಿದ್ದ ಇಬ್ಬರನ್ನು  ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಪವನ್ ರಾಜ್ ಶೆಟ್ಟಿ, ಪ್ರಾಯ(18), ತಂದೆ: ದಿ: ರೋಹಿದಾಸ ಶೆಟ್ಟಿ, ವಾಸ: 1 ನೇ ಬ್ಲಾಕ್, ಅಮೃತನಗರ, ಚೆಕ್ ಪೋಸ್ಟ್ ಬಳಿ, ವಾಮಂಜೂರು, ಮಂಗಳೂರು. ಕುಮಾರ್ ಟಿ.ಎಂ @ ಸೂರ್ಯಕುಮಾರ್ @ ಸೂರಿ, ಪ್ರಾಯ(34), ತಂದೆ: ದಿ: ಮುತ್ತುಸ್ವಾಮಿ, ವಾಸ: ಕೇರಾಫ್ ವಿನೀತ್, ಗುರುನಗರ, ಜೆಪ್ಪಿನಮೊಗರು, ಮಂಗಳೂರು ಎಂದು ಗುರುತಿಸಲಾಗಿದೆ.

ಮಂಗಳೂರು ನಗರದ ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಮಾರಕಾಯುಧವಾದ ತಲವಾರಿನೊಂದಿಗೆ ವಾಮಂಜೂರಿನ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ತಿರುಗಾಡುತ್ತಿರುವ ಬಗ್ಗೆ ಖಚಿತ ವರ್ತಮಾನದಂತೆ ಮಂಗಳೂರು ನಗರದ ಸಿಸಿಬಿ ಪೊಲೀಸರು ಧಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ.

ಆರೋಪಿಗಳ ಪೈಕಿ ಪವನ್ ರಾಜ್ ಶೆಟ್ಟಿಯು ಈ ಹಿಂದೆ 2009 ನೇ ಇಸವಿಯಲ್ಲಿ ಕೊಲೆಯಾದ ಕುಖ್ಯಾತ ರೌಡಿ ಶೀಟರ್ ರೋಹಿದಾಸ ಶೆಟ್ಟಿ @ ವಾಮಂಜೂರು ರೋಹಿ ಎಂಬಾತನ ಮಗನಾಗಿದ್ದು, ತನ್ನ ತಂದೆಯ ಕೊಲೆಗೆ ಪ್ರತಿಕಾರವಾಗಿ ಕೊಲೆ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಸಹಾಯ ಮಾಡುತ್ತಿರುವುದಾಗಿ ಸಂಶಯದಿಂದ ವಾಮಂಜೂರಿನ ಪ್ರತಿಷ್ಠಿತ ರಾಜಕೀಯ  ಹಾಗೂ ಉದ್ಯಮಿಯೊಬ್ಬರನ್ನು ಕೊಲೆ ಮಾಡಲು ಸ್ಕೆಚ್ ರೂಪಿಸಿ ಅವರ ಚಲನವಲನಗಳನ್ನು ನೋಡಿಕೊಂಡು ಇತರ ಆರೋಪಿಗಳ ಜೊತೆ ಸೇರಿ ಅವರ ಕೊಲೆಗಾಗಿ ಸಂಚು ರೂಪಿಸುತ್ತಿದ್ದರು. ಅಲ್ಲದೆ ಈ ಹಿಂದೆ 2014 ನೇ ಇಸವಿಯಲ್ಲಿ ಸಂತೋಷ್ ಕೊಟ್ಟಾರಿ ಎಂಬಾತನ ಕೊಲೆಯತ್ನ ಪ್ರಕರಣವು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ.

ಇನ್ನೋರ್ವ ಆರೋಪಿ ಕುಮಾರ್ ಟಿ.ಎಂ @ ಸೂರ್ಯಕುಮಾರ್ @ ಸೂರಿ ಎಂಬಾತನ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ವಾಸುದೇವ ಶೆಣೈ ಎಂಬವರ ಕೊಲೆ ಪ್ರಕರಣ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿಯಲ್ಲಿ ವಿಕ್ಕಿ @ ವಿಕ್ರಮ್ ಎಂಬಾತನಿಗೆ ಕೊಲೆ ಯತ್ನ ನಡೆಸಿದ ಪ್ರಕರಣ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿರುತ್ತದೆ.  ಅಲ್ಲದೇ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿತರುಗಳಿಂದ ಒಂದು ಯಮಹಾ ಫಝೆರ್ ಬೈಕ್, 3 ತಲವಾರು, ಚೂರಿ-1,  250 ಗ್ರಾಂ ಗಾಂಜಾ, ಒಂದು  ಮೊಬೈಲ್ ಪೋನ್ ನ್ನು ವಶಪಡಿಸಿಕೊಳ್ಳಲಾಗಿದೆ.   ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಶ್ರೀ.-ಕೆ.ಎಂ. ಶಾಂತರಾಜು,  ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ  ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love