ಮಂಗಳೂರು: ಜಿಲ್ಲೆಯಲ್ಲಿ ಭಾನುವಾರ ರಾತ್ರಿಯ ತನಕ ನಿಷೇಧಾಜ್ಞೆ ಮುಂದುವರಿಕೆ ; ಜಿಲ್ಲಾಧಿಕಾರಿ ಇಬ್ರಾಹಿಂ

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಗುರುವಾರ ನಡೆದ  ಅಹಿತಕರ ಘಟನೆ ನಂತರ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಜಿಲ್ಲೆಯಾದ್ಯಂತ ಶಾಂತಿಯುತ ವಾತಾವರಣ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ 10-00 ಘಂಟೆಯಿಂದ ದಿನಾಂಕ ಭಾನುವಾರ ರಾತ್ರಿ 10-00 ಘಂಟೆಯ ತನಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973 ರ ಸೆಕ್ಷನ್ 144 ರಂತೆ ನಿಷೇದಾಜ್ಞೆ  ಆದೇಶ ಹೊರಡಿಸಲಾಗಿದೆ.   ಇದರಂತೆ ಸದ್ರಿ ನಿಷೇದಾಜ್ಞೆ ಆದೇಶವು ದಿನಾಂಕ ಭಾನುವಾರ ರ ರಾತ್ರಿ 10-00 ಘಂಟೆಯ ವರೆಗೂ ಸಹ ಜ್ಯಾರಿಯಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ಶನಿವಾರ ಶನಿವಾರದಂದು ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ.

ಗುರುವಾರದಂದು ಬಂಟ್ವಾಳ  ಗ್ರಾಮಾಂತರ  ಪೊಲೀಸ್ ಠಾಣಾ ಸರಹದ್ದಿನ ಮಣಿಹಳ್ಳ ಎಂಬಲ್ಲಿ ಚೂರಿ ಇರಿತದಿಂದ ನಾವೂರು ಗ್ರಾಮದ ಮಣಿಹಳ್ಳ ಎಂಬ ಹಳೇಗೇಟ್ ಮನೆ ನಿವಾಸಿಯಾದ   ಶ್ರೀ ಹರೀಶ್ ಬಿನ್ ಶ್ರೀನಿವಾಸ ಪೂಜಾರಿ ಇವರು ಮೃತಪಟ್ಟಿದ್ದು, ಸದ್ರಿ ಮೃತ ವ್ಯಕ್ತಿಯ ವಾರೀಸುದಾರರಿಗ ರೂ.5-00 ಲಕ್ಷ ಪರಿಹಾರ ಧನವನ್ನು ಪಾವತಿಸಲಾಗಿದೆ.

ಶುಕ್ರವಾರದಂದು ಜಿಲ್ಲೆಯಲ್ಲಿ ಯಾವುದೇ ಪ್ರಮುಖ  ಅಹಿತಕರ ಘಟನೆಗಳು ನಡೆದಿರುವುದಿಲ್ಲ.  ಆದರೆ ಪುತ್ತೂರು ತಾಲೂಕು ಗೋಳಿತಟ್ಟು ಎಂಬಲ್ಲಿ ಸಣ್ಣ ಘಟನೆ ಹೊರತು ಪಡಿಸಿ, ಬೇರೆ ಘಟನೆಗಳು ಆಗಿರುವುದಿಲ್ಲ.  ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮ ತೆಗೆದುಕೊಳ್ಳಲಾಗಿದ್ದು, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆ ಹಾಗೂ ಕೇರಳದಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ  ಹಾಗೂ ಜಿಲ್ಲೆಯ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ವಹಿಸಲಾಗಿದೆ.

 ಅಲೋಕ್ ಮೋಹನ್,  ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕಾನೂನು ಮತ್ತು ಸುವ್ಯವಸ್ಥೆ ಇವರು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.  ಪೊಲೀಸ್ ಮಹಾ ನಿರೀಕ್ಷಕರು   ಬಂಟ್ವಾಳ ದಲ್ಲಿ ಮೊಕ್ಕಾಂ ಹೂಡಿ  ಕಾನೂನು ಸುವ್ಯವಸ್ಥೆ ಬಗ್ಗೆ ಮಾರ್ಗದರ್ಶನ ನೀಡಿರುತ್ತಾರೆ. ಜಿಲ್ಲಾಧಿಕಾರಿಗಳು ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಪುತ್ತೂರಿನ ಆಯ್ದ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದರು.

ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love