ಮಂಗಳೂರು ನಗರಕ್ಕೆ ಗೋಯಾತ್ರೆ ಪ್ರವೇಶ – 29ರ ಬೆಳಿಗ್ಗೆ ಮಹಾತ್ರಿವೇಣಿ ಸಂಗಮ

Spread the love

ಮಂಗಳೂರು ನಗರಕ್ಕೆ ಗೋಯಾತ್ರೆ ಪ್ರವೇಶ – 29ರ ಬೆಳಿಗ್ಗೆ ಮಹಾತ್ರಿವೇಣಿ ಸಂಗಮ

ಮಂಗಳೂರು: ಬೆಂಗಳೂರಿನಿಂದ ಹೊರಟು 82 ದಿನಗಳ ಮಹಾ ಪರ್ಯಟನೆ ಮುಗಿಸಿದ ಮಂಗಲಗೋಯಾತ್ರೆ ನಾಳೆ (ಜ. 27) 4 ಗಂಟೆಗೆ ನಗರಕ್ಕೆ ಆಗಮಿಸಲಿದೆ. ಹೊರವಲಯದ ಪಡೀಲಿನಲ್ಲಿ ಈ ಅಧ್ದೂರಿ ಯಾತ್ರೆಯನ್ವು ಸ್ವಾಗತಿಸಿ, ಹಸಿರು ಕಾಣಿಕೆ ಸಹಿತ ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ ಗೋಧೂಳಿ ಲಗ್ನದಲ್ಲಿ ಮಂಗಲಭೂಮಿ ಪ್ರವೇಶಿಸಲಿದೆ.

29ರ ಬೆಳಿಗ್ಗೆ ಮಹಾತ್ರಿವೇಣಿ ಸಂಗಮ
29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಲಕ್ಷಾಂತರ ಗೋಪ್ರೇಮಿಗಳ ಸಮ್ಮುಖದಲ್ಲಿ ಮಹಾತ್ರಿವೇಣಿ ಸಂಗಮಕ್ಕೆ ವೇದಿಕೆ ಸಜ್ಜಾಗಿದೆ. ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿ, ಮಂತ್ರಾಲಯದ ಶ್ರೀ ವಿಭುದೇಂದ್ರತೀರ್ಥ ಶ್ರೀಪಾಂದಗಳವರು, ಮಹಾರಾಷ್ಟ್ರ ಕರವೀರಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾನರಸಿಂಹ ಭಾರತೀ ಶ್ರೀಗಳು, ಸಿದ್ಧಾರೂಢ ಮಠದ ಶ್ರೀ ಆರೂಢಭಾರತೀ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಆಂದೋಲದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ, ಮಂಡ್ಯ ಬೇಬಿಮಠದ ತ್ರಿನೇತ್ರ ಮಹಾಂತ ಸ್ವಾಮೀಜಿ, ಗಂವ್ಹಾರದ ಶ್ರೀ ಸೋಪಾನನಾಥ ಸ್ವಾಮೀಜಿ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಪ್ರಮುಖ ಸ್ವಾಮೀಜಿಗಳು ಸಹಿತ ರಾಜ್ಯ – ಹೊರರಾಜ್ಯಗಳ ಸಾವಿರಕ್ಕೂ ಅಧಿಕ ಸಂತರ ಸಮ್ಮುಖದಲ್ಲಿ ಮಹಾಮಂಗಲ ಉದ್ಘಾಟನೆಗೊಳ್ಳಲಿದೆ. ಅಮೂಲ್ಯ ಗೋವು, ಸಹಸ್ರಾಧಿಕ ಸಂತರು ಹಾಗೂ ಶತಸಹಸ್ರ ಗೋಭಕ್ತರ ಈ ಮಹಾತ್ರಿವೇಣಿ ಸಂಗಮ ದೇಶದ ಗೋಸಂರಕ್ಷಣೆ ಹೋರಾಟ ಇತಿಹಾಸದ ಮೈಲುಗಲ್ಲಾಗಲಿದೆ.

ವಿರಾಟ್ ಹಿಂದೂಸ್ಥಾನ್ ಸಂಗಮದ ಅಧ್ಯಕ್ಷ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಅಭ್ಯಾಗತರಾಗಿ ಆಗಮಿಸಲಿದ್ದು, ಈ ಐತಿಹಾಸಿಕ ಸಭೆಯಲ್ಲಿ ಸಹಸ್ರ ಸಂತರ ಸಮ್ಮುಖದಲ್ಲಿ ಲಕ್ಷಾಂತರ ಗೋಭಕ್ತರು ಮಹಾಸಂಕಲ್ಪ ಸ್ವೀಕರಿಸುವರು.

ಗೋವಂಶ ದರ್ಶನ, ಗೋವಿಶ್ವಕೋಶ, ಪ್ರದರ್ಶನ,ಗವ್ಯ ಉತ್ಪನ್ನ, ಗವ್ಯ ಪಾಕೋತ್ಸವ, ಧಾರ್ಮಿಕ ಸೇವೆಗಳು ಮತ್ತು ಗೋ ತುಲಾಭಾರದಂಥ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ಮೆರುಗು ನೀಡಲಿವೆ. ಈ ಕಾರ್ಯಕ್ರಮಕ್ಕೆ ಆಗಮಿಸುವ ಗೋಪ್ರೇಮಿಗಳಿಗೆ ನಗರ ಸಾರಿಗೆ ಹಾಗೂ ಗ್ರಾಮಾಂತರ ಸಾರಿಗೆ ಬಸ್ಸುಗಳು ಉಚಿತ ಸೇವೆ ನೀಡುವ ಕುರಿತು ಬಸ್ ಮಾಲಿಕರ ಸಂಘ ನಿರ್ಧರಿಸಿದ್ದು, ಗೋಪ್ರೇಮಿಗಳಿಗೆ ವಿಶೇಷ ವ್ಯವಸ್ತೆ ಕಲ್ಪಿಸಲಾಗಿದೆ.


Spread the love