ಮಂಗಳೂರು : ನಗರಪಾಲಿಕೆಯಿಂದ 1060 ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಉಪಮೇಯರ್

ಮಂಗಳೂರು: ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ 1060 ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಉಪಮೇಯರ್ ಪುರುಷೋತ್ತಮ ಚಿತ್ರಾಪುರ ತಿಳಿಸಿದ್ದಾರೆ.

ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಬೈಕಂಪಾಡಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಹಕಾರದೊಂದಿಗೆ ಬೈಕಂಪಾಡಿ ಅಂಗರಗುಂಡಿಯಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ(ನಲ್ಮ್) ಕೌಶಲ್ಯ ತರಬೇತಿ ಸೀವಿಂಗ್ ಮಿಷನ್ ಆಪರೇಟರ್ ಟೈಲರಿಂಗ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಲ್ಮ್ ಯೋಜನೆಯಡಿ ನಿರುದ್ಯೋಗಿಗಳಿಗೆ ವೃತ್ತಿ ತರಬೇತಿ ನೀಡಿ, ಅವರಲ್ಲಿ ಕೌಶಲ್ಯತೆ ಹೆಚ್ಚಿಸಿ ಅವರನ್ನು ಸ್ವಂತ ಉದ್ದಿಮೆ ಘಟಕ ಸ್ಥಾಪಿಸಲು ಇಲ್ಲವೇ ಕುಶಲ ಉದ್ಯೋಗಿಗಳನ್ನಾಗಿ ಮಾಡುವುದು ಉದ್ದೇಶವಾಗಿದೆ. ವಿವಿಧ ರೀತಿಯ ಕೌಶಲ್ಯ ತರಬೇತಿಗಳನ್ನು ಉಚಿತವಾಗಿ ನೀಡಿ, ಖಚಿತವಾದ ಉದ್ಯೋಗ ಅಥವಾ ಸಣ್ಣ ಉದ್ದಿಮೆ ಕೈಗೊಳ್ಳಲು ಅರ್ಥಿಕ ನೆರವು ನೀಡುವ ಉದ್ದೇಶವಿದೆ ಎಂದು ಉಪಮೇಯರ್ ತಿಳಿಸಿದರು.

ಮಹಾನಗರಪಾಲಿಕೆಯ ಶೇಕಡಾ 7.25ರ ನಿಧಿಯಲ್ಲಿ ಅರ್ಹ ಬಡವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಗ್ಯಾಸ್ ಸಂಪರ್ಕ, ನಳ್ಳಿ ನೀರು ಸಂಪರ್ಕ, ಶೌಚಾಲಯ ಹಾಗೂ ಬಡವರ ಶಸ್ತ್ರಚಿಕಿತ್ಸೆಗೆ ನೆರವು ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಇದಲ್ಲದೇ, ಕುಟೀರಭಾಗ್ಯ ಯೋಜನೆಯಡಿ ಮನೆ ರಿಪೇರಿಗೆ 20 ಸಾವಿರ ರೂ. ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ ಪುರುಷೋತ್ತಮ ಚಿತ್ರಾಪುರ, ನಗರಪಾಲಿಕೆಯ ಪ್ರಸಕ್ತ ಆಡಳಿತವು ಅನೇಕ ಸಾಮಾಜಿಕ ಜವಾಬ್ದಾರಿಗಳ ಮೂಲಕ ನಗರಾಡಳಿತವನ್ನು ಜನತೆಯ ಮನೆಬಾಗಿಲಿಗೆ ಕೊಂಡೊಯ್ದಿದೆ ಎಂದು ಹೇಳಿದರು.

 ಮಹಾನಗರಪಾಲಿಕೆ ಸಮುದಾಯ ಅಭಿವೃದ್ಧಿ ಅಧಿಕಾರಿ ಮಾಲಿನಿ ರೋಡ್ರಿಗಸ್ ಮಾತನಾಡಿ, ನಲ್ಮ್ ಯೋಜನೆಯಡಿ 18-35 ವಯಸ್ಸಿನ ನಿರುದ್ಯೋಗಿಗಳನ್ನು ವೃತ್ತಿಪರರನ್ನಾಗಿ ಮಾಡುವ ಉದ್ದೇಶವಿದೆ. ತರಬೇತಿ ಬಳಿಕ, ಆಸಕ್ತರಿಗೆ ಸ್ವಂತ ಘಟಕ ಸ್ಥಾಪಿಸಲು ಬ್ಯಾಂಕ್ ಮೂಲಕ ಸಬ್ಸಿಡಿ ಸಾಲವನ್ನು ನೀಡಲಾಗುವುದು. ಕಂಪ್ಯೂಟರ್, 4 ಚಕ್ರ ವಾಹನದ ಅಟೋಮೋಬೈಲ್ ಸೇರಿದಂತೆ ವಿವಿಧ ವೃತ್ತಿ ತರಬೇತಿಗಳು ಈ ಯೋಜನೆಯಲ್ಲಿವೆ. ತರಬೇತಿಯ ನಂತರ ಜೀವನಮಟ್ಟ ಸುಧಾರಿಸುವುದೇ ಯೋಜನೆಯ ಮುಖ್ಯ ಉದ್ದೇಶ ಎಂದರು.

ಬೈಕಂಪಾಡಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಖಾದರ್ ಶಾ,  ಉದ್ಯಮಿ ಅಸ್ಗರ್ ಆಲಿ, ಸ್ಥಳೀಯ ಮುಖಂಡರಾದ ಬಿ.ಕೆ. ಇದ್ದಿನಬ್ಬ, ಬಿ.ಎ. ಜಬ್ಬಾರ್, ನ್ಯಾಯವಾದಿ ಮುಖ್ತಾರ್ ಅಹಮದ್, ತರಬೇತಿ ವಿಭಾಗದ ಸುನಂದಾ, ಗೀತಾ, ರಝಿಯಾ, ಕಾರ್ಯಕ್ರಮ ಯೋಜನೆಯ ಸ್ಥಳೀಯ ಸಮನ್ವಯಕಾರ ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.

ತರಬೇತಿ ಕೇಂದ್ರ:  ಮಂಗಳೂರು ಮಹಾನಗರಪಾಲಿಕೆ ವತಿಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ(ನಲ್ಮ್) ಕೌಶಲ್ಯ ತರಬೇತಿ ಸೀವಿಂಗ್ ಮಿಷನ್ ಆಪರೇಟರ್ ಟೈಲರಿಂಗ್ ತರಬೇತಿ ಕೇಂದ್ರವನ್ನು ಬೈಕಂಪಾಡಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಹಕಾರದೊಂದಿಗೆ ಅಂಗರಗುಂಡಿ ಮಿಸ್‍ಬಾಹುಲ್ ಉಲೂಂ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ. ನಲ್ಮ್ ಯೋಜನೆಯಡಿ 8 ಟೈಲರಿಂಗ್ ಯಂತ್ರ ಹಾಗೂ ಇತರ ಪರಿಕರ, ಇಬ್ಬರು ವೃತ್ತಿ ಶಿಕ್ಷಕರನ್ನು ಒದಗಿಸಲಾಗಿದ್ದು,   ಹಾಗೂ ಮಸೀದಿ ವತಿಯಿಂದ 7 ಯಂತ್ರಗಳನ್ನು ನೀಡಲಾಗಿದೆ. ಒಟ್ಟು 50 ಮಂದಿ ಮಹಿಳೆಯರಿಗೆ ಪ್ರತೀ ದಿನ 3 ಬ್ಯಾಚುಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ಪಿಲಿಕುಲ ಎಣ್ಣೆಗಾಣದ ನಿರ್ವಹಣೆಗೆ ಕರ್ನಾಟಕ ಬ್ಯಾಂಕ್ ಪ್ರಾಯೋಜಕತ್ವ

ಮಂಗಳೂರು : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಮುಖ್ಯ ಅಂಗಗಳಲ್ಲಿ  ಕುಶಲಕರ್ಮಿ ಗ್ರಾಮ ಪ್ರಮುಖವಾಗಿದೆ.  ಪಾರಂಪರಿಕ  ಕೌಶಲ್ಯಗಳನ್ನು  ಉಳಿಸಿ ಕೊಳ್ಳುವ  ಹಾಗೂ ಇಂದಿನ ಜನಾಂಗಕ್ಕೆ   ಕಲೆ ಮತ್ತು ಕೌಶಲ್ಯವನ್ನು  ಪರಿಚಯಿಸುವುದಾಗಿದೆ.  ಇಲ್ಲಿನ ವೈಶಿಷ್ಟ್ಯವೆಂದರೆ ಕುಂಬಾರಿಕೆ, ಕಮ್ಮಾರಿಕೆ, ಬಡಗಿತನ, ನೇಕಾರಿಕೆ, ಬೆತ್ತ ಮತ್ತು ಬಿದಿರು ಉತ್ಪನ್ನ, ಮರದ ಕೆತ್ತನೆ, ಎಣ್ಣೆ ಗಾಣ, ಕುಟ್ಟಣದ ಅವಲಕ್ಕಿ, ಪ್ರಾತ್ಯಕ್ಷತಾ ಕೇಂದ್ರ, ಜೇನು ಸಾಕಾಣಿಕೆಗಳನ್ನು ಇಲ್ಲಿನ ಕುಶಲಕರ್ಮಿಗಳು ಈ ಕೌಶಲ್ಯಗಳನ್ನು ನಿರ್ವಹಿಸುತ್ತಾರೆ. ಸಾವಿರಾರು  ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಬಂದು  ವೀಕ್ಷಿಸುತ್ತಿದ್ದಾರೆ.

ಇಂತಹ ಕೌಶಲ್ಯಗಳಲ್ಲಿ ಒಂದಾದ  ಎಣ್ಣೆಗಾಣದ ನಿರ್ವಹಣೆಯ ಪ್ರಾಯೋಜಕತ್ವವನ್ನು ಕರ್ಣಾಟಕ ಬ್ಯಾಂಕ್   ವಹಿಸಿಕೊಂಡಿದೆ.  ಭಾನುವಾರದಂದು ಪಿಲಿಕುಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗ ಎ. ಬಿ ಇಬ್ರಾಹಿಂ, ಕರ್ನಾಟಕ ಬ್ಯಾಂಕ್‍ನ ಅಧ್ಯಕ್ಷ ಜಯರಾಮ್ ಭಟ್, ಪ್ರಧಾನ ವ್ಯವಸ್ಥಾಪಕ ಎಂ.ಎಸ್  ಮಹಾಬಲೇಶ್ವರ ಭಟ್, ಪ್ರೊ. ವಿವೇಕ್ ರೈ,  ಪಿಲಿಕುಲ ಕಾರ್ಯನಿರ್ವಾಹಕ ನಿರ್ದೇಶಕ ಪಿಲಿಕುಳ ಎಸ್. ಎ. ಪ್ರಭಾಕರ ಶರ್ಮ ಮತ್ತಿತರರು ಉಪಸ್ಥಿತರಿದ್ದರು ಎಂದು ಉಪಸ್ಥಿತರಿದ್ದರು ಎಂದು  ಪ್ರಕಟಣೆ ತಿಳಿಸಿದೆ.