ಮಂಗಳೂರು: ರಾಜ್ಯಕ್ಕೆ ಶಾಶ್ವತ ಕೊಡುಗೆ ನೀಡಿದ ದೇವರಾಜ ಅರಸು: ಜಿಲ್ಲಾಧಿಕಾರಿ

Spread the love

ಮಂಗಳೂರು: ಹಿಂದುಳಿದ ವರ್ಗಗಳ ಹರಿಕಾರರಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ತಮ್ಮ ಅಧಿಕಾರವಧಿಯಲ್ಲಿ ರಾಜ್ಯಕ್ಕೆ ನೀಡಿದ ಕೊಡುಗೆಗಳಿಂದಾಗಿ ಜನತೆ ಇಂದು ಅವರನ್ನು ಸದಾ ನೆನಪಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

01-20160225-devraj-aras-photo-exhibition

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿರುವ ದೇವರಾಜ ಅರಸು ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಉಳುವವನೇ ಹೊಲದೊಡೆಯ ಎಂಬ ಕಾನೂನು ಮೂಲಕ ಅನೇಕ ಮಂದಿಗೆ ಭೂಮಿಯ ಮಾಲಕತ್ವ ಒದಗಿಸಿದ ಕೀರ್ತಿ ಅರಸು ಅವರದ್ದಾಗಿದೆ. ಅರಸು ಅವರ ಕೊಡುಗೆಗಳ ಅರಿವು ಇಂದಿನ ಪೀಳಿಗೆಗೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ವಾರ್ತಾ ಇಲಾಖೆಯು ಆಯೋಜಿಸಿರುವ ಅರಸು ಅವರ ಛಾಯಾಚಿತ್ರಗಳ ಪ್ರದರ್ಶನ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.

02-20160225-devraj-aras-photo-exhibition-001

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು.

ಪ್ರದರ್ಶನ: ದೇವರಾಜ ಅರಸು ಅವರ ಛಾಯಾಚಿತ್ರಗಳ ಪ್ರದರ್ಶನವನ್ನು  ನಗರದ  ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಇಂದಿನಿಂದ ಆಯೋಜಿಸುತ್ತಿದೆ. ದೇವರಾಜ ಅರಸು ಅವರ ಬಾಲ್ಯ ಜೀವನ, ಶಿಕ್ಷಣ, ಜೀವನ ವಿವಿಧ ಹಂತಗಳ, ರಾಜಕೀಯ ಸ್ಥಾನಮಾನಗಳ, ಮಾಹಿತಿಗಳು ಈ ಛಾಯಾಚಿತ್ರ ಪ್ರದರ್ಶನದಲ್ಲಿವೆ.    ಉಳುವವನೇ ಹೊಲದೊಡೆಯ ಸೇರಿದಂತೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಚಾರಿತ್ರಿಕ ಯೋಜನೆಗಳು, ಸಾಮಾನ್ಯ ಜನತೆಗೆ ಅವರ ಕೊಡುಗೆಗಳು, ಅವರ ಅಧಿಕಾರಾವಧಿಯಲ್ಲಿ ಕರ್ನಾಟಕಕ್ಕೆ ಭೇಟಿ ಕೊಟ್ಟ ವಿದೇಶೀ ನಾಯಕರು, ಅವರ ಭೇಟಿಯಿಂದ ರಾಜ್ಯಕ್ಕೆ ದೊರೆತ ಪ್ರಯೋಜನೆಗಳು, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಕರ್ನಾಟಕದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಸಂದರ್ಭದಲ್ಲಿ ನಡೆದ ಘಟನೆಗಳು ಮತ್ತಿತರ ಘಟನೆಗಳ  ಮಾಹಿತಿಯನ್ನು ಈ ಛಾಯಾಚಿತ್ರಗಳ ಮೂಲಕ ಜನತೆಯ ಮುಂದಿಡಲಾಗುತ್ತಿದೆ. ಅರಸು ಅವರ ಕೊನೆಯ ದಿನಗಳ ದೃಶ್ಯಗಳನ್ನು ಛಾಯಾಚಿತ್ರದಲ್ಲಿ ಕಾಣಬಹುದು.

ಇಂದಿನ ಯುವಪೀಳಿಗೆ, ವಿದ್ಯಾರ್ಥಿಗಳಿಗೆ ದೇವರಾಜ ಅರಸು ಅವರು ನಾಡಿಗೆ ನೀಡಿದ ಕೊಡುಗೆಗಳ ಮಾಹಿತಿ, ಅವರ ವ್ಯಕ್ತಿತ್ವದ ಪರಿಚಯ ಮಾಡಿಸಲು ಈ ಛಾಯಾಚಿತ್ರ ಪ್ರದರ್ಶನ ಸಹಕಾರಿಯಾಗಲಿದೆ.


Spread the love