ಮಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‍ಗಳ ಶುಲ್ಕದಲ್ಲಿ ಭಾರೀ ಏರಿಕೆ : ಅಭಾವಿಪ ತೀವ್ರ ಖಂಡನೆ

Spread the love

ಮಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ವೃತ್ತಿಶಿಕ್ಷಣ ಕೋರ್ಸ್‍ಗಳ ಶುಲ್ಕ ಬಾರೀ ಏರಿಕೆ (20% ರಿಂದ 30%) ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಅಭಾವಿಪ ತೀವ್ರವಾಗಿ ಖಂಡಿಸಿದ್ದು,  ತಕ್ಷಣ ಈ ವಿದ್ಯಾರ್ಥಿ ವಿರೋಧಿ ನೀತಿಯಿಂದ ಹಿಂದೆ ಸರಿಯದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.

ಅಹಿಂದ ಮಂತ್ರ ಜಪಿಸುತ್ತ, ಬಡ-ಮಧ್ಯಮ ವರ್ಗದವರ ಪರವಾದ ಸರ್ಕಾರ ಎಂದು ಹೇಳುತ್ತಾ, ಅಧಿಕಾರ ನಡೆಸುತ್ತಿರುವ ಸರ್ಕಾರದ ಗೋಸುಂಬೆ ನೀತಿಯು ಈ ಮೂಲಕ ರಾಜ್ಯದ ಜನತೆಗೆ ಗೊತ್ತಾಗುತ್ತಿದೆ. ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳು ಎಂದಿಗೂ ಭರಿಸಲಾಗದಂತಹ ದುಬಾರಿ ಶುಲ್ಕ ನೀತಿಯನ್ನು ಸರ್ಕಾರ ಜಾರಿಗೆ ತರಲು ಮೂದಾಗಿರುವುದು ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯನ್ನು ತೋರಿಸುತ್ತಿದೆ. ಯಾವ ಮಾನದಂಡದ ಆಧಾರದ ಮೇಲೆ ಸರ್ಕಾರ 20% ರಿಂದ 30% ಶುಲ್ಕವನ್ನು ಹೆಚ್ಚಿಸಿದೆ ಎಂಬ ಪ್ರಶ್ನೆಯು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲರಲ್ಲೂ ಮೂಡುತ್ತಿದೆ. ಸರ್ಕಾರದ ಈ ನೀತಿಯು ಖಾಸಿಗಿ ಶಿಕ್ಷಣ ಸಂಸ್ಥೆಗಳಿಗೆ ಹಣದ ಹೊಳೆಯನ್ನೇ ಹರಿಸಿ, ಬಡ-ಪ್ರತಿಭಾವಂತ ವಿದ್ಯಾರ್ಥಿಗಳು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.

ಪ್ರಸ್ತುತ ಇಂಜಿನಿಯರಿಂಗ್ ಶುಲ್ಕ 38 ಸಾವಿರ ರೂ.ಗಳಿದ್ದು, ಅದನ್ನು ಭರಿಸಲು ವಿದ್ಯಾರ್ಥಿಗಳಿಗೆ ಕಷ್ಟವೆನಿಸುತ್ತಿದೆ. ಆದರೆ ಈಗ ಆ ಶುಲ್ಕವನ್ನು 45-50 ಸಾವಿರ ರೂ.ಗಳಿಗೆ ಏರಿಕೆಯಾಗುವಂತಾಗಿದೆ. ಮೆಡಿಕಲ್ ಶುಲ್ಕದಲ್ಲೂ 10 ಸಾವಿರ ರೂ. ಹಾಗೂ ಡೆಂಟಲ್ ಕೋರ್ಸ್‍ನಲ್ಲೂ 10 ಸಾವಿರ ಶುಲ್ಕ ಏರಿಕೆಯು ಅತ್ಯಂತ ಖಂಡನೀಯವಾಗಿದೆ. ಅಲ್ಲದೆ ಕಳೆದ ವರ್ಷ ಲಭ್ಯವಿದ್ದ ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳು ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದ್ದರಿಂದ ಬಡ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣದ ಕನಸು ಕಮರಿದಂತಾಗಿದೆ.

ಈಗಾಗಲೇ ಹಲವು ಹಗರಣಗಳಲ್ಲಿ ವಿದ್ಯಾರ್ಥಿ ವಿರೋಧಿ ಕೃತ್ಯಗಳಲ್ಲಿ ಭಾಗವಹಿಸಿರುವ ಕಾಮೆಡ್-ಕೆ ಗೆ ಅಧಿಕೃತ ಮಾನ್ಯತೆ ನೀಡಿರುವ ಕ್ರಮವು ಸರ್ಕಾರದ ಅಸಂವೇದನಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಹಲವು ಅಕ್ರಮಗಳ ಆಗರವಾಗಿರುವ ಕಾಮೆಡ್-ಕೆ ನಿರ್ಭಂದಿಸುವ ಬದಲು ಮಾನ್ಯಗೊಳಿಸುತ್ತಿರುವ ಕ್ರಮ ಖಂಡನೀಯವಾಗಿದೆ ಎಂದು ಪತ್ರಿಕ ಹೇಳಿಕೆಯಲ್ಲಿ ಅಭಾವಿಪ ತಿಳಿಸಿದೆ.


Spread the love