ಮಂಗಳೂರು ; ಸಂದೇಶ ಕಲಾ ಪ್ರತಿಷ್ಠಾನದ ಪ್ರಶಸ್ತಿ ವಿವರ

Spread the love

ಮಂಗಳೂರು: ಕಲೆ, ಸಂಸ್ಕøತಿ ಮತ್ತು ಶಿಕ್ಷಣವನ್ನು ಪೋಷಿಸಲು 1989ರಲ್ಲಿ ಕರ್ನಾಟಕ ಪ್ರಾಂತೀಯ ಕಥೋಲಿಕ ಬಿಷಪರ ಮಂಡಳಿಯಿಂದ ಆರಂಬಿಸಲ್ಪಟ್ಟ ಸಂದೇಶ ಪ್ರತಿಷ್ಠಾನವು ವಿವಿದ ಚಟುವಟಿಕೆಗಳ ಮೂಲಕ ಈ ಕೆಲಸವನ್ನು ಮಾಡುತ್ತ ಬಂದಿದೆ. ಕಳೆದ 24ವರ್ಷಗಳಿಂದ ಕನ್ನಡ, ಕೊಂಕಣಿ ಹಾಗೂ ತುಳು ಸಾಹಿತ್ಯ ಸಂಸ್ಕøತಿಗೆ ಹಾಗೂ ಸಮಾಜಕ್ಕೆ ವಿವಿಧ ಕೊಡುಗೆ ನೀಡುತ್ತ ಬಂದ ನಾಡಿನ ಹಿರಿಯ ಸಾಹಿತಿಗಳನ್ನು, ಕಲಾವಿದರನ್ನು, ಶಿಕ್ಷಕರನ್ನು ಹಾಗೂ ಸಮಾಜ ಸೇವಕರನ್ನು ರಾಜ್ಯ ಮಟ್ಟದ ಪ್ರಶಸ್ತಿ ಗೌರವ ನೀಡಿ ಸನ್ಮಾನಿಸುತ್ತ ಬಂದಿದೆ.

ಈ ಪ್ರಶಸ್ತಿಗಳಿಗೆ ಯಾವುದೇ ಆರ್ಜಿಗಳನ್ನು ಪಡಕೊಳ್ಳದೆ ಈ ವರ್ಷ ಶ್ರೀಯುತ ನಾ ಡಿಸೋಜಾ ರವರ ಅಧ್ಯಸ್ತಿಕೆಯಲ್ಲಿರುವ ಆಯ್ಕೆ ಸಮಿತಿಯು ಪುರಸ್ಕøತರನ್ನು ಆಯ್ಕೆ ಮಾಡಿದೆ. ಪರಿಶುದ್ಧ ಹಸ್ತಗಳಿಂದ ಈ ಕೈಂಕಾರ್ಯವನ್ನು ಮಾಡುತ್ತ ಬಂದುದರಿಂದ ಸಂದೇಶ ಪ್ರತಿಷ್ಠಾನ ಕೊಡಮಾಡುವ ಗೌರವಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಇದೀಗ 25ನೇ ವರ್ಷದ ಪ್ರಶಸ್ತಿಯನ್ನು ಈ ಕೆಳಗಿನ ಮಹನೀಯರಿಗೆ ನೀಡಲಾಗಿದೆ.
ಡಾ. ಎಚ್. ಎಸ್. ವೆಂಕಟೇಶ ಮೂರ್ತಿ-ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೋದಿಗೆರೆ ಎಂಬ ಹಳ್ಳಿಯಲ್ಲಿ 1944ರಲ್ಲಿ ಜನಿಸಿದ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರು ತಮ್ಮ ಬದುಕಿನ ಮೂವತ್ತು ವರ್ಷಗಳನ್ನು ಹಳ್ಳಿಯಲ್ಲಿ ಕಳೆದು 1973ರಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ಸ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿದರು. ಉತ್ತಮ ಅಧ್ಯಾಪಕರೂ ಶ್ರೇಷ್ಠ ಮಾತುಗಾರರೂ ಆಗಿರುವ ಡಾ. ಎಚ್ಚೆಸ್ವಿ ಅವರು ಕ್ರಿಯಾಪರ್ವ, ಒಣಮರದ ಗಿಳಿಗಳು, ಅಮೇರಿಕಾದಲ್ಲಿ ಬಿಲ್ಲಹಬ್ಬ, ಉತ್ತರಾಯಣ, ಸೌಗಂಧಿಕಾ ಮುಂತಾದ ಕವನ ಸಂಕಲನಗಳನ್ನೂ ಹೆಜ್ಜೆಗಳು, ಉರಿಯ ಉಯ್ಯಾಲೆ, ಅಗ್ನಿವರ್ಣ, ಮಂಥರೆ ಮುಂತಾದ ನಾಟಕಗಳನ್ನೂ ಅಳಿಲು ರಾಮಾಯಣ, ಚಿನ್ನಾರಿಮುತ್ತ, ಹಕ್ಕಿ ಸಾಲು, ಹೂವಿನ ಶಾಲೆ ಮುಂತಾದ ಮಕ್ಕಳ ಕೃತಿಗಳನ್ನೂ-ಒಟ್ಟಾರೆಯಾಗಿ ಎಪ್ಪತ್ತೈದಕ್ಕೂ ಮಿಕ್ಕಿ ಕನ್ನಡದ ವಿವಿಧ ಪ್ರಕಾರಗಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

ಶ್ರೀಮತಿ ಗ್ಲಾಡಿಸ್ ರೇಗೊ- ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ
ಮಂಗಳೂರಿನ ಬೆಂದೂರಿನಲ್ಲಿ 1945ರಲ್ಲಿ ಜನಿಸಿದ ಶ್ರೀಮತಿ ಸಿಂಪ್ರೋಸಾ ಫಿಲೋಮಿನ ಗ್ಲಾಡಿಸ್ ಸಿಕ್ವೇರಾ ಅವರು ಕೊಂಕಣಿ ಸಾಹಿತ್ಯದ ವಲಯದಲ್ಲಿ ಗ್ಲಾಡಿಸ್ ರೇಗೊ ಎಂದೇ ಹೆಸರು ಪಡೆದವರು. ನಾಲ್ಕು ಸಣ್ಣ ಕತೆಗಳ ಸಂಕಲನ, ಆರು ಜಾನಪದ ಕೃತಿಗಳು, ಎರಡು ಕಥಾ ಸಂಕಲನಗಳೂ ಸೇರಿದಂತೆ ಕಾವ್ಯ, ಸಣ್ಣಕತೆ, ಜಾನಪದ, ವ್ಯಕ್ತಿ ಪರಿಚಯ, ಸಂಶೋಧನೆ ಇತ್ಯಾದಿ ವಲಯಗಳಲ್ಲಿ ಸುಮಾರು 27ರಷ್ಟು ಪುಸ್ತಕ ರಚನೆ ಮಾಡಿ ಪ್ರಕಾಶಿಸಿರುವ ಗ್ಲಾಡಿಸ್ ರೇಗೋ ಅವರು ತಮ್ಮದೇ ಆದ ಆಕಾಶ ಪ್ರಕಾಶನ್ ಎಂಬ ಪ್ರಕಾಶನ ಸಂಸ್ಥೆಯನ್ನು ಹೊಂದಿದ್ದಾರೆ.
ಅಂಚೆ ಚೀಟಿ, ನೋಟುಗಳು, ನಾಣ್ಯಗಳು, ಮೊದಲ ಅಂಚೆ ಕವರುಗಳು ಇತ್ಯಾದಿಗಳನ್ನು ಸಂಗ್ರಹಿಸುವ ಹವ್ಯಾಸವುಳ್ಳ ಶ್ರೀಮತಿ ಗ್ಲಾಡಿಸ್ ಅವರು ಅವುಗಳ ಪ್ರದರ್ಶನದ ವೇಳೆ ಬಹುಮಾನಗಳನ್ನೂ ಪಡೆದುಕೊಂಡಿದ್ದಾರೆ.

ಶ್ರೀ ದೇವದಾಸ್ ಕಾಪಿಕಾಡ್-ಸಂದೇಶ ತುಳು ಸಾಹಿತ್ಯ ಪ್ರಶಸ್ತಿ
ಬಂಟ್ವಾಳದ ಸಜೀಪದ ಲ್ಲಿ ಜನಿಸಿದ ಶ್ರೀ ದೇವದಾಸ್ ಕಾಪಿಕಾಡ್, ಅವರ ಪತ್ನಿ ಶ್ರೀಮತಿ ಶರ್ಮಿಳಾ ಹಾಗೂ ಪುತ್ರ ಮಾಸ್ಟರ್ ಅರ್ಜುನ್- ತುಳು ರಂಗಭೂಮಿ ಹಾಗೂ ಚಲನ ಚಿತ್ರಗಳಿಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟವರು. ‘ಚಾ ಪರ್ಕ’ ತಂಡ ರಚನೆಯಾದ ಬಳಿಕ ಸುಮಾರು ಐವತ್ತು ನಾಟಕಗಳನ್ನು ಮಾನ್ಯ ಕಾಪಿಕಾಡರು ರಚಿಸಿ ತಮ್ಮ ತಂಡದ ಮೂಲಕ ವೇದಿಕೆಯೇರಿಸಿದ್ದಾರೆ. ಪ್ರತಿ ನಾಟಕವೂ ನೂರರಿಂದ ಇನ್ನೂರು ಪ್ರದರ್ಶನಗಳನ್ನು ಕಂಡಿದೆ. ಅದರಲ್ಲೂ ಪುದರ್ ದೀತಿಜಿ (ಹೆಸರು ಇಟ್ಟಿಲ್ಲ) ಎಂಬ ನಾಟಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಮುಂದಕ್ಕೆ ಸಾಗಿದೆ. ಇದಲ್ಲದೆ ದೇವೆರ್ ದೀಲೆಕ್ಕಾಪುಂಡ್, ಮಾಮು, ಪಂಡ ನಂಬಯರ್, ಬೊಳ್ಳಿ, ಗಂಟೇತಾಂಡ್ ಮುಂತಾದ ನಾಟಕಗಳು ಅತ್ಯಂತ ಜನಪ್ರಿಯ ಎನಿಸಿವೆ.

ಸುಗಂಥಾ ಸತಿಯರಾಜ್– ಸಂದೇಶ ಉತ್ತಮ ಅಧ್ಯಾಪಕರು ಪ್ರಶಸ್ತಿ
1942ರಲ್ಲಿ ಚೆನ್ನೈಯಲ್ಲಿ ಜನಿಸಿದ ಕು. ಸುಗಂಥಾ ಸತಿಯರಾಜ್ ತಮ್ಮ ವಿದ್ಯಾಭ್ಯಾಸವನ್ನು ತಮಿಳುನಾಡಿನಲ್ಲಿ ಮುಗಿಸಿ ಕರ್ನಾಟಕದ ಬಳ್ಳಾರಿಗೆ ಬಂದು ಅದನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. 1975ರಿಂದ ಹದಿನೇಳು ವರ್ಷಗಳ ಕಾಲ ಬಳ್ಳಾರಿಯ ಸೈಂಟ್ ಫಿಲೋಮಿನಾಸ್ ಪ್ರೌಢಶಾಲೆಯಲ್ಲಿ ಇಂಗ್ಲಿಷ್, ಸೋಷ್ಯಲ್ ಸ್ಟಡೀಸ್ ಮುಂತಾದ ಪಾಠಗಳನ್ನು ಕಲಿಸುತ್ತಿದ್ದರು.
ಶಾಲೆ ಬಿಟ್ಟು ಹೊರ ನಡೆದ ಒಂದು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತಂದು ಅವರಿಗೆ ವಿದ್ಯಾಭ್ಯಾಸ ನೀಡಿ ದಡ ಹತ್ತಿಸಿದ ಹಿರಿಮೆ ಕು. ಸುಗಂಥಾ ಅವರದು. ಮಹಿಳೆಯರಿಗೆ ಆದಾಯ ಉಂಟುಮಾಡಿಕೊಡುವ ಸ್ಕೀಮುಗಳು, ಉದ್ಯೋಗ ದೊರಕುವುದಕ್ಕೆ ಬೇಕಾದ ತರಬೇತಿ -ಇತ್ಯಾದಿ ಕೆಲಸಗಳಲ್ಲಿ ತಲ್ಲೀನರಾಗಿರುವ ಕು. ಸುಗಂಥಾ ಸತಿಯರಾಜ್ ಅವರು ಶಾಲೆಯ ವಿದ್ಯಾಭ್ಯಾಸಕ್ಕಿಂತ ಭಿನ್ನವಾದ ಬಗೆಯಲ್ಲಿಯೂ ವಿದ್ಯಾಭ್ಯಾಸ ನೀಡಿ ಮಹಿಳೆಯರ ಬದುಕಿನಲ್ಲಿ ಆಶಾದಾಯಕ ವಾತಾವರಣ ನಿರ್ಮಿಸಿಕೊಟ್ಟರು.

ಉಸ್ತಾದ್ ರಫೀಕ್ ಖಾನ್– ಸಂದೇಶ ಕಲಾ ಪ್ರಶಸ್ತಿ
ತಮ್ಮ ಒಂಬತ್ತನೆಯ ಹರೆಯದಿಂದ ಸಿತಾರ್ ಅಭ್ಯಾಸ ಮಾಡಲು ಪ್ರಾರಂಭಿಸಿದ ರಫೀಕ್ ಖಾನ್ ಮುಂಬಯಿಯ ಗಂಧರ್ವ ಮಹಾವಿದ್ಯಾಲಯದಲ್ಲಿ ಸಂಗೀತದ ಪದವಿ ಪಡೆದರು. ಮುಂಬಯಿಯ ಪ್ರತಿಷ್ಠಿತ ಸುರ್‍ಮಣಿ ಪ್ರಶಸ್ತಿ ಶ್ರೀಯುತರಿಗೆ ಲಭಿಸಿದ್ದು ಅವರು ಕೇವಲ ಇಪ್ಪತ್ತಮೂರರ ಹರೆಯದವರಾಗಿದ್ದಾಗ. ಆಕಾಶವಾಣಿಯ ‘ಉನ್ನತ ಶ್ರೇಣಿ’ ಪಡೆದ ಸಿತಾರ್ ವಾದಕರಾದ ರಫೀಕ್ ಖಾನ್ ಮಂಗಳೂರು ಆಕಾಶವಾಣಿಯ ಕಲಾವಿದರಾಗಿದ್ದಾರೆ. ಪುಣೆಯ ಸವಾಯ್‍ಗಂಧರ್ವ ಸಂಗೀತೋತ್ಸವ, ಕೊಲ್ಲಾಪುರದ ಸಾಹು ಮಹಾರಾಜ್ ಸಂಗೀತ ಮಹೋತ್ಸವ, ಮೂಡಬಿದಿರೆಯ ಆಳ್ವಾಸ್ ವಿರಾಸತ್, ಜಯಪುರದ ಮನ ಮೋಹನ ಭಟ್ ಸಂಗೀತ ಸಮಾರಾಧನೆ- ಮುಂತಾದ ಅದೆಷ್ಟೋ ಕಛೇರಿಗಳಲ್ಲಿ ಕಾರ್ಯಕ್ರಮ ನೀಡಿ ಪ್ರಸಿದ್ಧರಾಗಿದ್ದಾ ಯುರೋಪು, ಅಮೇರಿಕ, ಗಲ್ಫ್ ರಾಜ್ಯಗಳು, ಸಿಂಗಾಪುರ್, ರಷ್ಯಾ, ಮಲೇಷ್ಯಾ- ಹೀಗೆ ಜಗತ್ತಿನ ಪ್ರಮುಖ ರಾಷ್ಟ್ರಗಳನ್ನು ಹಲವು ಬಾರಿ ಸುತ್ತಾಡಿ ಕಾರ್ಯಕ್ರಮ ನೀಡಿದ್ದಾರೆ.

ಶ್ರೀ ಅಲೆಕ್ಸಾಂಡರ್ ಜೋಯೆಲ್ ಪಿರೇರಾ- ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ
ಮಂಗಳೂರು ನಿವಾಸಿಯಾಗಿರುವ ಶ್ರೀ ಅಲೆಕ್ಸಾಂಡರ್ ಜೋಯೆಲ್ ಪಿರೇರಾ ಅವರದು ಕೊಂಕಣಿ ಸಂಗೀತ ವಲಯದಲ್ಲೊಂದು ವಿಶಿಷ್ಟ ಹೆಸರು. ಕೀಬೋರ್ಡ್, ಗಿಟಾರ್, ಮ್ಯಾಂಡಲಿನ್, ಎಕಾರ್ಡಿಯನ್, ಸಿತಾರ್ ಮುಂತಾದ ಹಲವು ವಾದ್ಯಗಳನ್ನು ನುಡಿಸಬಲ್ಲವರಾದ ಶ್ರೀಯುತರು ಕೊಂಕಣಿ ಭಾಷೆಯಓರ್ವ ಪ್ರಮುಖ ಸಂಗೀತ ವಿನ್ಯಾಸಕಾರರು ಕೂಡ. ವಿವಿಧ ಭಾಷೆ, ಸಂಸ್ಕøತಿ ಹಾಗೂ ಪ್ರದೇಶಗಳ ಮುನ್ನೂರ ಐವತ್ತಕ್ಕೂ ಮಿಕ್ಕಿ ಆಲ್ಬಮ್‍ಗಳಿಗೆ ಸಂಗೀತ ಒದಗಿಸಿದ್ದಾರೆ. ಒಂದೂವರೆ ಸಾವಿರದಷ್ಟು ಸ್ತುತಿ ಗೀತೆಗಳಿಗೆ ಹಾಗೂ ಸುಮಾರು ನೂರ ಇಪ್ಪತ್ತರಷ್ಟು ಹಾಡುಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ .

ಶ್ರೀ ಥಾಮಸ್ ಡಿ’ಸೋಜ – ಸಂದೇಶ ಮಾಧ್ಯಮ ಪ್ರಶಸ್ತಿ
ಶಿವಮೊಗ್ಗ ಜಿಲ್ಲೆಯ ಅರಸಾಳು ಗ್ರಾಮದಲ್ಲಿ 1955ರಲ್ಲಿ ಜನಿಸಿದ ಶ್ರೀ ಥಾಮಸ್ ಡಿಸೋಜ ಅವರು ಎಳವೆಯಿಂದಲೇ ಕ್ರೀಡೆ, ನಾಟಕ, ಸಂಗೀತಾದಿಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಚಲನಚಿತ್ರ ಮಂದಿರದ ಮಾಲಿಕರಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಗೌರವ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2014-15ರಅವಧಿಗೆ ಶ್ರೀ ಥಾಮಸ್ ಡಿಸೋಜ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿ ಚಿತ್ರರಂಗದ ಸರ್ವತೋಮುಖ ಅಭಿವೃದ್ಧಿಗೋಸ್ಕರ ದುಡಿಯತೊಡಗಿದರು. ರಾಜ್ಯಾದ್ಯಂತ ಸುಮಾರು ಆರುನೂರ ಐವತ್ತುಚಿತ್ರ ಮಂದಿರಗಳ ಉಳಿವಿಗಾಗಿ ಹಾಗೂ ಚಿತ್ರರಂಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

ಶ್ರೀ ಜಿ.ಎಸ್. ಜಯದೇವ – ಸಂದೇಶ ವಿಶೇಷ ಪ್ರಶಸ್ತಿ
ಅರುವತ್ತ ನಾಲ್ಕರ ಹರೆಯದ ಜಿ. ಎಸ್. ಜಯದೇವ ಕಾಲೇಜು ಅಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರೂ 2001ರಲ್ಲಿ ಸ್ವಯಂ ನಿವೃತ್ತಿ ಪಡೆದರು. 1992ರಲ್ಲಿ ಚಾಮರಾಜನಗರದಲ್ಲಿ ನೆಲೆಗೊಂಡ ಶ್ರೀಯುತರು ದೀನಬಂಧು ಟ್ರಸ್ಟನ್ನು ಪ್ರಾರಂಭಿಸಿದರು. ಆ ಟ್ರಸ್ಟ್‍ನ ಮೂಲಕ ಹಲವು ಸರಕಾರಿ ಶಾಲೆಗಳ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಅಶನ, ವಸನ, ವಸತಿ ಹಾಗೂ ವಿದ್ಯಾಭ್ಯಾಸ ನೀಡತೊಡಗಿದರು.
ಮೈಸೂರಿನಲ್ಲಿರುವ ನಿರಾಶ್ರಿತ ಮಹಿಳೆಯರ ಪುನರ್ವಸತಿ ಕೇಂದ್ರವಾದ ಶಕ್ತಿಧಾಮ, ಬಿ. ಆರ್. ಹಿಲ್ಸ್‍ನಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರ, ಕರ್ನಾಟಕ ಸರಕಾರದ ಗಡಿ ಅಭಿವೃದ್ಧಿ ಸಮಿತಿಯ ಸದಸ್ಯ ಇತ್ಯಾದಿಗಳಲ್ಲಿ ವಿಶೇಷ ದುಡಿಮೆಗೈದಿದ್ದಾರೆ.

ಡಾ. ನಾ. ದಾಮೋದರ ಶೆಟ್ಟಿ, ಶ್ರೀಮತಿ ಸಾರಾ ಅಬೂಬಕ್ಕರ್, ಶ್ರೀಮತಿ ಚಂದ್ರಕಲಾ ನಂದಾವರ ಶ್ರೀ ಎರಿಕ್ ಒಝೆರಿಯೊ ಹಾಗೂ ಶ್ರೀ ರಿಚರ್ಡ್ ಲುವಿಸ್ ಅವರು ಆಯ್ಕೆ ಸಮಿತಿ ಸದಸ್ಯರಾಗಿ ಸಹಕರಿಸಿದ್ದಾರೆ.


Spread the love