ಮಂಗಳೂರು: ಸುಡುಮದ್ದು ತಯಾರಿಕಾ ಘಟಕ ನಿರ್ಬಂಧಿಸಿ ಆದೇಶ

Spread the love

ಮಂಗಳೂರು: ಸುಡುಮದ್ದು ತಯಾರಿಕಾ ಘಟಕ ನಿರ್ಬಂಧಿಸಿ ಆದೇಶ

ಮಂಗಳೂರು: ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಡ್ತಾರು ಸುಡುಮದ್ದು ತಯಾರಿಕಾ ಘಟಕದಲ್ಲಿ ಜ.28ರಂದು ಸಂಭವಿಸಿದ ಭೀಕರ ಸ್ಫೋಟದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿರುತ್ತಾರೆ.

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ಅಗ್ನಿ ಅನಾಹುತಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿರ್ಬಂಧಿಸಿ, ಮುಂದಿನ ಆದೇಶದವರೆಗೆ ಅಮಾನತಿನಲ್ಲಿರಿಸಿ ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಆದೇಶಿಸಿದ್ದಾರೆ.

ಪಟಾಕಿ ಅಗ್ನಿ ಅನಾಹುತ ತಪ್ಪಿಸಲು ಸಮಿತಿ ರಚನೆ
ಸುಡುಮದ್ದು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗೆಗಳ ಅಗ್ನಿ ಅನಾಹುತಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಸಮಿತಿಗಳನ್ನು ರಚಿಸಲಾಗಿದೆ.

ಮಂಗಳೂರು ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯಲ್ಲಿ ಮಂಗಳೂರು ವಲಯ ಅಗ್ನಿಶಾಮಕ ಅಧಿಕಾರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುಡುಮದ್ದು ತಯಾರಿಕಾ ಘಟಕಗಳಿಗೆ ನಿಯೋಜಿತ ಅಧಿಕಾರಿಗಳು ಖುದ್ದು ಸ್ಥಳಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಮತ್ತು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗೆಗಳು ಸ್ಪೋಟಕಗಳ ನಿಯಮಗಳು 2008 ರಂತೆ ನಿಯಮಾನುಸಾರ ಕೂಲಂಕುಶವಾಗಿ ಪರಿಶೀಲಿಸಿ ದಾಖಲೆಗಳೊಂದಿಗೆ ಸ್ಪಷ್ಟ ಅಭಿಪ್ರಾಯವನ್ನು ಸ್ಪೋಟಕಗಳ ನಿಯಮಗಳು 2008 ರಂತೆ ಚೆಕ್ ಲಿಸ್ಟ್ನೊಂದಿಗೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.


Spread the love