ಮಂಗಳೂರು: ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಗ್ರಾಹಕರಿಗೆ ಮರಳು ಪೂರೈಕೆ

ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಗ್ರಾಹಕರಿಗೆ ಮರಳು ಪೂರೈಕೆ

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಾಮಗಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ನಿರ್ದಿಷ್ಟ ಬೆಲೆ ಮತ್ತು ನಿಗದಿತ ಸಮಯದಲ್ಲಿ ಮರಳು ಪೂರೈಕೆಯಾಗುವ ನಿಟ್ಟಿನಲ್ಲಿ dksandbazaar.com ಎಂಬ ಆ್ಯಪ್ ಅನ್ನು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ರಚಿಸಲಾಗಿದ್ದು, 2019ನೇ ಸಾಲಿನ ಮೇ 22 ರಿಂದ ಕಾರ್ಯಾರಂಭ ಮಾಡಲಾಗಿರುತ್ತದೆ. ಸದರಿ ಆ್ಯಪ್ ಮೂಲಕ ಬುಕ್ ಮಾಡಿದ 48 ಗಂಟೆಗಳಲ್ಲಿ ಗ್ರಾಹಕರಿಗೆ ಮರಳನ್ನು ಪೂರೈಕೆ ಮಾಡಲಾಗುತ್ತಿದೆ. ಇದುವರೆಗೆ 11,466 ಬೇಡಿಕೆಗಳು ಸ್ವೀಕೃತವಾಗಿದ್ದು, 11,028 ಬೇಡಿಕೆಗಳಿಗೆ ಮರಳನ್ನು ಆ್ಯಪ್ ಮೂಲಕ ಯಶಸ್ವಿಯಾಗಿ ಪೂರೈಸಲಾಗಿರುತ್ತದೆ. ಪ್ರಸ್ತುತ ತುಂಬೆ ಡ್ಯಾಂನಲ್ಲಿ ಹೂಳೆತ್ತುವಿಕೆಯಿಂದ ಬಂದಂತಹ ಮರಳನ್ನು ಹಾಗೂ ಅಖZ ಪ್ರದೇಶದಲ್ಲಿ ಗುರುತಿಸಿರುವ ಮರಳು ದಿಬ್ಬಗಳಿಂದ ತೆರವುಗೊಳಿಸಿದ ಮರಳನ್ನು ಸದರಿ ಆ್ಯಪ್ ಮೂಲಕ ಗ್ರಾಹಕರಿಗೆ ಪೂರೈಸಲಾಗುತ್ತಿದೆ.

ಮರಳಿನ ಮಾರಾಟ ದರ :- ಅಖZ ಪ್ರದೇಶದಲ್ಲಿನ ಮರಳಿನ ಪ್ರತಿ ಲೋಡ್‍ಗೆ ರೂ.5,500, ತುಂಬೆ ಡ್ಯಾಂನಲ್ಲಿ ಹೂಳೆತ್ತುವಿಕೆಯಿಂದ ಬಂದ ಮರಳಿನ ಪ್ರತಿ ಲೋಡ್‍ಗೆ ರೂ.4,830. CREDAI, ಸಿವಿಲ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್, ವಾಹನ ಮಾಲೀಕರು ಹಾಗೂ ಎಲ್ಲಾ ತಾತ್ಕಾಲಿಕ ಪರವಾನಿಗೆದಾರರೊಂದಿಗೆ ಅಕ್ಟೋಬರ್ 11 ರಂದು ಸಭೆ ನಡೆಸಿ ಸದರಿಯವರ ಅಹವಾಲುಗಳನ್ನು ಹಾಗೂ ಬೇಡಿಕೆಗಳನ್ನು ಸ್ವೀಕರಿಸಲಾಗಿದ್ದು, ಪ್ರಸ್ತುತವಾಗಿ ಆ್ಯಪ್‍ನಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿ ಬಲ್ಕ್ ಆರ್ಡರ್‍ಗಳನ್ನು ಸ್ವೀಕರಿಸಲಾಗುತ್ತಿದೆ.

ಜಿಲ್ಲೆಯಲ್ಲಿನ ಎಲ್ಲಾ ಜನಸಾಮಾನ್ಯರು ಸ್ಯಾಂಡ್ ಬಜಾರ್ ಆ್ಯಪ್‍ನ ಮೂಲಕ ಮರಳು ಬೇಡಿಕೆಯನ್ನು ನೊಂದಾಯಿಸುವ ಬಗ್ಗೆ ಹಾಗೂ ಆ್ಯಪ್ ಬಳಸುವ ವಿಧಾನದ ಬಗ್ಗೆ ಮಾಹಿತಿಯನ್ನು ತಿಳಿಸಲು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕ್ರಮ ಕೈಗೊಳ್ಳುವಂತೆ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಕ್ಟೋಬರ್ 16ರಂದು ತರಬೇತಿ ನೀಡಲಾಗಿರುತ್ತದೆ.

ಆದ್ದರಿಂದ ಸ್ಯಾಂಡ್ ಬಜಾರ್ ಆ್ಯಪ್ ಅನ್ನು ಯಶಸ್ವಿಯಾಗಿ ಮುನ್ನಡೆಸಿ, ಜಿಲ್ಲೆಯಲ್ಲಿನ ಎಲ್ಲಾ ಗ್ರಾಹಕರು ಸ್ಯಾಂಡ್ ಬಜಾರ್ ಆ್ಯಪ್ ನಲ್ಲಿ ಮರಳಿನ ಬೇಡಿಕೆಯನ್ನು ನೊಂದಣಿ ಮಾಡಲು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದ್ದು, ಕೇವಲ ಆ್ಯಪ್ ಮೂಲಕ ಮಾತ್ರ ಮರಳನ್ನು ಪೂರೈಕೆ ಮಾಡಿಕೊಳ್ಳುವಂತೆ, ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.