ಮಲಬಾರ್ ವತಿಯಿಂದ ಮಹಿಳಾ ಸಾಧಕರಿಗೆ ಸನ್ಮಾನ

Spread the love

ಮಲಬಾರ್ ಗೋಲ್ಡ್‌ನಿಂದ ಮಹಿಳಾ ಸಾಧಕರಿಗೆ ಸನ್ಮಾನ

ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು  ಉಡುಪಿ ಮಳಿಗೆಯಲ್ಲಿ ಜರಗಿತು.

ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ವೀಣಾ ಕುಮಾರಿ(ವೈದ್ಯಕೀಯ), ಅಸ್ಮಾ ಬಾನು(ಕೃಷಿ), ಸಂಧ್ಯಾ ಉದಯ್(ಸಂಘಟಕಿ), ಯಶೋಧಾ ಕೇಶವ್ (ಮಾಧ್ಯಮ) ಅವರನ್ನು ಕುಂದಾಪುರ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಸನ್ಮಾನಿಸಿದರು.

ಬಳಿಕ ಮಾತನಾಡಿದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಮಹಿಳೆಯರಿಗೆ ತಮ್ಮಲ್ಲಿರುವ ಸಾಮರ್ಥ್ಯದ ಅರಿವು ಇರುವುದಿಲ್ಲ. ಅದಕ್ಕೆ ಪ್ರೋತ್ಸಾಹ ದೊರೆತರೆ ಮಹಿಳೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಹಾಸ್ಯ ಭಾಷಣಕಾರ್ತಿ ಸಂಧ್ಯಾ ಶೆಣೈ, ಕೈಮಗ್ಗ ಸೀರೆಯ ರೂಪದರ್ಶಿ ವಿದ್ಯಾ ಸರಸ್ವತಿ ಮಾತನಾಡಿದರು. ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರೆಮಹನ್, ಸ್ಟೋರ್ ಮೆನೇಜರ್ ಪುರಂದರ ತಿಂಗಳಾಯ, ಜಿಆರ್‌ಎಂ ರಾಘವೇಂದ್ರ ನಾಯಕ್, ಮಾರ್ಕೆಟಿಂಗ್ ಮೆನೇಜರ್ ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Spread the love