ಮಸ್ಕತ್ ನಲ್ಲಿ ನಾಡೋಜ ಡಾ| ಕಯ್ಯಾರ ಕಿಞ್ಞಣ್ಣರೈ ಯವರಿಗೆ   ಭಾವಪೂರ್ವಕ  ಶ್ರದ್ಧಾಂಜಲಿ   

Spread the love

ಓಮಾನಿನ ಮಸ್ಕತ್ ನಲ್ಲಿ   ನೆಲೆಸಿರುವ    ಬಂಟ ಬಾಂಧವರು  2015 ಆಗಸ್ಟ್ ೧೪ ನೇ ತಾರೀಕು ಶುಕ್ರವಾರ ೫.೦೦ ಗಂಟೆಗೆ ಮಸ್ಕತ್ ನ  ಖುರುಂ ಗಾರ್ಡನ್ ಜಂಗಲ್ ಥೀಮ್ ಹೋಟೆಲ್ ಸಭಾಂಗಣದಲ್ಲಿ , ಅಗಲಿದ  ಕರ್ನಾಟಕ ಗಡಿನಾಡ ಕಾಸರಗೋಡಿನ ಕವಿ, ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಕನ್ನಡಿಗ ದಿವ್ಯ ಚೇತನ ನಾಡೋಜ ಡಾ| ಕಯ್ಯಾರ ಕಿಞ್ಞಣ್ಣರೈ ಯವರಿಗೆ  ಮತ್ತು  ಮಂಗಳೂರಿನ ಸುಪ್ರಸಿದ್ದ ನಾಟ್ಯ ಗುರು ಮಾಸ್ಟರ್ ವಿಠಲ ಶೆಟ್ಟರಿಗೆ ಗೌರವ ಪೂರ್ವ ಶ್ರದ್ಧಾಂಜಲಿ ಸಮರ್ಪಿಸಿದರು.

qw

ಮಸ್ಕತ್ ನ ಹಿರಿಯ ಉದ್ಯಮಿ ಶ್ರೀ ಶಶಿಧರ್ ಶೆಟ್ಟಿ , ಹಿರಿಯ ಗಣ್ಯರು , ಬಂಟರ ಕೂಟದ  ಪದಾಧಿಕಾರಿಗಳು ಮತ್ತು ಸದಸ್ಯರು  ಜ್ಯೋತಿ ಬೆಳಗಿಸಿ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ಶಂಕರ್  ಶೆಟ್ಟಿಯವರು ,ಸಂತಾಪ ಸಭೆಯನ್ನುದ್ದೇಶಿಸಿ ಮಾತನಾಡಿ ಗಡಿನಾಡ ಕವಿ ಎಂದೇ ಖ್ಯಾತಿವೆತ್ತ,  ಕಾಸರಗೋಡು ಹೆಸರಿನೊಂದಿಗೆ ಇಡೀ ಕನ್ನಡ ನಾಡೇ ನೆನೆಯುವ ನಾಡೋಜ ದಿವಂಗತ ಡಾ| ಕಯ್ಯಾರ ಕಿಞ್ಞಣ್ಣ ರೈಗಳ  ಬಗ್ಗೆ  ಸವಿಸ್ಥಾರವಾಗಿ ಸಭೆಯ ಮುಂದ್ಡಿಟ್ಟರು.   ಕಯ್ಯಾರ ಕಿಞ್ಞಣ್ಣ ರೈ ಅವರು ಕೇವಲ   ‘ಕಾಸರಗೋಡು ಕನ್ನಡನಾಡಿನ ಅವಿಭಾಜ್ಯ ಅಂಗ’ ಎಂಬ ಕನವರಿಕೆಯ ಕನ್ನಡಪರ ಹೋರಾಟಗಾರಷ್ಟೆ ಅಲ್ಲ; ಕವಿ, ಕೃಷಿಕ, ಶಿಕ್ಷಕ, ಪತ್ರಕರ್ತ ಕೂಡ ಎಂದು ನೆನಪಿಸಿ  ಕಾಸರಗೋಡು ಕರ್ನಾಟಕಕ್ಕೆ ಸೇರ್ಪಡೆಯಾಗಲು ತಟಸ್ಥವಾಗಿರುವ ಮಹಾಜನ ವರದಿಯನ್ನು ಪುನರ್ಪರಿಶೀಲಿಸಿ ಅನುಷ್ಠಾನಕ್ಕೆ ಬರುವಂತೆ ಎಲ್ಲಾ ಕರ್ನಾಟಕ ಪರಸಂಘಟನೆಗಳು ಪ್ರಯತ್ನಿಸಬೇಕೆಂದು ಮನವಿಮಾಡಿಕೊಂಡರು.  ಅಪಾರ ಅಭಿಮಾನಿ ಬಳಗವನ್ನು ಬಿಟ್ಟು ಹೋಗಿರುವ , ಎಲ್ಲಾ ವರ್ಗದ ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡಿದ್ದ ನಾಡೋಜರು  ತನ್ನ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದ ಆದರ್ಶ, ಧೋರಣೆಗಳು ಮುಂದಿನ ಜನಾಂಗಕ್ಕೂ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.

ಶ್ರೀ ಶಶಿಧರ್ ಶೆಟ್ಟಿ ಯವರು  ,ನಾಟ್ಯ ಶಾಂತಲಾ ಪ್ರಶಸ್ತಿ ವಿಜೇತ ನಾಟ್ಯ ಗುರು ದಿವಂಗತ ಮಾಸ್ಟರ್ ವಿಠಲ ಶೆಟ್ಟಿಯವರ  ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಓರ್ವ ಧೀಮಂತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದರು.   ಐದು ಸಾವಿರ ಮಂದಿಗೆ ನೃತ್ಯ ಕಲಿಸಿದ ಗುರು ಮಾಸ್ಟರ್ ವಿಠಲ ಶೆಟ್ಟಿ ಒಂದು ಕಾಲ ಘಟ್ಟದ ಕಲಾ ವಿಸ್ಮಯ. ಏಳು ದಶಕದ ಹಿಂದೆ ಮಹಾನ್ ಗುರು ರಾಜನ್ ಅಯ್ಯರ್ ಅವರ ಕರಕಮಲ ಸಂಜಾತ. ದಿ.ಎಂ.ಎ.ದೇವಾಡಿಗರಿಂದ ಸಂಗೀತಾಭ್ಯಾಸ. ನೃತ್ಯಕೌಸ್ತುತ ಗುರುಕುಲ ಆರಂಭ. ಚಲನಚಿತ್ರ ರಂಗದ ಮಿನುಗುತಾರೆ ಕಲ್ಪನಾ ಶಿಷ್ಯೆ. 80ರ ದಶಕದಲ್ಲಿ  ಸ್ವೀಡನ್, ಓಸ್ಲೋ, ಕೋಪೆನ್ಹೆಗನ್, ಸ್ಟಾಕ್ಹೋಂ – ಗಳಲ್ಲಿ ನೃತ್ಯ ಪ್ರದರ್ಶನ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸ೦ಗೀತ ನೃತ್ಯ ಅಕಾಡೆಮಿಯ ಕಲಾಶ್ರೀ ಪ್ರಶಸ್ತಿ ಜೊತೆಗೆ ಹಲವಾರು ನೃತ್ಯ ಸ೦ಸ್ಥೆಯಿ೦ದ ನೂರಾರು ಪ್ರಶಸ್ತಿ  ಗಳಿಸಿದ ಮಾಸ್ಟರ್ ವಿಠಲ ಶೆಟ್ಟಿಯವರ ಗತ ದಿನಗಳನ್ನು ನೆನಪಿಸಿ ಕೊಟ್ಟರು . ಬಳಿಕ ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಸರ್ವರಿಗೂ ಶ್ರದ್ಧಾಂಜಲಿ ಅರ್ಪಿಸಲು ಮೌನ ಪ್ರಾರ್ಥನೆಗೆ ಅನುವು ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ  ಓಮನ್ ಬಂಟರ ಕೂಟದ  ಪದಾಧಿಕಾರಿಗಳು ಮತ್ತು ಸದಸ್ಯರು   ಪಾಲ್ಗೊಂಡಿದ್ದರು . ಎಲ್ಲರೂ ಭಾವಚಿತ್ರಗಳಿಗೆ  ಪುಷ್ಪವೃಷ್ಠಿ ಮೂಲಕ ತಮ್ಮ ಭಾವಪೂರ್ವ ಶ್ರದ್ಧಾಂಜಲಿಯನ್ನು ಗೌರವದೊಂದಿಗೆ ಸಲ್ಲಿಸಿ ಅಂತಿಮ ನಮನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.

ಕಾರ್ಯಕ್ರಮಕ್ಕೆ ಸಭಾಂಗಣದಲ್ಲಿ ಸ್ಥಳಾವಕಾಶವನ್ನು ಓಮನ್ ಕೆಮಿಕಲ್ ಕಂಪನಿಯವರು ಮಾಡಿಕೊಟ್ಟಿದ್ದು, ಸಕಲ ವ್ಯವಸ್ಥೆ ಯನ್ನು ಅಭೀರ್ ಗ್ರೂಪ್ ನ  ಶ್ರೀ ಶಶಿಧರ್ ಶೆಟ್ಟಿ ಯವರು ನಿರ್ವಹಿಸಿದ್ದರು .


Spread the love