ಮಹಾಮಳೆಗೆ ಉಡುಪಿಯಲ್ಲಿ 75 ಕೋಟಿ ರೂ.ಮೌಲ್ಯದ ಆಸ್ತಿಪಾಸ್ತಿ ನಷ್ಟ:  ಸಚಿವೆ ಜಯಮಾಲಾ

Spread the love

ಮಹಾಮಳೆಗೆ ಉಡುಪಿಯಲ್ಲಿ 75 ಕೋಟಿ ರೂ.ಮೌಲ್ಯದ ಆಸ್ತಿಪಾಸ್ತಿ ನಷ್ಟ:  ಸಚಿವೆ ಜಯಮಾಲಾ

ಬೆಂಗಳೂರು: ಕಳೆದ 10 ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಸುಮಾರು 75 ಕೋಟಿ ರೂ. ಹೆಚ್ಚು ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಸ್ತುವಾರಿ ಸಚಿವೆ ಜಯಮಾಲಾ ತಿಳಿಸಿದರು.

ಶನಿವಾರ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತವಾಗಿ ಸುರಿಯುತ್ತಿರುವ ಮಹಾಮಳೆಗೆ 9 ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸುಮಾರು 35 ಲಕ್ಷ ರೂ. ಜೀವಹಾನಿ ಪರಿಹಾರವನ್ನು ಈಗಾಗಲೆ ನೀಡಲಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ಸಂಭವಿಸಿರುವ ಆಸ್ತಿಪಾಸ್ತಿ ನಷ್ಟಕ್ಕೆ 75 ಕೋಟಿ ರೂ.ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಮಹಾಮಳೆಯಿಂದಾಗಿ ಉಡುಪಿಯ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಮಳೆನಿಂತ ತಕ್ಷಣ ರಸ್ತೆಗಳ ದುರಸ್ಥಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 1,143 ಮನೆಗಳು ಕುಸಿದು ಬಿದ್ದಿವೆ. ಹಾಗೂ 3,029 ವಿದ್ಯುತ್ ಕಂಬಗಳು, 439 ಟ್ರಾನ್ಸ್‌ಫಾರಂಗಳು ಕುಸಿದು ಬಿದ್ದಿವೆ ಎಂದು ಅವರು ಮಾಹಿತಿ ನೀಡಿದರು.

9 ಬೋಟುಗಳು ನಾಶ: ಧಾರಾಕಾರ ಮಳೆಗೆ ಉಡುಪಿಯ ನೂರಾರು ಕಿಮೀ ವ್ಯಾಪ್ತಿಯಲ್ಲಿ ಕಡಲ ಕೊರೆತ ಸಂಭವಿಸಿದ್ದು, 9 ಬೋಟುಗಳು ನಾಶವಾಗಿವೆ. ಇದರಿಂದ ಇಲ್ಲಿನ ಕುಟುಂಬಗಳಿಗೆ ಸಾಕಷ್ಟು ಆರ್ಥಿಕ ನಷ್ಟವಾಗಿದೆ. ಇವೆಲ್ಲವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ವಿವರಿಸಿದ್ದು, ಪರಿಹಾರವನ್ನು ಶೀಘ್ರವೆ ಘೋಷಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.


Spread the love