ಮಾದಕ ಪದಾರ್ಥಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಅಗತ್ಯ; ಎನ್.ಎಸ್.ಯು.ಐ. ಕಾರ್ಯಕ್ರಮದಲ್ಲಿ ಡಾ|ಪಿ.ವಿ.ಭಂಡಾರಿ

Spread the love

ಮಾದಕ ಪದಾರ್ಥಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಅಗತ್ಯ; ಎನ್.ಎಸ್.ಯು.ಐ. ಕಾರ್ಯಕ್ರಮದಲ್ಲಿ ಡಾ|ಪಿ.ವಿ.ಭಂಡಾರಿ

ಉಡುಪಿ: ಉಡುಪಿ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಮಾದಕ ವಸ್ತುಗಳ ಬಳಕೆ ವಿರೋಧಿ ಕುರಿತ ಜಾಗೃತಿ ಕಾರ್ಯಾಗಾರವನ್ನು ನಗರದ ಸೈಂಟ್ ಸಿಸಿಲಿಸ್ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ಎ ವಿ ಬಾಳಿಗಾ ಆಸ್ಪತ್ರೆ ಇದರ ಮುಖ್ಯಸ್ಥ ಹಾಗೂ ಮನೋರೋಗ ತಜ್ಞರಾದ ಡಾ. ಪಿ ವಿ ಭಂಡಾರಿ ಅವರು ಮಾತನಾಡಿ, ಸಮಾಜದಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗಿದೆ. ಅದರಲ್ಲಿ ಮುಖ್ಯವಾಗಿ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಯುವಕರು ಇಂತಹ ದುಶ್ಚಟಗಳಿಗೆ ಒಳಗಾಗುತ್ತಿರುವುದು ಹೆಚ್ಚಾಗಿದೆ. ಮಾದಕ ದ್ರವ್ಯ ಬಳಕೆ ಅಪಾಯಕಾರಿಯಾಗಿದ್ದು, ಇದು ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗೆ ದೂಡುವ ಜತೆಗೆ ಮನುಷ್ಯರನ್ನು ಅಧೀರರನ್ನಾಗಿಸುತ್ತದೆ. ಮಾದಕ ವಸ್ತುಗಳ ಬಳಕೆ ಸಂಪೂರ್ಣ ನಿರ್ಮೂಲನೆ ಮಾಡಿ, ಸಮಾಜದಲ್ಲಿ ಒಳ್ಳೆಯ ವಾತಾವರಣ ಸೃಷಿಸಬೇಕಾಗಿದೆ ಎಂದರು.

ವೇಗವಾಗಿ ಬೆಳೆಯುತ್ತಿರುವ ಮಾದಕ ಪದಾರ್ಥ ಬಳಕೆಯ ಜಾಲಕ್ಕೆ ವಿದ್ಯಾರ್ಥಿಗಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಅನೇಕರು ಒತ್ತಾಯಕ್ಕೆ ಮಣಿದು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ವಿದ್ಯಾರ್ಥಿಗಳು ಇದರ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿಯುವ ಅಗತ್ಯತೆ ಇದೆ. ಇದಕ್ಕಾಗಿ ಶಾಲೆಗಳಲ್ಲಿ ಮತ್ತು ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳ ಅಗತ್ತತೆ ಇದೆ ಎಂದರು.

ಎನ್ ಎಸ್ ಯು ಐ ಇದರ ರಾಷ್ಟ್ರೀಯ ಕಾರ್ಯದರ್ಶೀ ರಾಹುಲ್ ಅವರು ಮಾತನಾಡಿ ಇಂದಿನ ಕೆಲ ಯುವಜನ, ಮಕ್ಕಳು ಮಾದಕ ವ್ಯಸನಿಗಳಾಗುತ್ತಿದ್ದು, ತಮ್ಮ ಸುಂದರ ಜೀವನವನ್ನೇ ಬಲಿಕೊಡುತ್ತಿದ್ದಾರೆ. ಇದರಿಂದ ಅವರ ಇಡೀ ಕುಟುಂಬ ಕೂಡ ನೋವಿನಲ್ಲಿ ನರಳುವಂತೆ ಮಾಡುತ್ತಿದ್ದಾರೆ. ಕೆಲವೇ ನಿಮಿಷದ ಸುಖಕ್ಕಾಗಿ ಇಡೀ ಜೀವನವನ್ನು ಹಾಳು ಮಾಡಿಕೊಳ್ಳುವ ಕೆಲಸಕ್ಕೆ ವಿದ್ಯಾರ್ಥಿಗಳು ಮತ್ತು ಯುವಕರು ಮುಂದಾಗಬಾರದು ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸುವ ಆಂದೋಲನವಾಗಬೇಕು. ಯಾರೂ ಕೂಡ ಮಾದಕ ವ್ಯಸನಿಗಳಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಗ್ರೇಸಿ, ಎನ್ ಎಸ್ ಯು ಐ ರಾಜ್ಯ ಸಮಿತಿಯ ಕಾರ್ಯದರ್ಶಿ ಫಾರೂಕ್, ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ, ನಾಯಕರಾದ ನಬೀಲ್ ಉದ್ಯಾವರ, ನೀರಜ್ ಪಾಟೀಲ್, ಹರ್ಷಿತ್ ಆಚಾರ್ಯ, ವಿಶಾಕ್, ನಿತೇಶ್, ದೇವದಾಸ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love