ಮಾರಣಕಟ್ಟೆ ಹಬ್ಬಕ್ಕೆ ಸಿದ್ಧವಾಗಿದೆ ಹೆಮ್ಮಾಡಿ ಸೇವಂತಿಗೆ; ಬೆಳೆಗಾರರ ಮುಖದಲ್ಲಿ ಮಂದಹಾಸ

Spread the love

ಮಾರಣಕಟ್ಟೆ ಹಬ್ಬಕ್ಕೆ ಸಿದ್ಧವಾಗಿದೆ ಹೆಮ್ಮಾಡಿ ಸೇವಂತಿಗೆ; ಬೆಳೆಗಾರರ ಮುಖದಲ್ಲಿ ಮಂದಹಾಸ

ಕುಂದಾಪುರ: ಜನವರಿ ಬಂತೆಂದರೆ ಸಾಕು. ಹೆಮ್ಮಾಡಿ ಪರಿಸರದ ಹೆಂಗಸರು ಹೊಸ ಬಳೆ, ಚಿನ್ನ, ಸೀರೆ ಹೀಗೆ ಖರೀದಿಗೆ ಮುಂದಾಗುತ್ತಾರೆ. ಗಂಡಸರ ಕೈಯಲ್ಲಿ ಹೊಸ ನೋಟುಗಳು ಓಡಾಡುತ್ತವೆ. ಮಕ್ಕಳಿಗೆ ಹೊಸ ಬಟ್ಟೆ, ತಿಂಡಿ ಎಲ್ಲವೂ ಈ ಸಮಯದಲ್ಲೇ ಸಿಗುವುದು. ಜನವರಿಯ ಚಳಿಯಲ್ಲೂ ಹೆಮ್ಮಾಡಿಯ ಕೃಷಿಕನ ಬದುಕು ಬೆಚ್ಚಗಿರುತ್ತದೆ. ಇದಕ್ಕೆ ಕಾರಣ ಹೆಮ್ಮಾಡಿಯ ಸೇವಂತಿಗೆ.

ಮಳೆಗಾಲದಲ್ಲಿ ಭತ್ತದ ಕೃಷಿಯ ಹಸಿರು ಸೀರೆಯುಟ್ಟ ಗದ್ದೆಗಳು ಡಿಸೆಂಬರ್ ಮುಗಿದು ಜನವರಿಯ ಮಕರ ಸಂಕ್ರಮಣ ಬರುತ್ತಿದ್ದಂತೆಯೆ ಹಳದಿ ಸೀರೆಯುಟ್ಟು ಮೈದುಂಬಿ ನಿಲ್ಲುತ್ತವೆ. ಹೆಮ್ಮಾಡಿಯ ಸೇವಂತಿಗೆ ಎಂದರೆ ಈ ಭಾಗದ ವಿಶಿಷ್ಟ, ಅಪೂರ್ವ ಹೂವು. ಕರಾವಳಿಯ ಬೇರೆಡೆಗಳಲ್ಲಿ ಎಲ್ಲಿಯೂ ಕಂಡುಬರದ ಈ ಸೇವಂತಿಗೆ ಹೂವಿನ ಬೆಳೆ ಹೆಮ್ಮಾಡಿಯ ವೈಶಿಷ್ಟ್ಯ. ಸೇವಂತಿಗೆ ಹೂವಿನ ಸಾಮ್ರಾಜ್ಯವೇ ಧರೆಗಿಳಿದಂತೆ ಈ ಗದ್ದೆಗಳನ್ನು ಕಂಡು ಕಣ್ತುಂಬಿಕೊಳ್ಳುವುದೇ ಒಂದು ಆನಂದವಾದರೆ ಇವುಗಳನ್ನು ಪೆÇೀಣಿಸಿ ಹೂಮಾಲೆ ಮಾಡಿ ಹೂವಿಗೆ ಇನ್ನಷ್ಟು ಅಂದ ನೀಡುವ ಸ್ತ್ರೀಯರ ಕುಸುರಿ ಕೆಲಸ ಇನ್ನೂ ಅಪರೂಪದ್ದು. ಸ್ಥಳೀಯ ಆಡು ಭಾಷೆ ಕುಂದಾಪುರ ಕನ್ನಡದಲ್ಲಿ ಈ ಹೂವನ್ನು ‘ಹೆಮ್ಮಾಡಿ ಶ್ಯಾಮಂತಿ’ ಎಂದು ಕರೆಯುವುದೆ ಒಂಥರಾ ಪುಳಕ. ಹೆಮ್ಮಾಡಿ, ಕಟ್ಟು, ಹೊಸ್ಕಳಿ, ಹರೆಗೋಡು, ಸುಳ್ಸೆ ಮೊದಲಾದೆಡೆ ಕೃಷಿಕರು ಸೇವಂತಿಗೆ ಗಿಡವನ್ನು ಬೆಳೆಸುತ್ತಾರೆ.

ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವರಿಗೆ ಇಷ್ಟಾರ್ಥ ಹೂವು ಈ ಹೆಮ್ಮಾಡಿಯ ಸೇವಂತಿಗೆ ಎಂಬುದು ಒಂದು ಪ್ರತೀತಿ. ತಮ್ಮ ಭತ್ತದ ಕೃಷಿಯನ್ನು ಬೇಗ ಮುಗಿಸಿಕೊಂಡು ಅಗಸ್ಟ್-ಸಪ್ಟೆಂಬರ್ ತಿಂಗಳುಗಳಲ್ಲಿ ಸೇವಂತಿಗೆ ಕೃಷಿಯನ್ನು ಪ್ರಾರಂಭಿಸುವ ಕೃಷಿಕರು ಮೂರು ತಿಂಗಳು ಈ ಗಿಡವನ್ನು ಪೆÇೀಷಿಸಿಕೊಂಡು ಬರುತ್ತಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಹೂವು ಬಿಡುವುದು ಇಲ್ಲಿನ ವಿಶೇಷ. ಅಲ್ಲದೇ ಮೊದಲು ಈ ಗಿಡ ದಕ್ಷಿಣಾಭಿಮುಖವಾಗಿ ಮಾರಣಕಟ್ಟೆಯ ಬ್ರಹ್ಮಲಿಂಗನ ಕಡೆ ವಾಲುತ್ತವೆ ಎಂಬುದು ರೈತರ ನಂಬಿಕೆ. ಹೀಗಾಗಿ ಮಕರ ಸಂಕ್ರಮಣದಂದು ಬ್ರಹ್ಮಲಿಂಗನಿಗೆ ಹೂವು ಅರ್ಪಿಸಿದ ನಂತರವೆ ಇತರ ಹಬ್ಬ, ಗೆಂಡ, ಕೋಲಗಳಿಗೆ ಹೆಮ್ಮಾಡಿಯ ಕೃಷಿಕರು ಹೂವುಗಳನ್ನು ಮಾರಾಟ ಮಾಡುತ್ತಾರೆ. ಈ ಬಾರಿ ಚಳಿ ಸಾಕಷ್ಟು ಬಿದ್ದಿರುವ ಕಾರಣ ಹೂವಿನ ಬೆಳೆಯೂ ಸಮೃದ್ಧವಾಗಿದ್ದರೂ ಅತೀ ಹೆಚ್ಚು ಇಬ್ಬನಿ ಬಿದ್ದ ಕಾರಣ ಹೂಗಳು ಕರಟಿ ಹೋಗಿ ಕೃಷಿಕರು ಆರಂಭದಲ್ಲೇ ನಷ್ಟ ಎದುರಿಸುವಂತಾಗಿದೆ.

ದೈವದ ಶಿರದಲ್ಲಿ ರಾರಾಜಿಸುತ್ತಾಳೆ ಹೆಮ್ಮಾಡಿ ಸೇವಂತಿಗೆ:ಮಾರಣಕಟ್ಟೆ ಜಾತ್ರೆಯ ಬಳಿಕ ಹೆಮ್ಮಾಡಿಯ ಸೇವಂತಿ ರಾಜ್ಯದ ದಶದಿಕ್ಕುಗಳನ್ನು ತಲುಪುತ್ತಾಳೆ. ಮಂಕರ್ಕಿಗಳಲ್ಲಿ ಹೂವು ತುಂಬಿ ಮಾರಲು ಹೋಗುವ ಗಂಡಸರ ಉತ್ಸಾಹಕ್ಕೆ ಎಣೆ ಇಲ್ಲ. ಶಿರಸಿ, ಮಂಗಳೂರು, ಕಾರವಾರ, ಕೋಟ, ಶಿವಮೊಗ್ಗ ಹೀಗೆ ಹೆಮ್ಮಾಡಿಯ ಸೇವಂತಿ ಹತ್ತು ಹಲವು ದೇವರು, ದೈವದ ಶಿರದಲ್ಲಿ, ಹೆಂಗಳೆಯರ ಮುಡಿಯಲ್ಲಿ ರಾರಾಜಿಸುತ್ತಾಳೆ. ಭತ್ತದ ಕೃಷಿ ಊಟಕ್ಕೆ ಅನ್ನ ನೀಡಿದರೆ ಸೇವಂತಿಗೆ ಹೆಮ್ಮಾಡಿಯ ರೈತರ ಜೇಬುಗಳಿಗೆ ಒಂದಷ್ಟು ಕಾಸು ತುಂಬಿಸುತ್ತದೆ. ಇನ್ನು ಸೇವಂತಿಗೆ ಮಾಲೆ ಮಾಡುವ ಕೆಲಸದಲ್ಲಿ ನಿರತರಾಗುವ ಹೆಂಗಸರಂತೂ ಖರೀದಿಗಾಗಿ ಕುಂದಾಪುರಕ್ಕೆ ಹೋಗುತ್ತಾರೆ. ಒಟ್ಟಿನಲ್ಲಿ ಹೆಮ್ಮಾಡಿ ಸೇವಂತಿಗೆ ಇಲ್ಲಿನ ರೈತರ ಬದುಕಿನಲ್ಲಿ ಹೊಸ ಹುರುಪು ತುಂಬುತ್ತದೆ.

ಮಾಯವಾಗುತ್ತಿದೆ ಹೆಮ್ಮಾಡಿಯ ಸೇವಂತಿಗೆ!
ಹೆಮ್ಮಾಡಿಯಲ್ಲಿ ಏನು ಪ್ರಸಿದ್ಧ ಎಂದು ಕೇಳಿದರೆ ಇಲ್ಲಿನ ಜನರು ಹೆಮ್ಮಾಡಿಯ ಸೇವಂತಿಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಇಂದು ಸೇವಂತಿಗೆ ಕೃಷಿ ವಿರಳವಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಧಾನಕ್ಕೆ ಇಲ್ಲಿನ ಕೃಷಿಕರಲ್ಲಿ ಸೇವಂತಿಗೆ ಕೃಷಿ ಆಸಕ್ತಿಯೂ ಕಡಿಮೆಯಾಗುತ್ತಿದೆ, ಸೇವಂತಿಗೆ ಗದ್ದೆಗಳು ಕಣ್ಮರೆಯಾಗುತ್ತಿವೆ. ಕಳೆದ ಎರಡು ವರ್ಷಗಳಿಂದ ಇಲ್ಲಿನ ಕೃಷಿಕರಿಗೆ ಸೊಳ್ಳೆಗಳ ಕಾಟ ತಲೆನೋವಾಗಿ ಪರಿಣಮಿಸಿದೆ. ಹೂವು ಬಿಡುವ ಸಮಯದಲ್ಲಿ ಚಿಕ್ಕ ಗಾತ್ರದ ಸೊಳ್ಳೆಗಳಿಂದ ಹೂವು ಕರಟಿ ಹೋಗಿ ಅಪಾರ ಬೆಳೆ ನಾಶವಾಗಿದ್ದುಂಟು. ಸೊಳ್ಳೆ ರೋಗದಿಂದ ಎರಡು ವರ್ಷಗಳಲ್ಲಿ ಕೃಷಿಕರು ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಕೃಷಿಕರ ಗೋಳನ್ನು ಸಂಬಂಧಪಟ್ಟ ಇಲಾಖೆಗೆ ಮುಟ್ಟಿಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಇಲ್ಲಿಯವರೆಗೆ ಹೆಮ್ಮಾಡಿಯ ಸೇವಂತಿ ಕೃಷಿಕರಿಗೆ ಸರ್ಕಾರದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ಇಲ್ಲಿನ ಕೃಷಿಕರ ಅಳಲು. ಹೀಗಾಗಿ ಸೇವಂತಿಗೆ ಕೃಷಿ ಹೆಮ್ಮಾಡಿಯಲ್ಲಿ ಕಡಿಮೆಯಾಗುತ್ತಾ ಸಾಗುತ್ತಿದೆ.

ಸೇವಂತಿಗೆ ಬೆಳೆಯುವ ಕೃಷಿಕ ಮಹೇಶ್ ಪೂಜಾರಿ ಪ್ರಕಾರ ಮೂರ್ನಾಲ್ಕು ತಿಂಗಳುಗಳ ಕಾಲ ಗದ್ದೆಯಲ್ಲೇ ಇದ್ದು, ಗಿಡಗಳನ್ನು ಮಗುವಿನಂತೆ ಪೋಷಿಸಿಕೊಂಡು ಬಂದಿದ್ದೇವೆ. ಚಳಿ ಇದ್ದರೆ ಮಾತ್ರ ಸರಿಯಾದ ಸಮಯಕ್ಕೆ ಹೂವು ಬಿಡುತ್ತದೆ. ಈ ಬಾರಿ ಚಳಿ ಸಾಕಷ್ಟು ಇದ್ದಿತ್ತು. ಅಂತೆಯೇ ಹೂವು ಕೂಡ ಚೆನ್ನಾಗಿ ಅರಳಿತ್ತು. ಆದರೆ ಹೆಚ್ಚು ಇಬ್ಬನಿ ಬಿದ್ದಿದ್ದರಿಂದಾಗಿ ಹೂಗಳೆಲ್ಲಾ ಕರಟಿ ಹೋಗಿದೆ. ನಮ್ಮ ನಾಲ್ಕು ತಿಂಗಳ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ.

ಹಿಂದೆಲ್ಲಾ ಸಾಕಷ್ಟು ನಷ್ಟ ಅನುಭವಿಸಿದ್ದೆವು. ಇದೀಗ ಸೇವಂತಿಗೆ ಬೆಳೆಗಾರರ ಸಂಘ ರಚಿಸಿಕೊಂಡು ಸರ್ಕಾರದಿಂದ ಸಿಗುವ ಹಣವನ್ನು ಪಡೆಯುತ್ತಿದ್ದೇವೆ. ಸೇವಂತಿಗೆ ಕೃಷಿಕರಿಗೆ ಸರ್ಕಾರ ಇನ್ನೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೆಮ್ಮಾಡಿ ಸೇವಂತಿಗೆ ಇತಿಹಾಸ ಪುಟ ಸೇರಲಿದೆ ಎನ್ನುತ್ತಾರೆ ಇನ್ನೋರ್ವ ಕೃಷಿಕ ರಾಜು ಪೂಜಾರಿ.


Spread the love