ಮಾರ್ಚ್ 3: ಉಡುಪಿ ಒಳಕಾಡು ಶಾಲೆಯಲ್ಲಿ ಸ್ಥಳದಲ್ಲೇ ಪಡಿತರ ಚೀಟಿ ವಿತರಣೆ: ಪ್ರಮೋದ್ ಮಧ್ವರಾಜ್

Spread the love

ಮಾರ್ಚ್ 3: ಉಡುಪಿ ಒಳಕಾಡು ಶಾಲೆಯಲ್ಲಿ ಸ್ಥಳದಲ್ಲೇ ಪಡಿತರ ಚೀಟಿ ವಿತರಣೆ: ಪ್ರಮೋದ್ ಮಧ್ವರಾಜ್

ಉಡುಪಿ : ಅರ್ಹರಿಗೆ ಪಡಿತರ ಚೀಟಿ ಶೀಘ್ರ ಒದಗಿಸಿ ಕೊಡುವ ಉದ್ದೇಶದಿಂದ ಉಡುಪಿ ಕ್ಷೇತ್ರದ ನಗರಸಭಾ ವ್ಯಾಪ್ತಿಯ ಹಾಗೂ ಸುತ್ತಮುತ್ತಲಿನ ಗ್ರಾಮಪಂಚಾಯತಿಗಳ ಎಲ್ಲಾ ಅರ್ಜಿದಾರರಿಗೆ ಮಾರ್ಚ್ 3 ರಂದು ಬೆಳ್ಳಿಗ್ಗೆ 10.30 ಗಂಟೆಗೆ ಒಳಕಾಡು ಶಾಲೆಯ ನಳಂದ ಸಭಾಭವನದಲ್ಲಿ ಪಡಿತರ ಚೀಟಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಶಾಸಕರಾದ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಕ್ಷೇತ್ರದ ಜನರು ಪಡಿತರ ಚೀಟಿಗಾಗಿ ಅಲೆದಾಡಬಾರದು. ಹೋಬಳಿ ಮಟ್ಟದಲ್ಲಿ ಬಡವರಿಗೆ ಅನುಕೂಲವಾಗುವಂತೆ ಬಿಪಿಎಲ್ ಕುಟುಂಬದವರಿಗೆ ಪಡಿತರ ಚೀಟಿ ವಿತರಿಸಲಾಗುವುದು. ಈಗಾಗಲೇ ಕ್ಷೇತ್ರದ ಹೆಚ್ಚಿನ ಅರ್ಜಿದಾರರಿಗೆ ಅಂಚೆ ಮೂಲಕ ಪಡಿತರ ಚೀಟಿ ತಲುಪಿಸಲಾಗಿದ್ದು, ಮೂರನೇ ಹಂತದಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಾಗೂ ಹಿಂದಿನ ಅರ್ಜಿಯ ಪಡಿತರ ಚೀಟಿ ಬರದಿದ್ದಲ್ಲಿ ಅಂತಹವರಿಗೆ ಅವಕಾಶವಾಗಲು ಈ ಅನುಕೂಲ ಕಲ್ಪಿಸಲಾಗಿದೆ. ಅರ್ಜಿ ನೀಡಿದವರು ಸ್ವೀಕೃತಿ ಪತ್ರ, ಆದಾಯ ಪ್ರಮಾಣಪತ್ರದ ಪ್ರತಿ, ಪಡಿತರ ಚೀಟಿಗೆ ನಮೂದಿಸಿದ ಕುಟುಂಬ ಸದಸ್ಯರ ಆಧಾರ್ ಪ್ರತಿ ತಂದು ಚೀಟಿ ಪಡೆದುಕೊಳ್ಳಬಹುದು. ರೂ.1.20 ಲಕ್ಷ ವಾರ್ಷಿಕ ಆದಾಯ ಹೊಂದಿರುವ ಬಿಪಿಎಲ್ ಕುಟುಂಬದವರಿಗೆ ಪಡಿತರ ಚೀಟಿ ವಿತರಿಸಲಾಗುವುದೆಂದು ಅವರು ತಿಳಿಸಿದ್ದಾರೆ.


Spread the love