ಮೀನು ಮಾರಾಟ ಫೆಡರೇಶನ್ ವತಿಯಿಂದ ಸದಸ್ಯ ಗ್ರಾಹಕರಿಗೆ 1.32 ಕೋ. ರೂ. ವಿವಿಧ ಸವಲತ್ತುಗಳ ವಿತರಣೆ

Spread the love

ಮೀನು ಮಾರಾಟ ಫೆಡರೇಶನ್ ವತಿಯಿಂದ ಸದಸ್ಯ ಗ್ರಾಹಕರಿಗೆ 1.32 ಕೋ. ರೂ. ವಿವಿಧ ಸವಲತ್ತುಗಳ ವಿತರಣೆ

ಮಂಗಳೂರು: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು ವತಿಯಿಂದ ಮಣಿಪಾಲ ಸಿಗ್ನಾ ಪ್ರೊ ಹೆಲ್ತ್ ಗ್ರೂಪ್ ಇನ್ಸೂರೆನ್ಸ್ ಕಾರ್ಡ್, ವಿದ್ಯಾರ್ಥಿವೇತನ, ಸದಸ್ಯ ಸಹಕಾರಿ ಸಂಘಗಳಿಗೆ ಪ್ರೋತ್ಸಾಹಕ ಉಡುಗೊರೆ ಸೇರಿದಂತೆ 1.32 ಕೋ. ರೂ. ವಿವಿಧ ಸವಲತ್ತುಗಳ ವಿತರಣಾ ಸಮಾರಂಭವು ಬುಧವಾರ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ನಾಡೋಜ ಡಾ.ಜಿ. ಶಂಕರ್ ಉದ್ಘಾಟಿಸಿ ಮಾತನಾಡಿ ಯಶ್‌ಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಮೀನು ಮಾರಾಟ ಫೆಡರೇಶನ್ ಕರಾವಳಿ ಜಿಲ್ಲೆಯ ಮೀನುಗಾರರ ಸಮಸ್ಯೆಗೆ ಧ್ವನಿಯಾಗಿ ಮೀನುಗಾರಿಕೆ ಅಭಿವೃದ್ಧಿಗೆ ಕಾರ್ಯ ಪ್ರವೃತ್ತವಾಗಿರುವುದು ಅಭಿನಂದನೀಯ. ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ಯೋಜನೆ ಮರು ಆರಂಭಿಸಿ ಮಹಿಳಾ ಮೀನುಗಾರರಿಗೆ ಆರ್ಥಿಕ ಶಕ್ತಿ ತುಂಬಲು ಫೆಡರೇಶನ್ ಮುಂದಾಗುವಂತೆ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಕಳೆದ 12 ವರ್ಷಗಳಿಂದ ನಿರಂತರವಾಗಿ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 5ವರ್ಷಗಳಿಂದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಸಹಯೋಗದೊಂದಿಗೆ ಆರೋಗ್ಯ ಕಾರ್ಡ್ ವಿತರಣೆ ಹಾಗೂ ಸದಸ್ಯ ಸಹಕಾರಿ ಸಂಸ್ಥೆ, ಸದಸ್ಯ ಗ್ರಾಹಕರಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು ನೀಡುತ್ತಾ ಬರುತ್ತಿದ್ದು, ಮುಂದಿನ ದಿನಗಳಲ್ಲಿಯೂ ಫೆಡರೇಶನ್ ಸದಸ್ಯರ ಸಹಕಾರದೊಂದಿಗೆ ಮೀನುಗಾರರ ಶ್ರೇಯೋಭಿವೃದ್ಧಿಗೆ ಕಾರ್ಯೋನ್ಮುಖವಾಗಲಿದೆ ಎಂದರು.

ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ. ಸಿ. ಕೋಟ್ಯಾನ್ ಅವರು ಆರೋಗ್ಯ ಕಾರ್ಡ್, ಉಪಾಧ್ಯಕ್ಷ ಸುಭಾಶ್ ಕಾಂಚನ್ ವಿದ್ಯಾರ್ಥಿವೇತನ ಹಾಗೂ ಮಂಗಳೂರು ಐ.ಒ.ಸಿ, ಡಿವಿಜನಲ್ ರಿಟೈಲ್‌ನ ಸೇಲ್ಸ್ ಹೆಡ್ ಮಧುಪ್ ದ್ವಿವೇದಿ ಅವರು ಸದಸ್ಯ ಸಹಕಾರಿ ಸಂಘಗಳಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು ವಿತರಿಸಿದರು.

ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ದೇವಾನಂದ ಗುರಿಕಾರ ಬೋಳೂರು, ಮಂಗಳೂರು ಮತ್ಸೋದ್ಯಮಿ ಮೋಹನ್ ಬೆಂಗ್ರೆ, ಏಳುಪಟ್ಣ ಸಂಯುಕ್ತ ಸಭಾದ ಅಧ್ಯಕ್ಷ ಗೌತಮ್ ಕೋಡಿಕಲ್, ಫೆಡರೇಶನ್‌ನ ಉಪಾಧ್ಯಕ್ಷ ಪುರುಷೋತ್ತಮ ಅಮೀನ್, ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 2021ರ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಮಚಂದ್ರ ಬೈಕಂಪಾಡಿ ಅವರನ್ನು ಸನ್ಮಾನಿಸಲಾಯಿತು.


Spread the love