ಮೂರ್ತೆದಾರಿಕೆಗೆ ತ್ವರಿತ ಅನುಮತಿ: ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸೂಚನೆ

Spread the love

ಮೂರ್ತೆದಾರಿಕೆಗೆ ತ್ವರಿತ ಅನುಮತಿ: ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸೂಚನೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರ್ತೆದಾರಿಕೆ ಮಾಡಲು ಪರವಾನಿಗೆ ಕೋರಿ ಬಂದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ತ್ವರಿತವಾಗಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸೂಚಿಸಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೂರ್ತೆದಾರರ ಸಮಸ್ಯೆಗಳ ಕುರಿತು ಮೂರ್ತೆದಾರರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು. ಮೂರ್ತೆದಾರರಿಗೆ ಪರವಾನಿಗೆ ಪ್ರಕ್ರಿಯೆ ಸರಳೀಕರಿಸಲು ರಾಜ್ಯ ಸರಕಾರ ಈ ಹಿಂದೆಯೇ ಪರವಾನಿಗೆ ಅಧಿಕಾರವನ್ನು ಅಬಕಾರಿ ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರಿಸಿದೆ. ಆದರೆ ಪರವಾನಿಗೆ ಶುಲ್ಕ ಪಾವತಿ ಬಗ್ಗೆ ಇಲಾಖೆಗಳ ನಡುವೆ ಗೊಂದಲ ಇದ್ದುದರಿಂದ ಪರವಾನಿಗೆ ನೀಡುವಾಗ ವಿಳಂಬವಾಗುತ್ತಿತ್ತು. ಈ ಬಗ್ಗೆ ಎರಡೂ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅರ್ಜಿಗಳನ್ನು ನಿಯಮಾನುಸಾರ ಸರಕಾರಿ ಅಥವಾ ಖಾಸಗೀ ಜಾಗದಲ್ಲಿದೆಯಾ, ಅಂಗಡಿ ಪರಿವರ್ತಿತ ಜಾಗದಲ್ಲಿದೆಯಾ, ಸ್ಥಳೀಯ ಸಂಸ್ಥೆ ಪರವಾನಿಗೆ ಪಡೆದಿದೆಯಾ ಮತ್ತಿತರ ಅಂಶಗಳನ್ನು ಪರಿಶೀಲಿಸಿ ಪರವಾನಿಗೆ ನೀಡುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್‍ಗಳಿಗೆ ಸೂಚಿಸಿದರು. ಪರವಾನಿಗೆ ಪ್ರಕ್ರಿಯೆಯನ್ನು ಸಕಾಲ ಅಡಿಯಲ್ಲಿ ನೀಡಲು ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿಗಳು ನುಡಿದರು. ಪರವಾನಿಗೆ ನಂತರ ಅಬಕಾರಿ ಇಲಾಖೆಯವರು ಮಾರಾಟ ಪರಿಶೀಲನೆ ನಡೆಸುವಂತೆ ಸೂಚಿಸಿದರು.

ಮೂರ್ತೆದಾರಿಕೆ ಪರವಾನಿಗೆಯನ್ನು 5 ವರ್ಷಗಳಿಗೆ ವಿಸ್ತರಿಸುವ ಬೇಡಿಕೆ ಸಂಬಂಧ ಪರಿಶೀಲಿಸಿ, ಅಗತ್ಯಬಿದ್ದರೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ತಿಳಿಸಿದ ಡಾ. ಕೆ.ವಿ. ರಾಜೇಂದ್ರ, ಮೂರ್ತೆದಾರಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರೇ ಇರುವುದರಿಂದ, ಇವರಿಗೆ ಇತರೆ ನೆರವು ನೀಡಲು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಬಕಾರಿ ಉಪ ಆಯುಕ್ತೆ ಶೈಲಜಾ ಕೋಟೆ, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಬಂಟ್ವಾಳ ತಹಶೀಲ್ದಾರ್ ರಶ್ಮಿ, ಮೂರ್ತೆದಾರರ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love