ಮೂಲ್ಕಿ- ಹೆಜಮಾಡಿ ಬೀಚ್ ಕ್ಲೀನಿಂಗ್ ಅಭಿಯಾನಕ್ಕೆ ಕೈಜೋಡಿಸಿದ ಸ್ವಯಂ ಸೇವಕರು

Spread the love

ಮೂಲ್ಕಿ ಹೆಜಮಾಡಿ ಬೀಚ್ ಕ್ಲೀನಿಂಗ್ ಅಭಿಯಾನಕ್ಕೆ ಕೈಜೋಡಿಸಿದ ಸ್ವಯಂ ಸೇವಕರು

ಮಂಗಳೂರು: ಮೂಲ್ಕಿ ಹೆಜ್ಮಾಡಿಯ ಬೀಚ್ ಸ್ವಚ್ಛತೆಗೆ ಆದ್ಯತೆ ನೀಡಿರುವ ಮುಂಚೂಣಿಯ ಜಲಸಾಹಸ ಕ್ರೀಡಾ ಸಂಸ್ಥೆ ಮಂತ್ರ ಸರ್ಫ್ಕ್ಲಬ್, ಸರ್ಫಿಂಗ್ ಸ್ವಾಮಿ ಫೌಂಡೇಶನ್ ವತಿಯಿಂದ ಈ ವರ್ಷ ಎರಡನೇ ಬಾರಿಗೆ ಬೀಚ್ ಕ್ಲೀನಿಂಗ್ ಅಭಿಯಾನ ಹಮ್ಮಿಕೊಳ್ಳಲಾಯಿತು.

300ರಷ್ಟು ಸ್ವಯಂ ಸೇವಕರು ಮೂಡುಬಿದಿರೆ ಆಳ್ವಾಸ್ ಕಾಲೇಜು, ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮೂಲ್ಕಿಯ ಸ್ಕೌಟ್ಸ್ ಮತ್ತು ಗೈಡ್ಸ್, ಮಂಗಳೂರು ಬೈಸಿಕಲ್ ಕ್ಲಬ್, ಥೈಮ್ ರೆಸ್ಟೋರೆಂಟ್ನಿಂದ ಬಂದು ಸೇರಿದರು.

ಮುಂಜಾನೆ 7ಕ್ಕೆ ಆಗಮಿಸಿದವರನ್ನು ಬೋಟ್ಗಳಲ್ಲಿ ಶಾಂಭವಿ ನದಿ ದಾಟಿಸಿ ಸಮುದ್ರ ತೀರಕ್ಕೆ ಸೇರಿಸಲಾಯಿತು. ಕಸ ಹೆಕ್ಕುವಾಗಲೇ ರಬ್ಬರ್, ಪ್ಲಾಸ್ಟಿಕ್, ಬಾಟಲ್ ಈ ಮೂರನ್ನೂ ಪ್ರತ್ಯೇಕಿಸಿ ಸಂಗ್ರಹಿಸಲಾಯಿತು. ಇವುಗಳನ್ನು ರಿಸೈಕ್ಲಿಂಗ್ಗಾಗಿ ಕಳುಹಿಸಲಾಯಿತು.

ಈ ಸಂದರ್ಭ ಹಾಜರಿದ್ದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಆದಾಯ ತೆರಿಗೆ ಇಲಾಖೆಯ ದ.ಕ – ಉಡುಪಿ ಜಂಟಿ ಆಯುಕ್ತ ಸೌರಭ್ ದುಬೆ ಅವರು ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ, ಅದಕ್ಕಾಗಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ ಮಳೆಗಾಲದಲ್ಲಿ ಜಿಲ್ಲೆಯ ಬಹುತೇಕ ಕಡಲ ಕಿನಾರೆಗಳಲ್ಲೂ ತ್ಯಾಜ್ಯ ತುಂಬಿಕೊಂಡಿದೆ, ಅದನ್ನು ತೆರವು ಮಾಡಲು ಬೃಹತ್ ಅಭಿಯಾನ ರೂಪಿಸಲಾಗುವುದು. ಶೀಘ್ರವೇ ಈ ಕುರಿತು ಸಭೆ ಕರೆಯುತ್ತೇನೆ, ಪ್ರಮುಖ ಶಿಕ್ಷಣ ಸಂಸ್ಥೆಗಳು, ಸ್ವಯಂ ಸೇವಾ ಸಂಘಟನೆಗಳನ್ನು ಸೇರಿಸಿಕೊಂಡು ಜಿಲ್ಲೆಯ ಕಡಲತೀರಗಳ ಸ್ವಚ್ಛತಾ ಅಭಿಯಾನ ಏರ್ಪಡಿಸಲಾಗುವುದು ಎಂದರು.

ಎಂಬಿಸಿ ಮಂಗಳೂರು ಇದರ ಗಣೇಶ್ ನಾಯಕ್ ಮಾತನಾಡಿ ಕಸ ಎಸೆಯುವವರಿಗೆ ಇಂಥಹ ಪ್ರದೇಶದಲ್ಲಿ ಕಸ ಸ್ವಚ್ಛಗೊಳಿಸುವಂತಹ ಸಾಫ್ಟ್ ಶಿಕ್ಷೆಯನ್ನು ರೂಪಿಸಬೇಕು, ಇಲ್ಲವಾದರೆ ನಾವು ಕ್ಲೀನ್ ಮಾಡುತ್ತಲೇ ಇರುತ್ತೇವೆ, ಎಸೆಯುವವರು ಕಸ ಹಾಕುತ್ತಲೇ ಇರುತ್ತಾರೆ ಎಂದರು.


Spread the love