ಮೇ 18 ನವಿಕೃತ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯ ಲೋಕಾರ್ಪಣೆ

Spread the love

ಮೇ 18 ನವಿಕೃತ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯ ಲೋಕಾರ್ಪಣೆ

ಕುಂದಾಪುರ: ನವಿಕೃತ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯದ ಆಶೀರ್ವಚನ ಹಾಗೂ ಉದ್ಘಾಟನಾ ಕಾರ್ಯಕ್ರಮ ಮೇ 18 ರಂದು ಬೆಳಿಗ್ಗೆ 9.45 ಕ್ಕೆ ಜರುಗಲಿದೆ ಎಂದು ಚರ್ಚಿನ ಧರ್ಮಗುರುಗಳಾದ ವಂ ಆಲ್ಬರ್ಟ್ ಕ್ರಾಸ್ತಾ ಹೇಳಿದರು.

ಅವರು ಬುಧವಾರ ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ನೂತನ ಚರ್ಚಿನ ಆಶೀರ್ವಚನವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ನೆರವೇರಿಸಿ, ಪವಿತ್ರ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.

ಬಲಿಪೂಜೆಯ ಬಳಿಕ ಸಾರ್ವಜನಿಕ ಸಭೆ ಜರುಗಲಿದ್ದು ಅಧ್ಯಕ್ಷತೆಯನ್ನು ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗುಲ್ಬರ್ಗಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ ಡಾ ರಾಬರ್ಟ್ ಮಿರಾಂದಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ ಅನಿಲ್ ಡಿಸೋಜಾ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಿವಮೊಗ್ಗ-ಬೈಂದೂರು ಸಂಸದ ಬಿ ಎಸ್ ಯಡ್ಯೂರಪ್ಪ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಶಾಸಕರಾದ ಐವನ್ ಡಿಸೋಜ, ಗೋಪಾಲ ಪೂಜಾರಿ, ಜೆ ಆರ್ ಲೋಬೊ, ಆಗಮಿಸಿಲಿದ್ದಾರೆ. ಅಲ್ಲದೆ ಅತಿಥಿಗಳಾಗಿ ಉದ್ಯಮಿಗಳಾದ ಎಮ್ ಎಮ್ ಇಬ್ರಾಹಿಂ, ನರಸಿಂಹ ಪೂಜಾರಿ, ಸೀತಾರಾಮ ಪೂಜಾರಿ, ಹಿಂದಿನ ಧರ್ಮಗುರು ವಂ ಆಲ್ಫೋನ್ಸಸ್ ಡಿಲೀಮಾ ಭಾಗವಹಿಸಲಿದ್ದಾರೆ. ಸಾರ್ವಜನಿಕ ಸಭೆಯ ಬಳಿಕ ಸಾರ್ವಜನಿಕ ಸೌಹಾರ್ದ ಭೋಜನ ಕೂಟ ಜರುಗಲಿದ್ದು, ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ವಿನೋದ್ ಗಂಗೋಳ್ಳಿ ರಚಿಸಿ ನಿರ್ದೇಶಿಸಿದ ಆಮ್ಮ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಚರ್ಚಿನ ಉದ್ಘಾಟನೆಯ ಪ್ರಯುಕ್ತ ಮೇ 14 ರಿಂದ ಕಾರ್ಯಕ್ರಮಗಳು ಜರುಗಲಿದ್ದು, ಮೇ 14 ಭಾನುವಾರ ಭ್ರಾತ್ವತ್ವದ ಭಾನುವಾರ ಆಚರಣೆಯೊಂದಿಗೆ ಕೊಸೆಸಾಂವ್ ಅಮ್ಮನವರ ಮೂರ್ತಿಯ ಮೆರವಣಿಗೆ ನಡೆಯಲಿದ್ದು, ಸೋಮವಾರ ಮಧ್ಯಾಹ್ನ 3 ಗಂಟೆಗೆ ಸೌಹಾರ್ದ ಹೊರೆಕಾಣಿಕೆ ಮೆರವಣಿಗೆ ಹಾಗೂ 4.30 ಸರ್ವಧರ್ಮ ಸೌಹಾರ್ದ ಕೂಟ ನಡೆಯಲಿದೆ. ಮೇ 17 ರಂದು ಸ್ಥಳೀಯ ಕ್ರೈಸ್ತ ಧಾರ್ಮಿಕರ ಸಮಾಗಮ ನಡೆಯಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಕಾರ್ಯದರ್ಶಿ ಪ್ರೀತಿ ಫೆರ್ನಾಂಡಿಸ್, ಮಾಧ್ಯಮ ಸಂಚಾಲಕಿ ಚಾರ್ಲೆಟ್ ಲೋಬೊ ಉಪಸ್ಥಿತರಿದ್ದರು.

ಕೊಸೆಸಾಂವ್ ಅಮ್ಮನವರ ದೇವಾಲಯ, ಗಂಗೊಳ್ಳಿ – ಐತಿಹಾಸಿಕ ಪರಂಪರೆ
ಪಡುವಣದಲ್ಲಿ ಅರಬ್ಬಿ ಕಡಲಿನ ಘನಗಾಂಭೀರ್ಯದ ತೆರೆಗಳ ಝೇಂಕಾರ, ಮೂಡಣದಲ್ಲಿ ಬಳುಕಿ ಹರಿವ ಪಂಚಗಂಗಾವಳಿ ಸುಧೆಯ ಅಲೆಗಳ ಮಂಜುಳ ನಾದ. ಕಣ್ಣು ಹಾಯಿಸಿದಷ್ಟೂ ಮುದಗೊಳಿಸುವ ಪ್ರಕೃತಿಯ ಚೆಲುವಿನ ಚಿತ್ತಾರದ ನಡುವೆ ಮಿಂಚುತ್ತಿರುವ ಪುಟ್ಟ ಪಟ್ಟಣವೇ ಗಂಗೊಳ್ಳಿ.

ಐತಿಹಾಸಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ವಿಶೇಷತೆಗಳನ್ನು ಮೈಗೂಡಿಸಿಕೊಂಡಿರುವ ಗಂಗೊಳ್ಳಿಯು, ನಾಡಿನ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.

ವಿವಿಧತೆಯಲ್ಲಿ ಏಕತೆಯ ಪ್ರತೀಕವಾಗಿರುವ ಈ ಸುಂದರ ಗಂಗೊಳ್ಳಿಯಲ್ಲಿ ಸಾಮರಸ್ಯದ ದ್ಯೋತಕವಾಗಿ ಕಂಗೊಳಿಸುತ್ತಿದೆ, ಐತಿಹಾಸಿಕ ಪರಂಪರೆಯನ್ನು ತನ್ನೊಡಲಲ್ಲಿ ಹೊತ್ತಿರುವ ಕೊಸೆಸಾಂವ್ ಅಮ್ಮನವರ ಈ ಭವ್ಯ ದೇವಾಲಯ.

ಐತಿಹಾಸಿಕ ಪರಂಪರೆ
ಗಂಗೊಳ್ಳಿಯ ಕೊಸೆಸಾಂವ್ ಅಮ್ಮನವರ ದೇವಾಲಯದ ಉಗಮವನ್ನು ಅವಲೋಕಿಸಿದಾಗ ಭವ್ಯ ಪರಂಪರೆಯನ್ನು ಅರಿಯಲು ನಾವು ಇತಿಹಾಸದತ್ತ ಪಯಣ ಮಾಡೋಣ..

ವಿಜಯನಗರ ಅರಸರ ಕಾಲದಿಂದಲೂ ಒಂದು ಪ್ರಮುಖ ವಾಣಿಜ್ಯ ನಗರಿಯಾಗಿ ಗುರುತಿಸಲ್ಪಟ್ಟ ಗಂಗೊಳ್ಳಿಯು ಕೆಳದಿ ನಾಯಕ ಮನೆತನದ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಕ್ರಿ.ಶ. 1630ರಲ್ಲಿ ಪೋರ್ಚುಗೀಸರ ಅಧಿಕಾರಿ ಮಿಗ್ವೆಲ್ ದೆ ನರೊನ್ನಾ ಗಂಗೊಳ್ಳಿಯಲ್ಲಿ ಒಂದು ಕೋಟೆಯನ್ನು ಕಟ್ಟಿ ಪುಟ್ಟ ದೇವಾಲಯವೊಂದನ್ನು ಸ್ಥಾಪಿಸಿ ಅದನ್ನು ಕೊಸೆಸಾಂವು ಅಮ್ಮನವರಿಗೆ ಸಮರ್ಪಿಸುತ್ತಾನೆ. ಇದೇ ವೇಳೆ ಗೋವೆಯಿಂದ ಇಲ್ಲಿಗಾಗಮಿಸಿದ ಧರ್ಮಗುರುಗಳಾದ ವಂದನೀಯ ಜಾರ್ಜ್ ಕೊನ್ಸಿಯಾಕೊ ಹಾಗೂ ವಂದನೀಯ ಫ್ರಾನ್ಸಿಸ್ ಕೊರ್ಡೆರಿಯೊರವರು ಸ್ಥಳೀಯ ಬಾಂಧವರಿಗೆ ಆಧ್ಯಾತ್ಮಿಕ ಸೇವೆ ನೀಡುತ್ತಾರೆ.

ಕಾಲಕ್ರಮೇಣ ಗಂಗೊಳ್ಳಿಯ ಕ್ರೈಸ್ತ ವಿಶ್ವಾಸಿಗಳ ಸಂಖ್ಯೆಯು ವೃದ್ಧಿಗೊಂಡು ಕೊಸೆಸಾಂವು ಅಮ್ಮನವರ ದೇವಾಲಯವು ಅಭಿವೃದ್ಧಿಯ ಪಥದಲ್ಲಿ ಸಾಗಿ ಈ ಕ್ಷೇತ್ರವು ಒಂದು ಪ್ರಮುಖ ಕ್ರೈಸ್ತ ಧರ್ಮಕೇಂದ್ರವಾಗಿ ರೂಪುಗೊಂಡಿತು. ಇಂದಿನ ಬೈಂದೂರು, ಪಡುಕೋಣೆ ಹಾಗೂ ತ್ರಾಸಿ ಕ್ರೈಸ್ತ ದೇವಾಲಯಗಳ ಪ್ರದೇಶಗಳು ಆ ದಿನಗಳಲ್ಲಿ ಗಂಗೊಳ್ಳಿಯ ಕೊಸೆಸಾಂವ್ ಅಮ್ಮನ ದೇವಾಲಯದ ಭಾಗಗಳಾಗಿದ್ದವು.

ಸಂತ ಜೋಸೆಫ್ ವಾಜ್‍ರವರು ಗಂಗೊಳ್ಳಿಯಲ್ಲಿ

ಏಶಿಯಾದ ಪ್ರೇಶಿತರು, ಗೋವಾದ ನಕ್ಷತ್ರ, ಕನ್ನಡ ಕರಾವಳಿಯ ರಾಯಭಾರಿ ಹಾಗೂ ಶ್ರೀಲಂಕಾದ ಆಪೋಸ್ತಲರೆಂದೇ ಜನಾನುರಾಗಿಯಾರುವ ಸಂತ ಜೋಸೆಫ್ ವಾಜರು ಕ್ರಿ. ಶ. 1681ರಲ್ಲಿ ಇಲ್ಲಿಗಾಗಮಿಸುತ್ತಾರೆ. ಕುಂದಾಪುರ ವಲಯದ ಪ್ರಧಾನ ಗುರುಗಳಾಗಿದ್ದ ಅವರು ನಮ್ಮ ಗಂಗೊಳ್ಳಿಯಲ್ಲಿಯೂ ಧರ್ಮಗುರುಗಳಾಗಿ ಅನುಪಮ ಸೇವೆ ನೀಡಿರುತ್ತಾರೆ. ಇಲ್ಲಿನ ಜೀರ್ಣಾವಸ್ಥೆಯಲ್ಲಿದ್ದ ದೇವಾಲಯವನ್ನು ಅವರು ದುರಸ್ತಿಗೊಳಿಸಿದರು ಹಾಗೂ ಗಂಗೊಳ್ಳಿಯ ಬಾಂಧವರಿಗೆ ಅಮೂಲ್ಯ ಸೇವೆ ನೀಡಿದರು.

ಗಂಗೊಳ್ಳಿ ದೇವಾಲಯಕ್ಕೆ ಒಳಪಟ್ಟಿರುವ ನಿಸರ್ಗರಮಣಿಯ ಸುಂದರ ದ್ವೀಪ ಕನ್ನಡಕುದ್ರುವಿನಲ್ಲಿ ಸಂತ ಜೋಸೆಫ್ ವಾಜರಿಗೆ ಸಮರ್ಪಿಸಿರುವ ಆಕರ್ಷಕ ಆರಾಧನಾಲಯವಿದ್ದು ಇಲ್ಲಿಗಾಗಮಿಸುವ ಭಕ್ತಾದಿಗಳಿಗೆ ಈ ಸಂತರ ಅಮೂಲ್ಯ ಸೇವೆಯನ್ನು ಸಾರಿ ಹೇಳುತ್ತಿದೆ.

ಅದ್ಭುತ ಕನಸುಗಾರ ಶ್ರೀ ಲುವಿಸ್ ಸಿಲ್ವಾ
ಹಲವಾರು ಧಾರ್ಮಿಕ, ಸಾಮಾಜಿಕ ಹಾಗೂ ಚಾರಿತ್ರಿಕ ಏಳುಬೀಳುಗಳಿಗೆ ಸಾಕ್ಷಿಯಾಗಿ ಬೆಳೆದು ಬಂದ ಕೊಸೆಸಾಂವ್ ಅಮ್ಮನವರ ದೇವಾಲಯವು ಕ್ರಿ.ಶ. 1800ರ ಪ್ರಾರಂಭಿಕ ವರ್ಷಗಳ ತನಕವೂ ಭದ್ರ ಹಾಗೂ ಯೋಗ್ಯ ಕಟ್ಟಡವನ್ನು ಹೊಂದಿರಲಿಲ್ಲ. ಇದಕ್ಕೆ ದೈವಯೋಗವೆನ್ನುವಂತೆ ಕ್ರಿ.ಶ. 1812ರಲ್ಲಿ ತ್ರಾಸಿಯ ಶ್ರೀ ಲುವಿಸ್ ಸಿಲ್ವಾರವರಲ್ಲಿ ಅಧ್ಬುತ ಕನಸೊಂದು ಚಿಗುರೊಡೆಯಿತು.

ಕಾಯಕದಲ್ಲಿ ರೈತರಾಗಿದ್ದರೂ ಹಲವಾರು ಊರುಗಳನ್ನು ಸುತ್ತಾಡಿದ ಅನುಭವ ಉಳ್ಳ ಈ ಮಹಾನುಭಾವರು ಗೋವೆಯಲ್ಲಿನ ಸುಂದರ ಕ್ರೈಸ್ತ ದೇವಾಲಯಗಳ ಚೆಲುವಿಗೆ ಮನಸೋತು ಅಂಥಹದ್ದೊಂದು ದೇವಾಲಯವನ್ನು ಗಂಗೊಳ್ಳಿಯಲ್ಲಿ ನಿರ್ಮಿಸುವ ಯೋಜನೆಯನ್ನು ರೂಪಿಸುತ್ತಾರೆ. ಅಂದಿನ ಬ್ರಿಟಿಶ್ ಕಲೆಕ್ಟರ್ ಹ್ಯಾರಿಸ್ ಸಾಹೇಬರನ್ನು ಭೇಟಿಯಾಗಿ ಯೋಜನೆಯನ್ನು ವಿವರಿಸಿ ಅವರಿಂದ ಪ್ರಶಂಸಿಸಲ್ಪಟ್ಟು ಒಂದು ಸಾವಿರ ರೂಪಾಯಿಗಳ ಸಾಲ ಹಾಗೂ ಇತರ ವಸ್ತು ರೂಪದ ಅನುದಾನವನ್ನು ಪಡೆಯುತ್ತಾರೆ. ದೇವಾಲಯದ ನಿರ್ಮಾಣ ಆರಂಭಗೊಂಡು ಆ ಹಣವೆಲ್ಲಾ ಮುಗಿದಾಗ ತನ್ನ ಮಿತ್ರರಿಂದ ಹಣಪಡೆದು ಯೋಜನೆಯನ್ನು ಮುಂದುವರೆಸುತ್ತಾರೆ. ಕೊನೆಗೆ ಬಂದ ಹಣವೆಲ್ಲಾ ಬರಿದಾದಾಗ ತನ್ನ ಮಡದಿಯ ಚಿನ್ನಾಭರಣಗಳನ್ನೆಲ್ಲಾ ಮಾರಿ ದೇವಾಲಯದ ನಿರ್ಮಾಣವನ್ನು ಸಂಪೂರ್ಣಗೊಳಿಸುತ್ತಾರೆ. ಹೀಗೆ ಓರ್ವ ಅದ್ಭುತ ಕನಸುಗಾರ ಶ್ರೀ ಲುವಿಸ್ ಸಿಲ್ವಾರ ಏಕಾಂಗಿ ಅಭಿಯಾನದಿಂದ ಸುಂದರ ಸೊಭಗಿನ ದೇವಾಲಯವು ಮೈದಳೆಯುತ್ತದೆ.

ಮುಂದೆ ಗಂಗೊಳ್ಳಿ ಧರ್ಮಕೇಂದ್ರವು ಅಭಿವೃಧ್ಧಿಹೊಂದುತ್ತಾ ಹಲವಾರು ಧರ್ಮಗುರುಗಳು ಇಲ್ಲಿ ಆಧ್ಯಾತ್ಮಿಕ ಸೇವೆಯನ್ನು ನೀಡಿದರು. ಕ್ರಿ.ಶ. 1956ರಲ್ಲಿ ಗಂಗೊಳ್ಳಿಯ ಧರ್ಮಗುರುಗಳಾಗಿ ನೇಮಕಗೊಂಡ ವಂ. ಜೋಸೆಫ್ ಡಿ’ಸೋಜರವರು ಪ್ರಧಾನ ವೇದಿಕೆ ಹಾಗೂ ಮುಂಭಾಗದ ಗೋಪುರವನ್ನು ಉಳಿಸಿಕೊಂಡು ದೇವಾಲಯದ ಕಟ್ಟಡದ ವಿಸ್ತರಣೆ ಮಾಡಿದರು ಹಾಗೂ ಹಲವಾರು ಜನೋಪಯೋಗಿ ಕಾರ್ಯಗಳನ್ನು ಹಮ್ಮಿಕೊಂಡರು.

ಹೊಸತನ ನೀಡಿದ ಹರಿಕಾರ ವಂ. ಮೈಕಲ್ ನರೊನ್ಹಾ
ಕ್ರಿ.ಶ. 1962ರಲ್ಲಿ ಗಂಗೊಳ್ಳಿಯ ಧರ್ಮಗುರುಗಳಾಗಿ ನೇಮಕಗೊಂಡು 18ವರ್ಷಗಳ ಸುದೀರ್ಘ ಹಾಗೂ ಅಮೂಲ್ಯ ಸೇವೆ ಸಲ್ಲಿಸಿ ಗಂಗೊಳ್ಳಿಯ ಕ್ರೈಸ್ತ ಸಮುದಾಯಕ್ಕೊಂದು ಹೊಸ ಆಯಾಮವನ್ನು ನೀಡಿ ಸಮಾಜಕ್ಕೆ ಅಪೂರ್ವ ಕೊಡುಗೆ ನೀಡಿದ ಮಹಾನ್ ಚೇತನ ವಂ. ಗುರು ಮೈಕಲ್ ನರೋನ್ಹಾರವರು.

ಅವರ ದೂರದರ್ಶಿತ್ವದ ಫಲವಾಗಿ ಗಂಗೊಳ್ಳಿಯಲ್ಲಿ ಅಪೊಸ್ತಲಿಕ್ ಧರ್ಮಭಗಿನಿಯರ ಆಗಮನವಾಯಿತು ಹಾಗೂ ಕಾರ್ಮೆಲ್ ಕಾನ್ವೆಂಟ್ ಪ್ರಾರಂಭಗೊಂಡಿತು. ಆ ದಿನಗಳಲ್ಲಿ ಗಂಗೊಳ್ಳಿ ಧರ್ಮಕೇಂದ್ರದ ಭಾಗವಾಗಿದ್ದ ತ್ರಾಸಿಯಲ್ಲಿ ಅವರು ಹೋಲಿಕ್ರಾಸ್ ಆಸ್ಪತ್ರೆಯನ್ನೂ ಆರಂಭಿಸಿದರು. ವಿದ್ಯಾ ಕ್ಷೇತ್ರದ ಕ್ರಾಂತಿಯ ನಾಂದಿಯಾಗಿ ಸ್ಟೆಲ್ಲಾ ಮಾರಿಸ್ ಫ್ರೌಢ ಶಾಲೆಯ ಸ್ಥಾಪನೆಯಾಯಿತು. ಈ ಅಭಿಯಾನವು ಮುಂದುವರೆದು ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯು ವಿದ್ಯಾಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯಿತು. ಸಂತ ಜೋಸೆಫ್ ವಾಜರ ಅಭಿಮಾನಿಗಳಾಗಿದ್ದ ಗುರು ಮೈಕೆಲ್ ನರೊನ್ಹಾರವರು ಸಂತ ಜೋಸೆಫ್ ವಾಜ್ ಸಭಾಂಗಣವನ್ನು ನಿರ್ಮಿಸಿದರು. ಅವರ ಸೇವಾವಧಿಯಲ್ಲಿ ದೇವಾಲಯದ ಹಿಂಭಾಗದಲ್ಲಿ ಹೊಸ ಗೊಡೆಯ ನಿರ್ಮಾಣ ಹಾಗೂ ಸಾಕ್ರಿಸ್ತಿಯ ದುರಸ್ತಿಯಾಯಿತು.

ಗುರು ಮೈಕಲ್ ನರೊನ್ಹಾರ ಸುದೀರ್ಘ ಸೇವಾವಧಿಯ ಬಳಿಕ ನೇಮಕಗೊಂಡ ಧರ್ಮಗುರುಗಳು ಅವರ ಆದರ್ಶಗಳನ್ನು ಮುಂದುವರೆಸಿ ನಿಸ್ವಾರ್ಥ ಸೇವೆ ನೀಡಿರುತ್ತಾರೆ. ವಂ. ಎ.ಎ.ಸೆರ್ರಾ, ವಂ. ತೋಮಸ್ ಡೆ’ಸಾ, ವಂ. ಪೀಟರ್ ನಜರೆತ್, ವಂ. ಆಲ್ಬರ್ಟ್ ಮಿನೆಜಸ್, ವಂ. ಫೆಲಿಕ್ಸ್ ನರೊನ್ಹಾ, ವಂ. ಅನಿಲ್ ಕರ್ನೆಲಿಯೊ, ವಂ. ಸ್ಟ್ಯಾನಿ ಪಿರೇರಾ, ವಂ. ಆಲ್ಫೋನ್ಸಸ್ ಡಿ’ಲೀಮ ಇವರುಗಳು ಸಮಾಜದ ಉನ್ನತಿಗಾಗಿ ಹಾಗೂ ಆಧ್ಯಾತ್ಮಿಕ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುತ್ತಾರೆ.

ಕಡಲಿಗೆ ಕಡಿವಾಣ ಹಾಕಿದ ಕೊಸೆಸಾಂವ್ ಅಮ್ಮನವರು.
ಅದ್ಭುತ ಇತಿಹಾಸವನ್ನು ಹೊಂದಿರುವ ಗಂಗೊಳ್ಳಿಯ ಕೊಸೆಸಾಂವು ಅಮ್ಮನ ದೇವಾಲಯವು ಹಲವಾರು ರೋಚಕ ದಂತಕಥೆಗಳನ್ನೂ ತನ್ನೊಡಲಲ್ಲಿ ಹೊತ್ತುಕೊಂಡಿದೆ. ನಮ್ಮ ಹಿರಿಯರು ಹೇಳುತ್ತಿರುವಂತೆ ಒಂದೊಮ್ಮೆ ಅರಬ್ಬೀ ಸಮುದ್ರವು ಉಕ್ಕೇರಿ ಮುಂದೆ ಮುಂದೆ ಬಂದು ಅದರ ರಾಕ್ಷಸಗಾತ್ರದ ಅಲೆಗಳು ದೇವಾಲಯದ ಹಿಂಭಾಗದ ಗೋಡೆಗೆ ಅಪ್ಪಳಿಸತೊಡಗಿದವು. ಇದರಿಂದ ವಿಚಲಿತರಾದ ಕ್ರೈಸ್ತ ಬಾಂಧವರು ದಿಕ್ಕುಗಾಣದೇ ದೇವಾಲಯದೊಳಗಿರುವ ವಿಗ್ರಹಗಳು, ಪೂಜಾ ಪರಿಕರಗಳು ಹಾಗೂ ಇತರ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದರು. ಆದರೆ ಪ್ರಧಾನ ಪೀಠದ ಮೇಲಿರುವ ಕೊಸೆಸಾಂವ್ ಅಮ್ಮನ ವಿಗ್ರಹವನ್ನು ಅವರಿಂದ ಕದಲಿಸಲಾಗಲಿಲ್ಲ. ಶತಪ್ರಯತ್ನ ಮಾಡಿದರೂ ಏನೂ ಪರಿಣಾಮ ಕಾಣದಾದಾಗ ಜನರು ನಿರಾಶೆಯಿಂದ ತಂತಮ್ಮ ಮನೆಗಳಿಗೆ ತೆರಳಿದರು. ಆದರೆ ಅಂದು ರಾತ್ರಿ ಪವಾಡವೊಂದು ನಡೆಯಿತು. ಮರುದಿನ ದೇವಾಲಯಕ್ಕೆ ಆಗಮಿಸಿದ ಜನರಿಗೆ ಆಶ್ಚರ್ಯ ಕಾದಿತ್ತು. ಭೋರ್ಗರೆದು ಉಕ್ಕೇರಿದ್ದ ಕಡಲು ಹಿಂದೆಸರಿದು ತನ್ನ ಮೊದಲ ಸ್ಥಾನದಲ್ಲಿಯೇ ಶಾಂತವಾಗಿ ಪವಡಿಸಿತ್ತು. ಮೂಕಸ್ಮಿತರಾದ ಜನರು ದೇವಾಲಯದ ಒಳಗೆ ಹೋದಾಗ ಅಲ್ಲಿನ ದೃಶ್ಯವನ್ನು ಕಂಡು ದಂಗಾಗಿ ಹೋದರು. ಹೌದು ಹಿಂದಿನ ದಿನ ಅವರಿಂದ ಕದಲಿಸಲಾಗದ ಕೊಸೆಸಾಂವ್ ಅಮ್ಮನ ವಿಗ್ರಹವು ಕಡಲಿಗೆ ಅಭಿಮುಖವಾಗಿ ತಿರುಗಿ ನಿಂತಿತ್ತು.
ದೇವಾಲಯದ ಭಂಡಾರದಲ್ಲಿರುವ ಪ್ರಾಚೀನ ಕಾಷ್ಟ ವಿಗ್ರಹಗಳು, ಬೆಳ್ಳಿ ಹಾಗೂ ದಂತದ ಪ್ರತಿಮೆಗಳು ನಮ್ಮ ಶ್ರೀಮಂತ ಪರಂಪರೆಯನ್ನು ಸಾರಿ ಹೇಳುತ್ತವೆ.

ದೇವಾಲಯದ ನವ ನಿರ್ಮಾಣದ ಯಶೋಗಾಥೆ
ಕ್ರಿ.ಶ. 2015ರಲ್ಲಿ ಕೊಸೆಸಾಂವು ಅಮ್ಮನವರ ದೇವಾಲಯದ ಧರ್ಮಗುರುಗಳಾಗಿ ನೇಮಕಗೊಂಡ ವಂ. ಆಲ್ಬರ್ಟ್ ಕ್ರಾಸ್ತಾರವರ ಸೇವಾವದಿಯಲ್ಲಿ ಗಂಗೊಳ್ಳಿಯ ಕ್ರೈಸ್ತ ಸಮಾಜದಲ್ಲಿ ಒಂದು ಅಭೂತಪೂರ್ವ ಸಂಚಲನ ಉಂಟಾಗಿದೆ. ಹಲವಾರು ವರ್ಷಗಳಿಂದ ಕನಸಾಗಿಯೇ ಉಳಿದ್ದಿದ್ದ ದೇವಾಲಯದ ನವನಿರ್ಮಾಣದ ಹಂಬಲವು ಉತ್ಸಾಹದ ಚಿಲುಮೆಯೆಂತೆ ಪುಟಿದೆದ್ದು ಸುಂದರ ಭವ್ಯ ದೇಗುಲದ ರೂಪದಲ್ಲಿ ನಮ್ಮ ಮುಂದೆ ಮೈದಳೆದು ನಿಂತಿದೆ. ವಂ. ಆಲ್ಫೋನ್ಸಸ್ ಡಿ’ಲೀಮಾರವರ ಸೇವಾವಧಿಯಲ್ಲಿಯೇ ನವ ದೇವಾಲಯದ ಅನಿವಾರ್ಯತೆಯನ್ನು ಪರಿಗಣಿಸಿ ಈ ಬೃಹತ್ ಯೋಜನೆಯು ಒಂದು ಸ್ಪಷ್ಟರೂಪ ತಳೆಯಲಾರಂಭಿಸಿತು. ಇದೇ ಸಂದರ್ಬದಲ್ಲಿ ವಂ. ಆಲ್ಬರ್ಟ್ ಕ್ರಾಸ್ತಾರವರು ಗಂಗೊಳ್ಳಿಯ ಧರ್ಮಗುರುಗಳಾಗಿ ನೇಮಕಗೊಳ್ಳುವುದರೊಂದಿಗೆ ಅವರ ಸಮರ್ಥ ವiರ್ಗದರ್ಶನದೊಂದಿಗೆ ಈ ಮಹಾನ್ ಯೋಜನೆಯು ಮೊಳಕೆಯೊಡೆಯಿತು.

ಕ್ರಿ.ಶ. 2015 ಜನವರಿ 15ರಂದು ಉಡುಪಿಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೊರವರ ಅಮೃತ ಹಸ್ತದಿಂದ ದೇವಾಲಯದ ನೂತನ ಕಟ್ಟಡದ ಶಿಲಾನ್ಯಾಸವಾಯಿತು. ಹುಮ್ಮಸ್ಸಿನಿಂದ ಪುಟಿಯುವ ಪಾಲನಾ ಮಂಡಳಿಯ ಸದಸ್ಯರ ನಿಸ್ವಾರ್ಥ ಶ್ರಮ, ಸಹೃದಯದ ಸಮುದಾಯ ಬಾಂಧವರ ಸಹಕಾರ ಹಾಗೂ ಉದಾರ ದಾನಿಗಳ ನೆರವಿನೊಂದಿಗೆ ಕನಸಿನೋಪಾದಿಯಲ್ಲಿ ಒಂದು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ದೇವಾಲಯದ ನಿರ್ಮಾಣವು ಸಂಪೂರ್ಣಗೊಂಡಿತು. ಹಾಗೂ 2017 ಮೇ ತಿಂಗಳ 18ರಂದು ಉಡುಪಿಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೊರವರು ಈ ದೇವಾಲಯವನ್ನು ಆಶೀರ್ವದಿಸಿ ಲೋಕಾರ್ಪಣೆಗೈಯಲಿದ್ದಾರೆ.

ಪ್ರಸ್ತುತ ಗಂಗೊಳ್ಳಿಯ ಕೊಸೆಸಾಂವು ಅಮ್ಮನವರ ಕ್ರೈಸ್ತ ಸಮುದಾಯವು 7 ವಾಳೆಗಳಲ್ಲಿ 210 ಕುಟುಂಬಗಳನ್ನು ಹೊಂದಿದ್ದು ಗಂಗೊಳ್ಳಿ, ಗುಜ್ಜಾಡಿ ಹಾಗೂ ಹೆಮ್ಮಾಡಿ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸಮುದಾಯದ ಅಭಿವೃದ್ಧಿಯ 18 ಆಯೋಗಗಳು ಹಾಗೂ ಇತರ ಸಂಸ್ಥೆಗಳ ಅಮೂಲ್ಯ ಸೇವೆಯಿಂದ ಗಂಗೊಳ್ಳಿಯ ಕ್ರೈಸ್ತ ಸಮುದಾಯವು ನಿರಂತರ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಸಮುದಾಯದಲ್ಲಿ ಹಲವಾರು ದೈವಕರೆಗಳು ರೂಪಿತವಾಗಿದ್ದು ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು ವಿಶ್ವದಾದ್ಯಂತ ಯೇಸುಸ್ವಾಮಿಯ ಸಂದೇಶವನ್ನು ಸಾರಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುತ್ತಾರೆ.

ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅಪೋಸ್ತಲಿಕ್ ಕಾರ್ಮೆಲ್ ಧರ್ಮ ಭಗಿನಿಯರ ಸೇವಾ ಕಾರ್ಯಗಳು ಶ್ಲಾಘನೀಯವಾಗಿವೆ. ಸುಮಾರು ಐವತ್ತು ಸಂವತ್ಸರಗಳಿಂದ ಸಮುದಾಯದ ಶೈಕ್ಷಣಿಕ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅವರು ಅನುಪಮ ಸೇವೆ ನೀಡಿರುತ್ತಾರೆ. ಸಮುದಾಯದ ಮಕ್ಕಳಲ್ಲಿ ಹಾಗೂ ಯವಜನರಲ್ಲಿ ಮೌಲ್ಯಾಧಾರಿತ ಸದ್ಗುಣಗಳನ್ನು ಬಿತ್ತಿ ಅವರನ್ನು ಉತ್ತಮ ಸಮಾಜದ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಅವರ ನಿಸ್ವಾರ್ಥ ಸೇವೆ ಜನಮನಗಳಲ್ಲಿ ಅಚ್ಚಳಿಯದೇ ನಿಂತಿದೆ.

ಪ್ರಸ್ತುತ ವಂ. ಆಲ್ಬರ್ಟ್ ಕ್ರಾಸ್ತಾರವರ ಸಮರ್ಥ ಮಾರ್ಗದರ್ಶನದಲ್ಲಿ ಕೊಸೆಸಾಂವು ಅಮ್ಮನವರ ಸಮುದಾಯವು ದಿನೇದಿನೇ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಅವರೊಂದಿಗೆ ಹಗಲಿರುಳೆನ್ನದೇ ಬೆನ್ನೆಲುಬಾಗಿ ನಿಂತಿರುವ ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಕ್ರಾಸ್ತಾ, ಕಾರ್ಯದರ್ಶಿ ಶ್ರೀಮತಿ ಪ್ರೀತಿ ಫೆರ್ನಾಂಡಿಸ್ ಹಾಗೂ ಸದಾಕಾಲ ಬೆಂಬಲ ನೀಡುವ ಪಾಲನಾ ಮಂಡಳಿಯ ಸದಸ್ಯರು ಇವರೆಲ್ಲರ ಅಮೂಲ್ಯ ಸೇವೆ ಸಹಕಾರದೊಂದಿಗೆ ಸದಾ ಶುಭ ಹಾರೈಸುವ ಸಮುದಾಯದ ಕ್ರೈಸ್ತ ಬಂಧುಗಳು ಹಾಗೂ ಹಿತೈಶಿಗಳ ನೆರವಿನೊಂದಗೆ ಉತ್ತರೋತ್ತರ ಅಭಿವೃದ್ಧಿಯತ್ತ ಸಾಗುತ್ತಿದೆ.

ನಮ್ಮೆಲ್ಲರ ಮಾತೆಯಾಗಿರುವ ಕೊಸೆಸಾಂವ್ ಅಮ್ಮನವರು ಅವರ ಮಕ್ಕಳಾದ ನಮ್ಮೆಲ್ಲರನ್ನೂ ಹರಸಲಿ ಹಾಗೂ ತನ್ನ ಪುತ್ರ ಯೇಸು ಸ್ವಾಮಿಯ ಅನಂತ ಅಭಯವನ್ನು ನಮಗೆ ಕರುಣಿಸಲಿ ಎಂದು ಹಾರೈಸೋಣ.


Spread the love