ಮೇ 29- ಜೂ. 1, ಸೋದೆ- ಸುಬ್ರಹ್ಮಣ್ಯ ಮಠಗಳ ಐತಿಹಾಸಿಕ ಸಮಾಗಮ

Spread the love

ಮೇ 29- ಜೂ. 1, ಸೋದೆ- ಸುಬ್ರಹ್ಮಣ್ಯ ಮಠಗಳ ಐತಿಹಾಸಿಕ ಸಮಾಗಮ

ಉಡುಪಿ: ಆಚಾರ್ಯ ಮಧ್ವರ ಸೋದರ ಶ್ರೀ ವಿಷ್ಣುತೀರ್ಥಾಚಾರ್ಯರಿಂದ ಆರಂಭಗೊಂಡ ಸೋದೆ ಮತ್ತು ಸುಬ್ರಹ್ಮಣ್ಯ ಮಠಗಳು ಕಾರಣಾಂತರಗಳಿಂದ ಸಂಪರ್ಕ ಕಡಿದುಕೊಂಡಿದ್ದು ಇದೀಗ ಉಭಯ ಮಠಗಳ ಐತಿಹಾಸಿಕ ಸಮಾಗಮಕ್ಕೆ ಕಾಲ ಕೂಡಿಬಂದಿದೆ. ಸುಮಾರು 250 ವರ್ಷಗಳ ಬಳಿಕ ಉಭಯ ಮಠಗಳು ಒಂದಾಗುತ್ತಿದ್ದು, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮತ್ತು ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರ ಸಂಕಲ್ಪದಂತೆ ಈ ತಿಂಗಳ 29ರಂದು ಉಭಯ ಮಠಗಳ ಯತಿಗಳು ಉಡುಪಿ ಶ್ರೀ ಅನಂತೇಶ್ವರ ದೇವರ ಸನ್ನಿಧಿಯ ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ಸಮಾಗಮಗೊಳ್ಳುವರು. ತತ್ಸಂಬಂಧದ ಕಾರ್ಯಕ್ರಮಗಳು ಜೂ. 1ರ ವರೆಗೆ ನಡೆಯಲಿದೆ ಎಂದು ಸೋದೆ ಮಠದ ಪ್ರಕಟಣೆ ತಿಳಿಸಿದೆ.

ಮೇ 29ರ ಬೆಳಿಗ್ಗೆ 9 ಗಂಟೆಗೆ ಉಡುಪಿ ರಥಬೀದಿ ಅನಂತೇಶ್ವರ ದೇವಳದಲ್ಲಿ ಸೋದೆ ಮತ್ತು ಸುಬ್ರಹ್ಮಣ್ಯ ಶ್ರೀಗಳ ಸಮಾಗಮ ನಡೆಯಲಿದ್ದು ಈ ಸಂದರ್ಭದಲ್ಲಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥರು ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಅದಮಾರು ಶ್ರೀ ವಿಶ್ವಪ್ರಿಯತೀರ್ಥರು ಮತ್ತು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಾಗವಹಿಸುವರು. ಬಳಿಕ 10 ಗಂಟೆಗೆ ರಾಜಾಂಗಣದಲ್ಲಿ ವಿವಿಧ ಯತಿಗಳು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಮೇ 30ರ ಅಪರಾಹ್ನ 4 ಗಂಟೆಗೆ ಸುಬ್ರಹ್ಮಣ್ಯ ಮಠಾಧೀಶರು ಸೋಂದಾ ಕ್ಷೇತ್ರ ಪುರಪ್ರವೇಶ ಮಾಡಲಿದ್ದು ಅವರನ್ನು ಗೌರವಾದರದಿಂದ ಬರಮಾಡಿಕೊಳ್ಳಲಾಗುವುದು. ಬಳಿಕ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಮೇ 31ರಂದು ಸೋದೆ ಮಠಾಧೀಶರು ಸುಬ್ರಹ್ಮಣ್ಯ ಕ್ಷೇತ್ರ ಪುರಪ್ರವೇಶ ಮಾಡಲಿದ್ದು, ಜೂ. 1ರಂದು ಸುಬ್ರಹ್ಮಣ್ಯಮಠದಲ್ಲಿ ಉಭಯ ಶ್ರೀಪಾದರಿಂದ ಸಂಸ್ಥಾನ ಪೂಜೆ ನಡೆಯಲಿದೆ.


Spread the love