`ಮೊಂತಿ ಹಬ್ಬದ ವೇಳೆ ಪರಿಸರ ಸಂರಕ್ಷಣೆಗೆ ಕರೆ ನೀಡಿದ ಉಡುಪಿ ಬಿಷಪ್

Spread the love

`ಮೊಂತಿ ಹಬ್ಬದ ವೇಳೆ ಪರಿಸರ ಸಂರಕ್ಷಣೆಗೆ ಕರೆ ನೀಡಿದ ಉಡುಪಿ ಬಿಷಪ್

ಉಡುಪಿ: ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕಾದ ಈ ದಿನಗಳಲ್ಲಿ ಪರಿಸರ ಆಧ್ಯಾತ್ಮಿಕತೆಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ. ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಕರಾವಳಿ ಕ್ರೈಸ್ತರ ತೆನೆಹಬ್ಬ ಅಥವಾ ಮೊಂತಿ ಫೆಸ್ತ್ ಹಬ್ಬದ ಸಂದರ್ಭದಲ್ಲಿ ಶುಭಾಶಯ ಸಂದೇಶ ನೀಡಿದ ಅವರು ಮಳೆಯಿಂದ ಸಮೃದ್ಧಗೊಂಡು ಪೃಕೃತಿಯು ಫಲಭರಿತವಾಗುವಾಗ ಭರವಸೆಯ ಮಹಾಪೂರದಂತೆ ಬರುವ ತೆನೆ ಹಬ್ಬ ಎಲ್ಲರನ್ನು ಸಂತೃಪ್ತಿಗೊಳಿಸುತ್ತದೆ. ಇದನ್ನೇ ಮಾತೆ ಮರಿಯಮ್ಮನವರ ಹುಟ್ಟುಹಬ್ಬ ಅಥವ ‘ಮೊಂತಿ ಹಬ್ಬ’ ವಾಗಿ ಅಕ್ಕರೆಯಿಂದ ಆಚರಿಸುತ್ತಾರೆ.

`ತೆನೆ ಹಬ್ಬ’ ಅಥವಾ ‘ಮೊಂತಿ ಹಬ್ಬ’ವು ಕರಾವಳಿ ಕ್ರೈಸ್ತರ ಅತ್ಯಂತ ಪ್ರಿಯ ಹಬ್ಬಗಳಲ್ಲಿ ಒಂದು. ಈ ಹಬ್ಬ ಕೇವಲ ಒಂದು ದಿನದ ಆಚರಣೆಯಲ್ಲ. ಒಂಬತ್ತು ದಿನಗಳ ಸಂಭ್ರಮ. ಹಬ್ಬಕ್ಕೆ ಮುಂಚೆ ಒಂಬತ್ತು ದಿನಗಳ ಕಾಲ ಬಾಲಿಕಾ ಮಾತೆ ಮರಿಯಮ್ಮನವರಿಗೆ ಪುಟಾಣಿಗಳು ದಿನಾಲು ಪುಷ್ಪವೃಷ್ಟಿಗೈದು ಸನ್ಮಾನಿಸುವುದನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ.

ಹತ್ತನೇ ಎಂದರೆ, ಹಬ್ಬದ ದಿನ ದೇವಾಲಯದಲ್ಲಿ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡು ಬಾಲಿಕಾ ಮಾತೆಗೆ ವಿಜೃಂಭಣೆಯಿಂದ ಪುಷ್ಪವೃಷ್ಟಿಗೈದ ನಂತರ, ಪ್ರತಿಯೊಬ್ಬರಿಗೂ ಆಶೀರ್ವದಿಸಿದ ಬತ್ತದ ತೆನೆಯನ್ನು ನೀಡಲಾಗುವುದು. ಇದು ವರ್ಷದ ಪ್ರಥಮ ಫಸಲು. ಮಾತೆ ಮರಿಯಮ್ಮನವರು ಯೇಸು ಕ್ರಿಸ್ತರ ವಿಮೋಚನೆಯ ಪ್ರಥಮ ಫಲ. ಅದೇ ರೀತಿ ಪೃಕೃತಿಮಾತೆಯು ನೀಡಿದ ಮೊದಲ ಫಲವನ್ನು ಕುಟುಂಬದ ಸದಸ್ಯರೆಲ್ಲರೂ ಜೊತೆಯಾಗಿ ಹಂಚಿಕೊಂಡು ಸೇವಿಸುವುದು ಕುಟುಂಬದ ಐಕ್ಯತೆಗೆ ಪೂರಕ.

ಈ ಹಬ್ಬದ ಸಂದರ್ಭದಲ್ಲಿ ಅನ್ನಾಹಾರ ನೀಡಿ ಸರ್ವರನ್ನು ಪೆÇೀಷಿಸುವ ಪೃಕೃತಿಮಾತೆಯನ್ನು ವಂದಿಸುವುದು ಬಹು ಅರ್ಥಪೂರ್ಣ. ಇಂದು ಎಲ್ಲರನ್ನು ಸಾಕಿ ಸಲಹುವ ಪೃಕೃತಿಮಾತೆಯು ಮನುಷ್ಯನ ದಬ್ಬಾಳಿಕೆಗೆ ಒಳಗಾಗಿದ್ದಾಳೆ. ಇದರ ಪರಿಣಾಮವಾಗಿ ಇತ್ತೀಚೆಗೆ ಕೇರಳ ಹಾಗೂ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳು, ಅನಿಶ್ಚಿತ ಮಳೆ, ವಾತಾವರಣದ ವೈಪರೀತ್ಯ, ವಿಚಿತ್ರವಾದ ರೋಗರುಜಿನಗಳು, ಇನ್ನಿತರ ವಿಷಮತೆಗಳು ಸಂಭವಿಸುತ್ತವೆ. ಒಂದು ರೀತಿಯಲ್ಲಿ ಇದನ್ನಿ ಪೃಕೃತಿಮಾತೆಯ ದುಃಖ ಎನ್ನಬಹುದು. ಭೂಮಾತೆಯನ್ನು, ಪರಿಸರವನ್ನು ಸಂರಕ್ಷಿಸುವ ಆದ್ಯ ಕರ್ತವ್ಯದ ಬಗ್ಗೆ ಈ ಹಬ್ಬವು ಎಚ್ಚರಿಸುತ್ತದೆ. ಇದಕ್ಕಾಗಿ ಎಲ್ಲರೂ ಪರಿಸರ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ.

ಈ ವರ್ಷದ `ಮೊಂತಿ ಹಬ್ಬವು’ ಬಾಲಿಕಾ ಮಾತೆ ಮರಿಯಮ್ಮನವರ ಬಿನ್ನಹಗಳ ಮೂಲಕ ಸರ್ವಜನರನ್ನು ಒಂದೇ ಕುಟುಂಬದ ಸದಸ್ಯರಂತೆ ಒಗ್ಗೂಡಿಸಲಿ. ಪೃಕೃತಿಮಾತೆಯ ಆರೈಕೆಯನ್ನು ಸವಿಯುವ ಎಲ್ಲರೂ ಪರಿಸರ ಸಂರಕ್ಷಣೆಗಾಗಿ ಗಂಭೀರ ಪ್ರಯತ್ನಗಳನ್ನು ನಡೆಸಲಿ. ನಮ್ಮ ಜೀವನಶೈಲಿಯು ಬದಲಾಗಿ ಈ ಭೂಮಿಯ ಯೋಗ್ಯ ನಾಗರಿಕರನ್ನಾಗಿ ನಮ್ಮನ್ನು ಪರಿವರ್ತಿಸಲಿ. ಒಂದೇ ಕುಟುಂಬದ ಸದಸ್ಯರಂತೆ ಈ ಹಬ್ಬವನ್ನು ಆಚರಿಸುವಾಗ ಪೃಕೃತಿ ವಿಕೋಪದಿಂದ ಕಂಗೆಟ್ಟಿರುವ ಕೊಡಗು ಹಾಗು ಕೇರಳದ ಸಹೋದರ-ಸಹೋದರಿಯರಿಗಾಗಿ ನಮ್ಮ ಮನಗಳು ಮಿಡಿದು, ಹೃದಯವು ಔದಾರ್ಯತೆಯನ್ನು ತೋರಿಸಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love