ರಕ್ತ ಸಂಬಂಧ ಕನ್ನಡ ಕಿರುಚಿತ್ರ ಬಿಡುಗಡೆ

Spread the love

ರಕ್ತ ಸಂಬಂಧ ಕನ್ನಡ ಕಿರುಚಿತ್ರ ಬಿಡುಗಡೆ

ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾತ್ರವಹಿಸಿದ ಸಂಜನಾರವಿ ಅವರ ನಿರ್ದೇಶನದ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ‘ರಕ್ತ ಸಂಬಂಧ’ ಕನ್ನಡ ಕಿರುಚಿತ್ರದ ಬಿಡುಗಡೆ ಸಮಾರಂಭವು ಇತ್ತೀಚೆಗೆ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.

ಕಿರುಚಿತ್ರದ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಕೆ. ಆರ್. ರಾಮಮೂರ್ತಿ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವದ ಪರಿಪೂರ್ಣ ಬೆಳವಣಿಗೆಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಮೊದಲ ಬಾರಿಗೆ ಕಿರುಚಿತ್ರದಲ್ಲಿ ಪಾತ್ರವಹಿಸುವ ಅವಕಾಶ ಸಂಸ್ಥೆಯ ವಿದ್ಯಾರ್ಥಿಗಳಿಗೆ ಒದಗಿ ಬಂದಿರುವುದು ನಮ್ಮ ಸೌಭಾಗ್ಯ. ಇಂತಹ ಅವಕಾಶಗಳನ್ನು ಆಸಕ್ತ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಲ್ಲಿ ಖಂಡಿತವಾಗಿ ಯಶಸ್ಸನ್ನು ಕಾಣಲು ಸಾಧ್ಯ. ಇಂತಹ ಸಾಮಾಜಿಕ ಜಾಗೃತಿ ಮೂಡಿಸುವಂತಹ ಕಿರುಚಿತ್ರಕ್ಕಾಗಿ ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿ ವಿದಾರ್ಥಿಗಳಿಗೆ ಅವಕಾಶ ನೀಡಿದಂತಹ ಕಿರುಚಿತ್ರದ ತಂಡಕ್ಕೆ ಸಂಸ್ಥೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಮುಗ್ಧ ಮನಸ್ಸಿನ ಮಕ್ಕಳಲ್ಲಿ ಮುಟ್ಟಿನ ಬಗ್ಗೆ ತಿಳಿಹೇಳಿ ಅದೊಂದು ಪ್ರಕೃತಿ ಸಹಜ ದೈಹಿಕ ಬದಲಾವಣೆ. ಇದರ ಬಗ್ಗೆ ಜನರು ತಾವಾಗಿಯೇ ಸಮಾಜದಲ್ಲಿ ಸಂಪ್ರದಾಯ, ಕಟ್ಟುಪಾಡುಗಳನ್ನು ನಿರ್ಮಿಸಿಕೊಂಡಿದ್ದಾರೆ. ಹಿರಿಯರು ಮಕ್ಕಳ ಮನಸ್ಸನ್ನು ಇಂತಹ ಸಾಮಾಜಿಕ ಕಟ್ಟಪಾಡುಗಳಿಂದ ಮುಕ್ತ ಮಾಡಿ ಹೊಸ ಸಮಾಜ ಕಟ್ಟುವ ಬಗ್ಗೆ ಮನದಟ್ಟು ಮಾಡಿಕೊಡುವ ಉದ್ದೇಶವನ್ನು ಹೊಂದಿರುವ ಈ ಕಿರುಚಿತ್ರವನ್ನು ಕಹಾನಿವಾಲೇ ಸಂಸ್ಥೆ ಅವರು ನಿರ್ಮಿಸಿದ್ದಾರೆ.

ಕಿರುಚಿತ್ರದ ಸಂಕಲನಗಾರರಾದ ಜೀಯೋ ಸಿರಿಲ್ ಅವರು ಕಿರುಚಿತ್ರವನ್ನು ಉದ್ದೇಶಿಸಿ ಮಾತನಾಡುತ್ತ ಈ ಸಂಸ್ಥೆಯಲ್ಲಿನ ಮಕ್ಕಳ ಕಲಾ ಪ್ರಬುದ್ಧತೆಯು ಕಿರುಚಿತ್ರಕ್ಕೆ ನಿಜವಾದ ನ್ಯಾಯ ಒದಗಿಸಿದೆ. ಜೊತೆಗೆ ಕತೆ, ನಿರ್ದೇಶನ ಮಾಡಿದಂತಹ ಸಂಜನಾರವಿ ಹಾಗೂ ಛಾಯಾಚಿತ್ರದಲ್ಲಿ ಸಹಕರಿಸಿದ ಬಿಮಲ್ ಅವರ ಪರಿಶ್ರಮದಿಂದ ಬಾಂಗ್ಲಾ ದೇಶದ ಢಾಕಾದಲ್ಲಿ ನಡೆಯುವ ಮಕ್ಕಳ ಕಿರುಚಿತ್ರ ಸ್ಫರ್ಧೆಯಲ್ಲಿ ಈ ಕಿರುಚಿತ್ರವು ಭಾಗವಹಿಸುವಷ್ಟು ಗುಣಮಟ್ಟದ್ದಾಗಿದೆ ಎಂಬುವುದು ಸಂತೋಷದ ವಿಚಾರ ಎಂದರು. ಹಾಗೆಯೇ ನಟಿಸಿದಂತಹ ಪ್ರತಿಯೊಬ್ಬ ಕಲಾವಿರಿಗೂ, ಪ್ರೋತ್ಸಾಹಿಸಿದ ಸಂಸ್ಥೆಯ ಆಡಳಿತ ಮಂಡಳಿಗೆ ಕಿರುಚಿತ್ರದ ತಂಡದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಿರುಚಿತ್ರದಲ್ಲಿ ಪ್ರಧಾನ ಪಾತ್ರವಹಿಸಿದ ವಿದ್ಯಾರ್ಥಿಗಳಾದ ಶ್ರೇಷ್ಠಾ ಎಚ್.ತೇಲಿ, ಜಾಹ್ನವಿ, ಅಭಿಷೇಕ್ ಉಬಾಳೆ ಮತ್ತು ಶಿಕ್ಷಕರಾದ ಶ್ರೀಮತಿ ಪ್ರೇಮಲತಾ, ಶ್ರೀಮತಿ ಮಾಲಾಗೋಪಾಲ್, ಶ್ರೀ ಎಚ್. ಎಸ್. ತೇಲಿ ಅವರು ಕಿರುಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಳಿಕ ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಎನ್. ವಿಜಯಕುಮಾರಿ ಅವರು ಕಿರುಚಿತ್ರದಲ್ಲಿ ಪಾತ್ರವಹಿಸಿದ, ಕಾರ್ಯನಿವಹಿಸಿದ ಎಲ್ಲಾ ಕಲಾವಿದರಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಶ್ರೀ ಶಿವಾನಂದ ಇಂಗಳೇಶ್ವರ, ಕಲಾವಿದರಾದ ಶ್ರೀಮತಿ ಮಾಲಿನಿ ಪ್ರಹ್ಲಾದ್, ಶ್ರೀ ಹರಿಪ್ರಿಯ ಉಪಸ್ಥಿತರಿದ್ದರು. ಹಾಗೆಯೇ ಸಂಸ್ಥೆಯ ವಿದಾರ್ಥಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು. ಕನ್ನಡ ಶಿಕ್ಷಕರಾದ ಶ್ರೀ ಅರವಿಂದ ಬಿಜೈ ಕಾರ್ಯಕ್ರಮ ನಿರೂಪಿಸಿದರು.


Spread the love