ರಫೇಲ್‌ ಹಗರಣದ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ

Spread the love

ರಫೇಲ್‌ ಹಗರಣದ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ

ಉಡುಪಿ: ಬಹು ಕೋಟಿ ವಿಮಾನ ಖರೀದಿ ರಫೇಲ್‌ ಹಗರಣದಲ್ಲಿ ಭಾಗಿಯಾದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿಯಿಂದ ಆರಂಭಿಸಿ ಜಿಲ್ಲಾಧಿಕಾರಿ ಸಂಕೀರ್ಣದ ವರೆಗೆ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಆಗಮಿಸಿ ನರೇಂದ್ರ ಮೋದಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.

ಕೈಯಲ್ಲಿ ಲಾಠಿಗಳನ್ನು ಹಿಡಿದು ನರೇಂದ್ರ ಮೋದಿಯವರ ಭಾವಚಿತ್ರವನ್ನು ನೆಲದಲ್ಲಿ ಇಟ್ಟು ಗಲಿ ಗಲಿ ಮೇ ಷೋರ್ ಹೈ ನರೇಂದ್ರ ಮೋದಿ ಚೋರ್ ಹೈ ಎಂಬ ವ್ಯಂಗ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಖರೀದಿ ರಫೇಲ್‌ ಹಗರಣದಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಬಣ್ಣ ಬಯಲಾಗಿದೆ ಆರೋಪಿಸಿದರು.

ಪ್ರತಿಭಟನಾಕಾರರನನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ರಫೇಲ್ ಯುದ್ಧ ವಿಮಾನ ಹಗರಣದಿಂದ ದೇಶಕ್ಕೆ 41 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ಇದು ಈ ಶತಮಾನದ ಅತ್ಯಂತ ದೊಡ್ಡ ಭ್ರಷ್ಟಾಚಾರವಾಗಿದೆ. ಇದರಲ್ಲಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಕೈವಾಡ ಇರುವುದರಿಂದ ಈ ಬಗ್ಗೆ ಎಲ್ಲ ಪಕ್ಷಗಳನ್ನು ಒಳಗೊಂಡ   ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ಪರಸ್ಪರ ಅಪನಂಬಿಕೆ, ಗೊಂದಲಗಳಿಂದ ದೇಶದಲ್ಲಿ ಒಗ್ಗಟ್ಟು ಕಾಣಲು ಸಾಧ್ಯವಿಲ್ಲ. ನಾವೆಲ್ಲ ಜಾತ್ಯತೀತತೆ, ಸಹೋದರತೆ ಹಾಗೂ ಸೌಹಾರ್ದದಿಂದ ಒಟ್ಟಿಗೆ ಸಾಗಬೇಕು. ಆದರೆ ಬಿಜೆಪಿಯವರು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ, ಪರಸ್ಪರ ಅಪ ನಂಬಿಕೆ ಸೃಷ್ಟಿಸಿ, ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅಧಿಕಾರಕ್ಕೆ ಬಂದಿದ್ದಾರೆ. ಇದರಿಂದ ದೇಶದ ಸ್ಥಿತಿ ಈ ಮಟ್ಟಕ್ಕೆ ತಲುಪುವಂತಾಗಿದೆ ಎಂದು ಟೀಕಿಸಿದರು.

ಪ್ರತಿಭಟನಾ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ ಮತ್ತು ಗೋಪಾಲ ಭಂಡಾರಿ, ಎಐಸಿಸಿ ಸದಸ್ಯರಾದ ಅಮೃತ್ ಶೆಣೈ, ರಾಕೇಶ್ ಮಲ್ಲಿ, ಕೆಪಿಸಿಸಿ ಸದಸ್ಯರಾದ ಜಿ ಎ ಬಾವಾ, ಎಮ್ ಎ ಗಫೂರ್, ವೆರೋನಿಕಾ ಕರ್ನೆಲಿಯೋ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆ, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಕಾಂಗ್ರೆಸ್ ನಾಯಕರಾದ ಕಿರಣ್ ಕುಮಾರ್, ರಮೇಶ್ ಕಾಂಚನ್, ಹರೀಶ್ ಕಿಣಿ, ಯತೀಶ್ ಕರ್ಕೇರಾ, ಗೀತಾ ವಾಗ್ಲೆ, ಕ್ರಿಸ್ಟನ್ ಡಿ’ ಆಲ್ಮೇಡಾ, ಪ್ರಶಾಂತ್ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು
.


Spread the love