ರಾಜ್ಯದಲ್ಲಿ ಪಿಎಫ್‍ಐ , ಕೆಎಫ್‍ಡಿ ನಿಷೇಧಿಸದೆ ಶಾಂತಿ ಅಸಾಧ್ಯ: ಯಡಿಯೂರಪ್ಪ

Spread the love

ರಾಜ್ಯದಲ್ಲಿ ಪಿಎಫ್‍ಐ , ಕೆಎಫ್‍ಡಿ ನಿಷೇಧಿಸದೆ ಶಾಂತಿ ಅಸಾಧ್ಯ: ಯಡಿಯೂರಪ್ಪ

ಉಡುಪಿ: ರಾಜ್ಯದಲ್ಲಿ ಪಿಎಫ್‍ಐ , ಕೆಎಫ್‍ಡಿ ನಿಷೇಧ ಮಾಡದಿದ್ದರೆ ಶಾಂತಿ ನೆಲೆಸುವುದಿಲ್ಲ. ಹೀಗಾಗಿ ಹಿಂದೂ ನಾಯಕರ ಮೇಲೆ ಕ್ರಮಕೈಗೊಳ್ಳುವ ಮೊದಲು ಈ ಸಂಘಟನೆಗಳನ್ನು ನಿಷೇಧಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು.

ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಮತ್ತು ಸಂಘಪರಿವಾರದ ಮುಖಂಡರ ಮೇಲೆ 307 ಕೇಸು ದಾಖಲಿಸಿರುವುದನ್ನು ಖಂಡಿಸಿ ಉಡುಪಿಯಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಹಿಂದುಗಳ ದಮನಕ್ಕೆ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದೆ. ಕೊಲೆಗಡುಕರಿಗೆ ರಕ್ಷಣೆ ನೀಡುತ್ತಾ ಗೊಂದಲಮಯ ವಾತಾವರಣ ಸೃಷ್ಟಿಸುತ್ತಿದೆ ಎಂದ ಯಡ್ಯೂರಪ್ಪ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಕೇರಳದ ಗೂಂಡಾ ರಾಜಕೀಯವನ್ನು ಕರ್ನಾಟಕಕ್ಕೂ ತಂದಿದ್ದು, ರಾಜ್ಯದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕಾರ್ಯಕರ್ತರ ಹತ್ಯೆಯಂಥ ಘಟನೆ ಮರಳುಕಳಿಸಲು ಅವಕಾಶ ನೀಡುವುದಿಲ್ಲ.

ಬೆಂಗಳೂರಿನಲ್ಲಿ ಕೂತು ಸಿಎಂ ಜಿಲ್ಲಾ ಪೋಲೀಸರನ್ನು ಅವಮಾನಿಸುವ ರೀತಿಯಲ್ಲಿ ಗೃಹ ಮಂತ್ರಿ ಸಲಹೆಗಾರ ಕೆಂಪಯ್ಯ ಅವರಿಗೆ ದ.ಕ.ಜಿಲ್ಲೆಗೆ ಹೋಗಿ ಪರಿಸ್ಥಿತಿ ನಿಯಂತ್ರಿಸುವಂತೆ ಹೇಳುತ್ತಾರೆ. ಇಂಥ ಬೇಜವಾಬ್ದಾರಿ ವರ್ತನೆ ಖಂಡಿಸಿ ಪೊಲೀಸರು ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಲ್ಲಡ್ಕ ಭಟ್, ಹಾಗೂ ಬಿಜೆಪಿ ಮುಖಂಡರನ್ನು ಬಂಧಿಸಿದರೆ ಕಾಂಗ್ರೆಸ್ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುತ್ತೇವೆ ಎಂದು ಎಚ್ಚರಿಸಿದರು.

ಸಿಎಂಗೆ ಹೃದಯಕ್ಕೆ ಮತ್ತು ತಲೆಗೆ ಸಂಪರ್ಕವೇ ಇಲ್ಲ. ಶರತ್ ಸಾವು ಸಂಭವಿಸಿರುವುದು ತಿಳಿದಿದ್ದರೂ ಮಂಗಳೂರಿನಲ್ಲಿದ್ದ ಸಿಎಂ ಆಸ್ಪತ್ರೆಗೆ ಭೇಟಿ ನೀಡಲಿಲ್ಲ. ಕರಾವಳಿ ಭಾಗದಲ್ಲಿ ಶಾಂತಿ ನೆಲೆಸಬೇಕಾದರೆ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಎನ್‍ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು. ಭಯೋತ್ಪಾದನಾ ಚಟುವಟಿಕೆ ನಿಗ್ರಹಕ್ಕೆ ಮಂಗಳೂರಿನಲ್ಲಿ ಎನ್‍ಐಎ ಕಚೇರಿ ಪ್ರಾರಂಭಿಸಲು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕ ಸುನೀಲ್ ಕುಮಾರ್ ಮಾತನಾಡಿ, ರಾಜ್ಯ ಸರಕಾರ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದೆ. ಮತೀಯವಾದಿ ಸಂಘಟನೆಗಳ ಮೇಲಿನ ಕೇಸ್ ಹಿಂತೆದುಕೊಂಡು ಪ್ರಚೋದನೆ ನೀಡಲಾಗುತ್ತಿದೆ. 23 ಮಂದಿ ಕಾರ್ಯಕರ್ತರ ಹತ್ಯೆ ಒಂದೇ ತೆರನಾಗಿದೆ. ಬಿಜೆಪಿ, ಹಿಂದೂ ಸಂಘಟನೆಗಳ ಹತ್ಯೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ರಾಜ್ಯ ಸರಕಾರದಿಂದ ಹಿಂದೂ ಯುವಕರ ರಕ್ಷಣೆ ಅಸಾಧ್ಯವಾಗಿದ್ದು ಮುಂದಿನ ಆಯುಧ ಪೂಜೆಯ ದಿನದಂದು ಪ್ರತಿಯೊಬ್ಬ ಹಿಂದೂ ಯುವಕರು ತಮ್ಮ ಮನೆಗಳಲ್ಲಿ ಆಯುಧಗಳನ್ನು ಪೂಜೆ ಮಾಡಿ ತಮ್ಮೊಂದಿಗೆ ಆಯುಧಗಳನ್ನು ಇಟ್ಟುಕೊಂಡು ತಮ್ಮ ರಕ್ಷಣೆಯನ್ನು ತಾವೇ ಮಾಡಬೇಕು ಎಂದರು.

ಮಾಜಿ ಶಾಸಕ ರಘುಪತಿ ಭಟ್, ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.. ಶೆಟ್ಟಿ, ಉದಯಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.


Spread the love