ರಾಮಕೃಷ್ಣ ಮಿಷನ್ 5ನೇ ಹಂತದ ಸ್ವಚ್ಛತಾ ಅಭಿಯಾನದ ತೃತೀಯ ವಾರದ ಶ್ರಮದಾನ

Spread the love

ರಾಮಕೃಷ್ಣ ಮಿಷನ್ 5ನೇ ಹಂತದ ಸ್ವಚ್ಛತಾ ಅಭಿಯಾನದ ತೃತೀಯ ವಾರದ ಶ್ರಮದಾನ

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ತೃತೀಯ ಶ್ರಮದಾನವನ್ನು ರವಿವಾರ 23-12-2018 ರಂದು ಕಲೆಕ್ಟರ್ಸ್ ಗೇಟ್ ಬಲ್ಮಠದಲ್ಲಿ ಹಮ್ಮಿಕೊಳ್ಳಲಾಯಿತು. ಮುಂಜಾನೆ 7-30 ಕ್ಕೆ ಜಪಾನಿ ಪ್ರಜೆ ಕೇನ್ ಸುಝುಕಿ ಹಾಗೂ ಡಾ. ಶಶಿಕುಮಾರ್ ಶೆಟ್ಟಿ, ಎನ್ನೆಸ್ಸೆಸ್ ಸಂಯೋಜಕ, ನಿಟ್ಟೆ ವಿಶ್ವವಿದ್ಯಾನಿಲಯ ಇವರುಗಳು ತೃತೀಯ ವಾರದ ಶ್ರಮದಾನವನ್ನು ಶುಭಾರಂಭ ಮಾಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಹಿಮ್ಮತ್ ಸಿಂಗ್, ಸುಭದ್ರಾ ಭಟ್, ಮಸಾ ಹಿರೋ ಹಾಗೂ ಇನ್ನಿತರ ಸ್ವಯಂ ಸೇವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರಮದಾನ: ಕಲೆಕ್ಟರ್ಸ್ ಗೇಟ್ ವೃತ್ತದಿಂದ ಆರಂಭಿಸಿ ನಾಲ್ಕೂ ದಿಕ್ಕಿನಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಶ್ರೀಮತಿ ರಾಜೇಶ್ವರಿ ವಿಜಯರಾಜ್ ಹಾಗೂ ನಿವೇದಿತಾ ಬಳಗದ ಸದಸ್ಯರು ಜ್ಯೋತಿ ವೃತ್ತದತ್ತ ಸಾಗುವ ರಸ್ತೆಯನ್ನು ಶುಚಿಮಾಡಿದರೆ, ಶ್ರೀಮತಿ ವಸಂತಿ ನಾಯಕ್ ಹಾಗೂ ವಿದ್ಯಾರ್ಥಿನಿಯರು ಬೆಂದೂರವೆಲ್‍ನತ್ತ ಸಾಗುವ ಮಾರ್ಗಗಳನ್ನು ಸ್ವಚ್ಛಗೊಳಿಸಿದರು. ಕಿರಣ ಫರ್ನಾಂಡಿಸ್ ಮತ್ತು ಹಿರಿಯ ಕಾರ್ಯಕರ್ತರು ಬಲ್ಮಠ ರಸ್ತೆ, ಮಾರ್ಗವಿಭಾಜಕಗಳನ್ನು ಹಾಗೂ ರಿಫ್ಲೇಕ್ಟರ್‍ಗಳನ್ನು ಸ್ವಚ್ಛಗೊಳಿಸಿದರು. ಇನ್ನುಳಿದಂತೆ ಕಲ್ಲುಬಂಡೆಗಳ ತೆರವು, ತ್ಯಾಜ್ಯರಾಶಿಯನ್ನು ತೆಗೆದು ಹೂಕುಂಡಗಳನ್ನಿಟ್ಟು ಅಂದಗೊಳಿಸಿದ್ದು, ಹಳೆಯ ಬ್ಯಾರಿಕೇಡ್ ಬದಲಿಸಿ ನೂತನ ಬ್ಯಾರಿಕೇಡ್ ಅಳವಡಿಕೆ, ಮಾರ್ಗಫಲಕ ನವೀಕರಣ ಸೇರಿದಂತೆ ಸ್ವಚ್ಛತೆಗೆ ಸಂಬಂಧಿಸಿದಂತೆ ಅನೇಕ ಚಟುವಟಿಕೆಗಳನ್ನು ನಡೆಸಲಾಯಿತು.

ರಸ್ತೆ ತ್ಯಾಜ್ಯ ಹಾಗೂ ಕಟ್ಟಡ ತ್ಯಾಜ್ಯ ತೆರವು: ಕಲೆಕ್ಟರ್ಸ್ ಗೇಟ್ ಬಳಿಯಿರುವ ಹಳೆಯ ಕಟ್ಟಡದ ಬಳಿ ಹಲವಾರು ವರ್ಷಗಳಿಂದ ಲೋಡ್‍ಗಟ್ಟಲೆ ಕಾಂಕ್ರೀಟ್ ರಸ್ತೆ ತ್ಯಾಜ್ಯ ಹಾಗೂ ಕಟ್ಟಡ ತ್ಯಾಜ್ಯ ಬಿದ್ದುಕೊಂಡು ನಗರದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಂತಿತ್ತು. ಇಂದು ಬೆಳಿಗ್ಗೆ ಅದನ್ನು ಅಶೋಕ್ ಸುಬ್ಬಯ್ಯ, ದಿಲ್‍ರಾಜ್ ಆಳ್ವ ಹಾಗೂ ಕಾರ್ಯಕರ್ತರು ಜೆಸಿಬಿ ಟಿಪ್ಪರ್ ಬಳಸಿಕೊಂಡು ತೆರವುಗೊಳಿಸಿದರು. ತದನಂತರ ಅಲ್ಲಿದ್ದ ಮಣ್ಣು, ಕಲ್ಲು, ಕಸವನ್ನು ಗುಡಿಸಿ ತೆಗೆದು ಸ್ವಚ್ಛಗೊಳಿಸಲಾಯಿತು. ಬೃಹತ್ ಗಾತ್ರದ ಕಾಂಕ್ರಿಟ್ ಸ್ಲಾಬ್‍ಗಳನ್ನು ಶ್ರಮವಹಿಸಿ ತೆಗೆದು ಸಾಗಿಸಿ ನಿರುಪಯುಕ್ತವಾಗಿದ್ದ ಜಾಗೆಯನ್ನು ಉಪಯೋಗಯೋಗ್ಯವನ್ನಾಗಿಸಲಾಗಿದೆ. ಅಲ್ಲದೇ ಡಿ.ಸಿ ಬಂಗ್ಲೆಗೆ ಹೋಗುವ ಮಾರ್ಗದಲ್ಲಿದ್ದ ದೊಡ್ದ ದೊಡ್ದ ಕಲ್ಲುಗಳನ್ನು ತೆಗೆದು ಕಸಗುಡಿಸಿ ಸ್ವಚ್ಛ ಮಾಡಲಾಯಿತು. ಜೊತೆಗೆ ಅಲ್ಲಿದ್ದ ಮಾರ್ಗಸೂಚಕ ಫಲಕವನ್ನೂ ನವೀಕರಣಗೊಳಿಸಲಾಯಿತು.

ಆರು ಬ್ಯಾರಿಕೆಡ್ ಅಳವಡಿಕೆ: ಬಲ್ಮಠ ಕಲೆಕ್ಟರ್ಸ್ ಗೇಟ್ ವೃತ್ತದಲ್ಲಿದ್ದ ಬ್ಯಾರಿಕೆಡ್‍ಗಳು ಹಳೆಯದಾಗಿದ್ದವು, ಅಲ್ಲದೇ ಅವು ಸಾಕಷ್ಟು ಸ್ಥಳವನ್ನೂ ಆಕ್ರಮಿಸಿಕೊಂಡಿದ್ದವು. ಇಂದು ಆ ಹಳೆಯ ಬ್ಯಾರಿಕೇಡ್ ತೆಗೆದು ಅವುಗಳ ಜಾಗೆಯಲ್ಲಿ ನೂತನ ಬ್ಯಾರಿಕೇಡ್ ಅಳವಡಿಸಲಾಯಿತು. ಸಂದೀಪ್ ಕೋಡಿಕಲ್, ಯೋಗಿಶ್ ಕಾಯರ್ತಡ್ಕ, ಮುಖೇಶ್ ಆಳ್ವ ಹಾಗೂ ಇತರ ಕಾರ್ಯಕರ್ತರು ನೂತನ ಬ್ಯಾರಿಕೇಡ್ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿರುವ ನೂತನ ಬ್ಯಾರಿಕೇಡ್‍ಗಳು ಕಡಿಮೆ ಜಾಗ ತೆಗೆದುಕೊಳ್ಳುವ ಮಾದರಿಯಲ್ಲಿದ್ದು ಸ್ವಚ್ಛತೆಯ ಸಂದೇಶವನ್ನು ಅದರ ಮೇಲೆ ಬರೆಸಲಾಗಿದೆ. ಸುಮಾರು ಅರವತ್ತು ಅಡಿ ಸ್ಥಳದಲ್ಲಿ ಆರು ಬ್ಯಾರಿಕೇಡ್ ಅಳವಡಿಸಲಾಗಿದೆ.

ಕಸದರಾಶಿ ತೆರವು; ಬಲ್ಮಠ ರಸ್ತೆಯ ಬದಿಯೊಂದರಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ರಾಶಿಯನ್ನು ಚೇತನಾ ಗಡಿಯಾರ್, ಪುನೀತ್ ಪೂಜಾರಿ ಹಾಗೂ ಕಾರ್ಯಕರ್ತರು ತೆಗೆದು ಸ್ವಚ್ಛಗೊಳಿಸಿದ್ದಾರೆ. ಅಲ್ಲದೇ ಆ ಸ್ಥಳದಲ್ಲಿ ಹೂಗಿಡಗಳನ್ನಿಟ್ಟು ಸುಂದರಗೊಳಿಸಲಾಗಿದೆ. ಈ ಹಿಂದೆ ನಗರದ ಅಲ್ಲಲ್ಲಿ ಕಾಣಸಿಗುವ ಕಸದ ರಾಶಿಗಳನ್ನು ಸ್ವಚ್ಛಗೊಳಿಸಿ ಶಾಶ್ವತವಾಗಿ ಕಸ ಹಾಕದಂತೆ ಜಾಗೃತಿ ಮೂಡಿಸಿ, ಎಚ್ಚರ ವಹಿಸಿದ ಪ್ರಯೋಗ ಯಶಸ್ವಿಯಾಗಿತ್ತು. ಅದೇ ಮಾದರಿಯನ್ನು ಇಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಸ್ಥಳೀಯ ಮನಪಾ ಸದಸ್ಯ ನವೀನ್ ಡಿಸೋಜಾ, ಮೋಹನ್ ಕೊಟ್ಟಾರಿ, ರಾಜಗೋಪಾಲ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ಕಿಶೋರ್ ಕುಮಾರ್, ಪೆÇ್ರ. ರಾಧಾಕೃಷ್ಣ, ಪ್ರಕಾಶ ಎಸ್ ಟಿ ಸೇರಿದಂತೆ ಅನೇಕರು ಅಭಿಯಾನದಲ್ಲಿ ಪಾಲ್ಗೊಂಡರು.

ಸ್ವಚ್ಛ ಸುರತ್ಕಲ್ 10ನೇ ಭಾನುವಾರದ ವಿಶೇಷ ಶ್ರಮದಾನ: ಕಳೆದ ಹತ್ತು ವಾರಗಳಿಂದ ನಿರಂತರವಾಗಿ ಸಾಗಿ ಬರುತ್ತಿರುವ ಸ್ವಚ್ಛ ಸುರತ್ಕಲ್ ಅಭಿಯಾನದ ವಿಶೇಷ ಶ್ರಮದಾನ 22-12-2108 ಶನಿವಾರದಂದು ಸುರತ್ಕಲ್ ಮೇಲ್ಸೇತುವೆ ತಳಭಾಗದಲ್ಲಿ ಜರುಗಿತು. ಫ್ಲೈ ಒವರ್ ಕೆಳಭಾಗದಲ್ಲಿ ಸುಂದರೀಕರಣಗೊಳಿಸಿರುವ ಭಾಗ ಹಾಗೂ ಅದರ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ನಂತರ ಕಸದ ರಾಶಿ ಬೀಳುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ಅಲ್ಲಿ ಗಿಡಗಳನ್ನು ನೆಟ್ಟು ಅಂದಗೊಳಿಸಲಾಯಿತು. ಸಾಯಂಕಾಲ 4-30ಕ್ಕೆ 10ನೇ ವಾರದ ಪ್ರಯುಕ್ತ ವಿಶೇಷ ಸಭೆಯೊಂದನ್ನು ಆಯೋಜನೆ ಮಾಡಲಾಗಿತ್ತು. ಮುಖ್ಯ ಅಭ್ಯಾಗತರಾಗಿ ರಾಮಕೃಷ್ಣ ಮಿಷನ್ನಿನ ಸ್ವಾಮಿ ಏಕಗಮ್ಯಾನಂದಜಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಶ್ರೀ ಜೆ ಡಿ ವೀರಪ್ಪ, ಅಭಿಯಾನದ ಸಂಚಾಲಕ ರಾಜಮೋಹನ್ ರಾವ್, ಮುಖ್ಯ ಸಂಯೊಜಕ ಸತೀಶ ಸದಾನಂದ, ಶ್ರೀ ಸಚ್ಚಿದಾನಂದ, ಶ್ರೀ ಭರತ್ ಶೆಟ್ಟಿ. ಶ್ರೀ ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು. ಸುಮಾರು 70ಕ್ಕೂ ಮಿಕ್ಕಿ ಸಂಘಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸ್ವಚ್ಛತಾ ಅಭಿಯಾನಕ್ಕೆ ಎಂಆರ್‍ಪಿಎಲ್ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.


Spread the love