ರೇಶನ್ ಕಾರ್ಡ್ ಇಲ್ಲದ ವಲಸೆ ಕಾರ್ಮಿಕರಿಗೆ ಪಡಿತರ ಅಕ್ಕಿ, ಕಡಲೆಕಾಳು ವಿತರಣೆ

Spread the love

ರೇಶನ್ ಕಾರ್ಡ್ ಇಲ್ಲದ ವಲಸೆ ಕಾರ್ಮಿಕರಿಗೆ ಪಡಿತರ ಅಕ್ಕಿ, ಕಡಲೆಕಾಳು ವಿತರಣೆ

ಮಂಗಳೂರು: ಕೇಂದ್ರ ಸರಕಾರದ ‘ಆತ್ಮನಿರ್ಭರ್ ಭಾರತ್’ ಯೋಜನೆಯಡಿಯಲ್ಲಿ ಕಾರ್ಮಿಕ ಇಲಾಖೆಯ ಅಂಕಿ ಅಂಶಗಳಿಗನುಗುಣವಾಗಿ ಹಾಗೂ ತಾಲ್ಲೂಕಿನಲ್ಲಿರುವ ವಲಸೆ ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ. ಮೇ ಮತ್ತು ಜೂನ್ ತಿಂಗಳಿಗೆ ವಲಸೆ ಕಾರ್ಮಿಕರ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು ತಲಾ 5 ಕೆ.ಜಿ ಯಂತೆ ಅಕ್ಕಿ ಹಂಚಿಕೆಯಾಗಿರುತ್ತದೆ.

ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿಯನ್ನು ಹೊಂದದೇ ಇರುವ ವಲಸೆ ಕಾರ್ಮಿಕರು ಮಾತ್ರ ಈ ಯೋಜನೆಯಡಿ ಪಡಿತರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಹೊರ ತಾಲ್ಲೂಕಿನ / ಜಿಲ್ಲೆಯ/ರಾಜ್ಯದ ವಲಸೆ ಕಾರ್ಮಿಕರು ತಮ್ಮ ಆಧಾರ್ ಕಾರ್ಡನ್ನು ಹಾಜರುಪಡಿಸಿ ನ್ಯಾಯಬೆಲೆ ಅಂಗಡಿಯ ಮೂಲಕ ಪ್ರತಿಯೊಬ್ಬರೂ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ ಸಂಖ್ಯೆಯನ್ನು ಆನ್ ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ಅವರ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ ಬಂದ ನಂತರ,ಸದರಿ ಓ.ಟಿ.ಪಿ ಯನ್ನು ದಾಖಲಿಸಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ವಿತರಿಸಲಾಗುವುದು. 2020ರ ಮೇ ಮಾಹೆಯಲ್ಲಿ ಪ್ರತಿ ಫಲಾನುಭವಿಗೆ 5ಕೆ.ಜಿ ಅಕ್ಕಿಯನ್ನು ಮೇ 26 ರಿಂದ 31 ರ ವರೆಗೆ ಮತ್ತು ಜೂನ್ ತಿಂಗಳಿನಲ್ಲಿ ಜೂನ್ 01 ರಿಂದ 10 ರವರೆಗೆ 5ಕೆ.ಜಿ ಅಕ್ಕಿಯನ್ನು ಹಾಗೂ ಕೇಂದ್ರ ಸರಕಾರವು ಹಂಚಿಕೆ ಮಾಡುವ ಕಡಲೆ ಕಾಳನ್ನು ವಿತರಿಸಲಾಗುವುದು. ಮೇ ತಿಂಗಳಿನಲ್ಲಿ ಆಹಾರಧಾನ್ಯವನ್ನು ಪಡೆಯದ ವಲಸೆ ಫಲಾನುಭವಿಗಳು ಜೂನ್ ತಿಂಗಳಿನಲ್ಲಿ ಒಟ್ಟಿಗೆ 10ಕೆ.ಜಿ ಅಕ್ಕಿ ಮತ್ತು ಕೇಂದ್ರ ಸರಕಾರದ ಹಂಚಿಕೆಯಂತೆ ಕಡಲೆ ಕಾಳನ್ನು ಪಡೆಯಲು ಅರ್ಹರಿರುತ್ತಾರೆ.

ಜಿಲ್ಲೆಯಲ್ಲಿ ಸ್ವಂತ ಮನೆಯನ್ನು ಹೊಂದದೆ ಇರುವ ಆದಾಯ ತೆರಿಗೆ ಪಾವತಿಸದ ವಲಸೆ ಕಾರ್ಮಿಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ವಲಸಿಗರಿಗೆ ಒದಗಿಸುವ ಈ ಸೌಲಭ್ಯವನ್ನು ತಪ್ಪು ಮಾಹಿತಿ ನೀಡಿ ಪಡೆದುಕೊಂಡಲ್ಲಿ “ವಿಪತ್ತು ನಿರ್ವಹಣಾ ಕಾಯ್ದೆ 2005 “ ರಡಿ ದಂಡ ಅಥವಾ ದಂಡದ ಜೊತೆಗೆ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ದ.ಕ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


Spread the love