ರೈತರನ್ನು, ಮಹಿಳೆಯರನ್ನು ಅವಮಾನಿಸಿದ ಮುಖ್ಯಮಂತ್ರಿ ಹೆಚ್ ಡಿ ಕೆ ಕ್ಷಮೆ ಕೋರಲು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

Spread the love

ರೈತರನ್ನು, ಮಹಿಳೆಯರನ್ನು ಅವಮಾನಿಸಿದ ಮುಖ್ಯಮಂತ್ರಿ ಹೆಚ್ ಡಿ ಕೆ ಕ್ಷಮೆ ಕೋರಲು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ಕಬ್ಬು ಬೆಳೆಗಾರರ ವಿರುದ್ದ ಅವಹೇಳನಕಾರಿಯಾಗಿ ಮಾತಾನಾಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಕೂಡಲೇ ರೈತರ ಕ್ಷಮೆಯನ್ನು ಕೇಳಬೇಕು ಎಂದು ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಒತ್ತಾಯ ಮಾಡಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್ ಡಿ ದೇವೆಗೌಡ ಅವರು ಬಹಳ ಹಿರಿಯ ವ್ಯಕ್ತಿ ಅವರಲ್ಲಿ ನಾನು ವಿನಂತಿ ಮಾಡುವುದು ಇಷ್ಟೇ ತಾವು ತಮ್ಮ ಮಗ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಕರೆದು ಸ್ವಲ್ಪ ಬುದ್ದಿ ಹೇಳಬೇಕಾಗಿದೆ. ಕರ್ನಾಟಕದ ಮುಖ್ಯಮಂತ್ರಿಯಾದ ಮೇಲೆ ಅವರು ರಾಜ್ಯದ ಯಾವುದೇ ಜನರ ಭಾವನೆಗಳನ್ನು, ಅದು ನೋವು, ಸಿಟ್ಟು, ಆಕ್ರೋಶ ಯಾವುದೇ ಆದರೂ ಕೂಡ ಅವರುಗಳ ಭಾವನೆಗೆ ಬೆಲೆ ಕೊಟ್ಟು ಅಧಿಕಾರ ನಡೆಸಬೇಕಾದ ಅವಶ್ಯಕತೆ ಇದೆ.

ಒರ್ವ ಮಹಿಳೆಗೆ ಅವಮಾನಕಾರಿಯಾಗಿ ಮಾತನಾಡುವುದು, ರೈತರನ್ನು ಗೂಂಡಾಗಳು ಎಂದು ಕರೆಯುವುದು ಅವರ ಘನತೆ ತಕ್ಕುದಾದಲ್ಲ ಎಂದರು. ರೈತರ ಆಗ್ರಹದ ಪ್ರಕಾರ ಕೇಂದ್ರ ಸರಕಾರದ ಕಬ್ಬು ನಿಯಂತ್ರಣ ಮಂಡಳಿ ಯ ಆದೇಶದಂತೆ ಕಬ್ಬು ಹಾಕಿದ 14 ದಿನಗಳ ಒಳಗೆ ರೈತರಿಗೆ ಕಬ್ಬಿನ ಮೊತ್ತವನ್ನು ಕಾರ್ಖಾನೆಗಳು ನೀಡಬೇಕು ಮತ್ತು ಅದರ ಮೇಲುಸ್ತುವಾರಿಯನ್ನು ರಾಜ್ಯಸರಕಾರ ನೋಡಿಕೊಳ್ಳಬೇಕು. ಸಕಾಲದಲ್ಲಿ ನೀಡಲು ಸಾಧ್ಯವಾಗದೆ ಇದ್ದಲ್ಲಿ ಶೇ 15 ಬಡ್ಡಿಯನ್ನು ನೀಡಬೇಕು ಎಂಬ ಆದೇಶವಿದೆ. ಬೆಂಬಲ ಬೆಲೆಯನ್ನು ನೀಡದೆ ಈ ಕಡೆ ಬಾಕಿಯನ್ನು ನೀಡದೆ ರೈತರನ್ನು ಗೂಂಡಾಗಳೆಂದು ಕರೆದಿರುವುದು ಖಂಡನೀಯ ಇದಕ್ಕಾಗಿ ಮುಖ್ಯಮಂತ್ರಿಗಳು ಕೂಡಲೇ ರೈತರ ಬಳಿ ಬೇಷರತ್ ಕ್ಷಮೆಯನ್ನು ಕೋರಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಹಿಂದಿನಿಂದಲೂ ವಿಶೇಷವಾದ ಗೌರವ ಇತ್ತು ಮತ್ತು ಈಗಲೂ ಕೂಡ ಇದೆ. ಕರ್ನಾಟಕ ರಾಜ್ಯೋತ್ಸವದ ದಿನ ಪ್ರಶಸ್ತಿಯನ್ನು ನೀಡಬೇಕಾಗಿದ್ದು ನೀತಿಸಂಹಿತೆಯ ನೆಪವೊಡ್ಡಿ ಈ ಬಾರಿ ಪ್ರಶಸ್ತಿಗಳನ್ನು ನೀಡಿಲ್ಲ. ಆದರೆ ಚುನಾವಣಾ ನೀತಿ ಸಂಹಿತೆ ಮುಗಿದು ಎರಡು ಮೂರು ವಾರಗಳು ಸಂದರೂ ಸಹ ಅದರ ಆಯ್ಕೆ ಪಟ್ಟಿಯ ಪ್ರಕ್ರಿಯೆ ಕೂಡ ನಡೆಸದಿರುವು ವಿಷಾದನೀಯ ಸಂಗತಿ. ರಾಜ್ಯೋತ್ಸವ ಪ್ರಶಸ್ತಿಗಳನ್ನು ಸಕಾಲದಲ್ಲಿ ನೀಡಲು ಸಾಧ್ಯವಾಗದ ರಾಜ್ಯಸರಕಾರ ಯಾವ ರೀತಿಯಲ್ಲಿ ಸಕ್ರಿಯವಾಗಿದೆ ಎಂದು ಜನರು ನಿರ್ಧರಿಸಬೇಕು. ಆದ್ದರಿಂದ ಸರಕಾರ ಈ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


Spread the love