ಲಾಕ್ಡೌನ್ ಪರಿಹಾರ ಕಟ್ಟಡ ಕಾರ್ಮಿಕರಿಗೆ ರೂ.2000/- ದಂತೆ ಮುಂದಿನ ಮೂರು ತಿಂಗಳಿಗೆ ನೀಡಲು ಒತ್ತಾಯ

Spread the love

ಲಾಕ್ಡೌನ್ ಪರಿಹಾರ ಕಟ್ಟಡ ಕಾರ್ಮಿಕರಿಗೆ ರೂ.2000/- ದಂತೆ ಮುಂದಿನ ಮೂರು ತಿಂಗಳಿಗೆ ನೀಡಲು ಒತ್ತಾಯ

ಕೋವಿಡ್-19 ಕೊರೋನಾ ವೈರಸ್ ನಿಗ್ರಹಿಸಲು ಕರ್ನಾಟಕ ರಾಜ್ಯ ಸರಕಾರ 2ನೇ ಬಾರಿ ಲಾಕ್ಡೌನ್ ಘೋಷಣೆ ಮಾಡಿದ್ದು, ಇದರಿಂದಾಗಿ ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಸಿಗದಂತಹ ವಾತಾವರಣ ಸೃಷ್ಟಿಯಾಗಿದೆ. ಹೆಚ್ಚಿನ ಕಟ್ಟಡ ಕಾರ್ಮಿಕರಿಗೆ ವಾಹನ ಸಂಪರ್ಕ ಇಲ್ಲದೆ ಕೆಲಸವಿಲ್ಲದಂತಾಗಿದೆ. ಆದುರಿಂದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಲಾಕ್ಡೌನ್ ಪರಿಹಾರ ರೂ.5000ಕ್ಕೆ ಸೇರಿಸಿ ಪ್ರತೀ ತಿಂಗಳಿಗೆ ರೂ.2000/- ದಂತೆ ಮುಂದಿನ ಮೂರು ತಿಂಗಳ ತನಕ ಪರಿಹಾರ ನೀಡಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಒತ್ತಾಯಿಸಿದೆ.

ದಿನಾಂಕ 30-7-2020 ರಂದು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮುಂದುಗಡೆ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಈ ಬಗ್ಗೆ ಒತ್ತಾಯಿಸಲಾಗಿದೆ. ಈ ಬೇಡಿಕೆಯಲ್ಲದೆ ಪರಿಹಾರ ರೂ.5000/- ಇನ್ನೂ ಪಡೆದಿರದಂತಹ ಕಾರ್ಮಿಕರಿಗೆ ಕೂಡಲೇ ನೀಡಬೇಕು, ಈ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗದಿರುವ ಕಾರ್ಮಿಕರಿಗೆ ಮಾಹಿತಿ ನೀಡಲು ಇನ್ನಷ್ಟು ಕಾಲಾವಕಾಶ ನೀಡಬೇಕು. ಸೇವಾಸಿಂಧುವಿನಲ್ಲಿ ನಡೆಯುವಂತಹ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಕಾರ್ಮಿಕ ಇಲಾಖೆಯಲ್ಲಿ ಕೊರತೆಯಿರುವಂತಹ ಸಿಬ್ಬಂದಿ ನೇಮಕಾತಿ ಆಗಬೇಕು ಎಂಬ ಬೇಡಿಕೆಯನ್ನು ಒತ್ತಾಯಿಸಲಾಗಿದೆ.

ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡುತ್ತಾ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುತ್ತಿರುವ ಲಾಕ್ಡೌನ್ ಪರಿಹಾರ ರೂ.5000/-ವನ್ನು ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡದಿರುವುದು ಆಕ್ಷೇಪಾರ್ಹ ವಿಚಾರ. ಹಾಗೆನೇ ಕಲ್ಯಾಣ ಮಂಡಳಿಯ ನಿಧಿಯನ್ನು ಲಾಕ್ಡೌನ್ ಅವಧಿಯಲ್ಲಿ ದುರುಪಯೋಗ ಮಾಡಿರುವಂvಹÀ ರಾಜ್ಯ ಸರಕಾರದ ನೀತಿ ಕಾರ್ಮಿಕ ವಿರೋಧಿಯಾಗಿದೆ. ಕೋವಿಡ್-19ರ ನೆಪ ನೀಡಿ ಕಾರ್ಮಿಕ ಕಾನೂನುಗಳನ್ನು ಸುಗ್ರೀವಾಜ್ಞೆಯ ಮುಖಾಂತರ ಕೈಗಾರಿಕಾ ಉದ್ದಿಮೆಗಳ ಪರವಾಗಿ ಮಾರ್ಪಾಡಿಸುವಂತಹ ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರದ ನೀತಿಗಳು ಕಾರ್ಮಿಕರನ್ನು ಬೀದಿಪಾಲು ಮಾಡಲಿದೆ. ಕೈಗಾರಿಕಾ ವಿವಾದ ಕಾಯಿದೆಗಳಿಗೆ ತಿದ್ದುಪಡಿ, ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ಏರಿಕೆ ಮಾಡಿರುವುದು, ಪ್ರಸ್ತುತ ಸಾಲಿನ ವ್ಯತ್ಯಸ್ಥ ತುಟ್ಟಿಭತ್ತೆ (ವಿಡಿಎ)ಯನ್ನು 1 ವರ್ಷಗಳ ಕಾಲ ಮುಂದೂಡಿರುವುದು ರಾಜ್ಯದ ಕಾರ್ಮಿಕ ವರ್ಗಕ್ಕೆ ದೊಡ್ಡ ಸವಾಲಾಗಿದೆ. ಕಾರ್ಮಿಕ ವಿರೋಧಿ ನೀತಿಯನ್ನು ಜ್ಯಾರಿ ಮಾಡುತ್ತಿರುವ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಸರಕಾರವನ್ನು ಹಿಮ್ಮೆಟ್ಟಿಸದೆ ಕಾರ್ಮಿಕ ವರ್ಗಕ್ಕೆ ಬೇರೆ ದಾರಿ ಇಲ್ಲ ಎಂದು ಅವರು ಎಚ್ಚರಿಕೆ ನೀಡಿzರು.

ಕಟ್ಟಡ ಕಾರ್ಮಿಕರು ತಮ್ಮ ಬದುಕಿನ ಹೋರಾಟದ ಭಾಗವಾಗಿ ಕಲ್ಯಾಣ ಮಂಡಳಿಯ ಸವಲತ್ತುಗಳನ್ನು ಪಡೆಯುವರೇ ಮತ್ತು ಕಲ್ಯಾಣ ಮಂಡಳಿಯನ್ನು ರಕ್ಷಿಸುವ ಹೋರಾಟವನ್ನು ಮುಂದಿನ ದಿನಗಳಲ್ಲಿ ಮಾಡಬೇಕಾಗುತ್ತದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯು.ಜಯಂತ ನಾಯ್ಕ್ ಕಾರ್ಮಿಕರಿಗೆ ತಿಳಿ ಹೇಳಿದರು.

ಪ್ರತಿಭಟನಾ ಪ್ರದರ್ಶನದ ತರುವಾಯ ಕರ್ನಾಟಕ ರಾಜ್ಯ ಸರಕಾರಕ್ಕೆ ಸಹಾಯಕ ಕಾರ್ಮಿಕ ಆಯುಕ್ತರ ಮುಖಾಂತರ ಮನವಿಯನ್ನು ಆರ್ಪಿಸಲಾಯಿತು.

ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಸಂಘದ ಮುಂದಾಳುಗಳಾದ ರವಿಚಂದ್ರ ಕೊಂಚಾಡಿ, ಕೆ.ಪಿ.ಜೋನಿ, ಜನಾರ್ಧನ ಕುತ್ತಾರ್, ಸದಾಶಿವ ದಾಸ್, ಅಶೋಕ್ ಶ್ರೀಯಾನ್, ಪಾಂಡುರಂಗ, ದಯಾನಂದ ಶೆಟ್ಟಿ, ಕೃಷ್ಣಪ್ಪ ಮೂಡಬಿದ್ರಿ, ದಿನೇಶ್ ಶೆಟ್ಟಿ, ವಸಂತಿ, ಯಶೋಧರವರುಗಳು ವಹಿಸಿದ್ದರು.


Spread the love