ಲೈಟ್ ಹೌಸ್‍ಹಿಲ್ ರಸ್ತೆಗೆ ಎಲೋಶಿಯಸ್ ಕಾಲೇಜು ಹೆಸರು ಸೂಕ್ತ – ಉಡುಪಿ ಕ್ರೈಸ್ತ ಒಕ್ಕೂಟ

Spread the love

ಲೈಟ್ ಹೌಸ್‍ಹಿಲ್ ರಸ್ತೆಗೆ ಎಲೋಶಿಯಸ್ ಕಾಲೇಜು ಹೆಸರು ಸೂಕ್ತ – ಉಡುಪಿ ಕ್ರೈಸ್ತ ಒಕ್ಕೂಟ

ಉಡುಪಿ: ಮಂಗಳೂರಿನ ಲೈಟ್‍ಹೌಸ್‍ಹಿಲ್ ರಸ್ತೆಗೆ ದಿವಂಗತ ಶ್ರೀ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆಯಾಗಿ ಮರುನಾಮಕರಣ ವಿಚಾರವನ್ನು ಸೌಹಾರ್ದಯುತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟ ಉಡುಪಿ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಸಂಘಟನೆ ಕೆಲವು ದಿನಗಳ ಹಿಂದೆ ನಡೆದ ನಿಗೂಡ ಬೆಳವಣಿಗೆಯಲ್ಲಿ, ಲೈಟ್‍ಹೌಸ್‍ಹಿಲ್ ರೋಡನ್ನು ದಿವಂಗತ ಶ್ರೀ.ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ ಎಂದು ಮರುನಾಮಕರಣ ಮಾಡುವ ಸರಕಾರಿ ಆದೇಶವನ್ನು ವಿಜಯಬ್ಯಾಂಕಿನ ನೌಕರರ ಸಂಘದ ಒತ್ತಾಯದ ಮೇರೆಗೆ ನಡೆದಿದೆ. ಆ ಭಾಗದ ಜನರು ಹಾಗೂ ಜನಪ್ರತಿನಿಧಿಗಳನ್ನು ಬದಿಗಿಟ್ಟು ನಡೆದ ಬೆಳವಣಿಗೆ ಇದು.

ದಿವಂಗತ ಮುಲ್ಕಿ ಸುಂದರ್ ರಾಮ್ ಶೆಟ್ಟರು ಕೇವಲ ಅವಿಭಾಜಿತ ಕರಾವಳಿ ಜಿಲ್ಲೆಗಳಿಗೆಗಷ್ಟೇ ಸೀಮಿತವಾಗಿರದೆ, ಅಖಿಲ ಕರ್ನಾಟಕಕ್ಕೆ ಬ್ಯಾಂಕಿಗ್ ಕ್ಷೇತ್ರದಲ್ಲಿ ಹೆಸರು ತಂದ ಮೇರು ವ್ಯಕ್ತಿತ್ವ. ಉದ್ಯೋಗ ಹಾಗೂ ಸಮಾಜ ಸೇವೆಯಲ್ಲಿ ಕ್ರೈಸ್ತರನ್ನು ಹಾಗೂ ಮುಸ್ಲಿಮರನ್ನು ಒಳಗೊಂಡಂತೆ ಸಮಾಜದ ಎಲ್ಲಾ ವರ್ಗದವರಿಗೂ ಸ್ಪಂದಿಸಿದ್ದರು. ತನ್ನ ಈ ಜನಪರ ಕಾರ್ಯಗಳಿಂದ ಎಲ್ಲರ ಮನೆಮಾತಾಗಿದ್ದರು. ಇದರಲ್ಲಿ ಎರಡು ಮಾತಿಲ್ಲ.

ಸ್ವಂತ ಅಲೋಶಿಯಸ್ ಕಾಲೇಜು ಹಾಗೂ ಅದರ ಅದೀನಕ್ಕೆ ಒಳಪಟ್ಟ ವಿದ್ಯಾಸಂಸ್ಥೆಗಳಿಗೆ ತನ್ನದೇ ಆದ ಇತಿಹಾಸವಿದೆ. ಶತಕದ ಸಂಭ್ರಮ ಮುಗಿಸಿದ ಈ ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇವತ್ತು ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ಹಾಗೂ ಪ್ರಪಂಚದಾದ್ಯಂತ ತಮ್ಮ ತಮ್ಮ ಕ್ಷೇತ್ರದಲ್ಲಿ ನಮ್ಮ ಕರಾವಳಿಗೆ ಹಾಗೂ ಈ ನಾಡಿಗೆ ಹೆಸರು ತಂದು ಕೊಟ್ಟಿದ್ದಾರೆ. ಈ ಕಾಲೇಜಿಗೆ ಕೇವಲ ಅವಿಭಾಜಿತ ಜಿಲ್ಲೆಯವರು ಮಾತ್ರವಲ್ಲ ನಾಡಿನಾದ್ಯಂತ ಹಾಗೂ ವಿದೇಶಗಳಿಂದಲೂ ವ್ಯಾಸಂಗಕ್ಕೆ ಬರುತ್ತಿದ್ದಾರೆ. ಸ್ವಾಯತ್ತ ಸ್ಥಾನಮಾನ ಪಡೆದ ಕರ್ನಾಟಕದ ಕೆಲವೇ ಕೆಲವು ಕಾಲೇಜುಗಳಲ್ಲಿ ಇದು ಒಂದು ಹಾಗೂ ಈ ರಾಜ್ಯದ ವಿದ್ಯಾಕ್ಷೇತ್ರದಲ್ಲಿ ಅಗ್ರ ಪಂಕ್ತಿಯಲ್ಲಿದೆ.

ಆದದರಿಂದ ಇದೇ ರಸ್ತೆ ಬದಿಯಲ್ಲಿರುವ ಈ ವಿದ್ಯಾಸಂಸ್ಥೆಯ ಹೆಸರಿಡುವುದು ಅತೀ ಸೂಕ್ತ. ಹೀಗೆ ಮಾಡಿದ್ದಲ್ಲಿ ಕೇವಲ ಮಂಗಳೂರಿನ ಜನತೆಗೆ ಮಾತ್ರವಲ್ಲ ಈ ವಿದ್ಯಾಸಂಸ್ಥೆಯಲ್ಲಿ ಕಲಿತ ಲಕ್ಷಾಂತರ ಮಕ್ಕಳಿಗೆ ಹಾಗೂ ದುಡಿಯುವ ಅಧ್ಯಾಪಕ ವೃಂದಕ್ಕೆ ಗುರುವಂದನೆ ರೂಪದಲ್ಲಿ ಸಲ್ಲಿಸಿದ ಗೌರವ ಎಂದೂ ಇಫ್ಕಾದ ಅಭಿಮತ.

ದಿವಂಗತ ಶ್ರೀ. ಮುಲ್ಕಿ ಸುಂದರ್ ರಾಮ್ ಶೆಟ್ಟರ ಹೆಸರು ಅವರ ಹೆಸರೇ ಸೂಚಿಸುವಂತೆ ಮುಲ್ಕಿಯಲ್ಲೋ ಅಥವಾ ಬೇರೆ ಯಾವುದೇ ಸೂಕ್ತ ರಸ್ತೆಗೆ ಇಟ್ಟರೆ ಅವರ ಹೆಸರಿಗೆ ಇನ್ನೂ ಹೆಚ್ಚಿನ ಗೌರವ ದಕ್ಕಿದಂತಾಗುತ್ತದೆ. ಸಧ್ಯಕ್ಕೆ ಮರುನಾಮಕರಣಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಮಂತ್ರಿಗಳು, ಸಂಸದರು, ಜನಪ್ರತಿನಿಗಳು, ಮ.ನ.ಪ. ಮೇಯರ್ ಮತ್ತು ಸದಸ್ಯರು ಹಾಗೂ ಈ ರಸ್ತೆ ಭಾಗದ ಜನರು ಒಂದೆಡೆ ಸೇರಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸೌಹಾರ್ದಯುತ ಪರಿಹಾರ ಕಂಡುಕೊಂಡು, ಲೈಟ್‍ಹೌಸ್‍ಹಿಲ್ ರಸ್ತೆಯನ್ನು ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು ಮರುನಾಮಕರಣ ಮಾಡಲು ಮತ್ತೊಮ್ಮೆ ಸಂಬಂಧ ಪಟ್ಟವರನ್ನು ವಿನಯಪೂರ್ವಕವಾಗಿ ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟ ಉಡುಪಿ ಇದರ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ನಿಕಟಪೂರ್ವ ಅಧ್ಯಕ್ಷರಾದ ಲೂವಿಸ್ ಲೋಬೋ ಹಾಗೂ ಕಾರ್ಯದರ್ಶಿ ಡಾ. ನೇರಿ ಕರ್ನೆಲೀಯೋ ಈ ಮೂಲಕ ಕೋರಿದ್ದಾರೆ.


Spread the love