ಲೋಕಾಯುಕ್ತರ ಪದಚ್ಯುತಿ, ಸ್ಪೀಕರ್‌ಗೆ ಪ್ರಸ್ತಾವನೆ ಸಲ್ಲಿಸಿದ ಪ್ರತಿಪಕ್ಷ

Spread the love

ಬೆಳಗಾವಿ: ತಮ್ಮ ಪುತ್ರ ಅಶ್ವಿನ್ ರಾವ್ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ರಾಜಿನಾಮೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನೊಂದೆಡೆ ನ್ಯಾ.ಭಾಸ್ಕರ್ ರಾವ್ ಅವರ ಪದಚ್ಯುತಿಗಾಗಿ ಮಹಾಭಿಯೋಗಕ್ಕೆ ರಾಜ್ಯ ವಿಧಾನಮಂಡಲದಲ್ಲಿ ಶುಕ್ರವಾರ ಚಾಲನೆ ದೊರೆತಿದೆ.

ಇಂದು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಕೊಠಡಿಗೆ ತೆರಳಿ ಲೋಕಾಯುಕ್ತರ ಪದಚ್ಯುತಿ ಮಂಡನೆಗಾಗಿ 57 ಶಾಸಕರ ಸಹಿಯುಳ್ಳ ಪ್ರಸ್ತಾವನೆ ಸಲ್ಲಿಸಿವೆ.

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಜೆಡಿಎಸ್ನ ವೈಎಸ್ವಿ ದತ್ತ ನೇತೃತ್ವ ನಿಯೋಗ ಕಾನೂನು ತಿದ್ದುಪಡಿ ಹಾಗೂ ಲೋಕಾಯುಕ್ತರ ಪದಚ್ಯುತಿ ಕೋರಿ ಸ್ಪೀಕರ್ಗೆ ಮನವಿ ಪತ್ರ ಸಲ್ಲಿಸಿದೆ.

ಪ್ರಸ್ತಾವನೆ ಸಲ್ಲಿಸಿದ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ಲೋಕಾಯುಕ್ತ ಸಂಸ್ಥೆಯಲ್ಲೇ ನಡೆದ ಭ್ರಷ್ಟಾಚಾರದಲ್ಲಿ ಹಲವರು ಭಾಗಿಯಾಗಿದ್ದು, ಈ ಕೂಡಲೇ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಬೇಕು ಮತ್ತು ಭ್ರಷ್ಟಾಚಾರ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಲೋಕಾಯಕ್ತರ ಪದಚ್ಯುತಿ, ವಿಶೇಷ ಚರ್ಚೆ ಹಾಗೂ ನಿರ್ಣಯಕ್ಕಾಗಿ ಶಾಸಕರ ಸಹಿ ಸಂಗ್ರಹಿಸಿ ನಾವು ಸ್ಪೀಕರ್ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸ್ಪೀಕರ್ ಸಹ ಈ ಕುರಿತು ಸೋಮವಾರ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಲೋಕಾಯುಕ್ತ ಕಾಯ್ದೆ ಸೆಕ್ಷನ್ 6ರ 2ನೇ ಉಪವಿಧಿ ಪ್ರಕಾರ ಲೋಕಾಯುಕ್ತರ ಪದಚ್ಯುತಿ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಬಗ್ಗೆ ನಿಲುವಳಿ ಸೂಚನೆ ಮಂಡಿಸುವುದಕ್ಕೆ ವಿಧಾನಸಭೆಯ ಒಟ್ಟು ಸದಸ್ಯ ಬಲದ ಶೇ.20ರಷ್ಟು ಸದಸ್ಯರು(50 ಶಾಸಕರ) ಸಹಿ ಹಾಕಬೇಕು.

ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಲೋಕಾಯುಕ್ತರ ಪದಚ್ಯುತಿಗಾಗಿ ಮಹಾಭೀಯೋಗ ಪ್ರಕ್ರಿಯೆ ಆರಂಭವಾಗಿದ್ದು, ಸೋಮವಾರ ನಿಲುವಳಿ ಸೂಚನೆ ಮೇರೆಗೆ ಪ್ರತಿಪಕ್ಷ ನಾಯಕರು ಪದಚ್ಯುತಿಗೆ ಆಗ್ರಹಿಸಲಿದ್ದಾರೆ.


Spread the love