ವರದಿಗಾರರ ಮೇಲೆ ಹಲ್ಲೆ ; ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ

Spread the love

ಭಟ್ಕಳ: ಬೆಂಗಳೂರಿನಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ವೇಳೆಯಲ್ಲಿ ನೈಜ ಸ್ಥಿತಿಯನ್ನು ವರದಿ ಮಾಡಲು ಹೋದ ವರದಿಗಾರರ ಮೇಲೆ ದುರುದ್ದೇಶ ಪೂರಿತವಾಗಿ, ಪೂರ್ವಾಗ್ರಹ ಪೀಡಿತರಂತೆ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆ ಮಾಡಿದ ಪೋಲಿಸ್ ಇನ್ಸಪೆಕ್ಟರ್, ಸಬ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯ ಮಂತ್ರಿಗಳಿಗೆ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ ಸಲ್ಲಿಸಲಾಯಿತು.

memo-bhatkal-reporter-20160425

ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾಣಿ ಸಮಿತಿ ಸದಸ್ಯ ರಾಧಾಕೃಷ್ಣ ಭಟ್ಟ ಪೊಲೀಸರು ಪತ್ರಕರ್ತರನ್ನು ಗುರುತಿಸಿ, ಉದ್ದೇಶ ಪೂರ್ವಕವಾಗಿ ಹಲ್ಲೆ ಮಾಡಿರುವುದು ಪ್ರಜಾ ಪ್ರಭುತ್ವದ ಅಣುಕು ಪ್ರದರ್ಶನವಾಗಿದೆ. ಯಾವುದೇ ಘಟನೆಯನ್ನು ನೈಜ ರೀತಿಯಲ್ಲಿ ವರದಿ ಮಾಡುವುದು ಪ್ರತಿಯೋರ್ವ ಪತ್ರಕರ್ತರ ಕರ್ತವ್ಯವಾಗಿದ್ದು ಅದನ್ನೇ ಅಡ್ಡಿಪಡಿಸಿದ ಪೊಲೀಸರ ಕ್ರಮ ಖಂಡನೀಯ ಎಂದರು. ಅಂತಹ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತಕ್ಷಣ ಅಮಾನತ್ತಿನಲ್ಲಿಟ್ಟು ವಿಚಾರಣೆಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಪೋಲಿಸರು ತಾವು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯವನ್ನು ಮರೆ ಮಾಚಲು ಮಾಧ್ಯಮದವರನ್ನೇ ಅಸ್ತ್ರವನ್ನಾಗಿ ಬಳಸಿರುವುದು ಪ್ರಾಥಮಿಕ ಹಂತದಲ್ಲಿಯೇ ತಿಳಿದು ಬರುತ್ತದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿಯೇ ಅತ್ಯಂತ ಹೀನ ಕೃತ್ಯವಾಗಿದ್ದು ಈ ಕುರಿತು ಸೂಕ್ತ ಕ್ರಮಕ್ಕೆ ಆಗ್ರಹಿಸುವುದಾಗಿಯೂ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಎನ್. ನಾಯ್ಕ, ಸಹಕಾರ್ಯದರ್ಶಿ ಮೋಹನ ಆರ್. ನಾಯ್ಕ, ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಸಮಿತಿ ಸದಸ್ಯ ರಾಘವೇಂದ್ರ ಹೆಬ್ಬಾರ್, ಜಿಲ್ಲಾ ಸಮಿತಿ ಸದಸ್ಯ ಫಯ್ಯಾಜ್ ಮುಲ್ಲಾ, ಸದಸ್ಯರುಗಳಾದ ರಿಜ್ವಾನ್ ಗಂಗಾವಳಿ, ಅನ್ಸಾರ್ ಅಜೀಜ್, ಸಾಲಿಕ್ ಮುಮತಾದವರು ಉಪಸ್ಥಿತರಿದ್ದರು.


Spread the love