ವಾಜಪೇಯಿ ನಿಧನಕ್ಕೆ ಉಡುಪಿ ಬಿಷಪ್ ಜೆರಾಲ್ಡ್ ಲೋಬೊ ಸಂತಾಪ

Spread the love

ವಾಜಪೇಯಿ ನಿಧನಕ್ಕೆ ಉಡುಪಿ ಬಿಷಪ್ ಜೆರಾಲ್ಡ್ ಲೋಬೊ ಸಂತಾಪ

ಉಡುಪಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬಿಷಪ್ ಹೌಸ್ ಹೊರಡಿಸಿರುವ ಮಾಧ್ಯಮ ಹೇಳಿಕೆಯಲ್ಲಿ, ಭಾರತ ದೇಶ ಕಂಡ ಅಪರೂಪದ ರಾಜಕಾರಣಿ, ಅಜಾತಶತ್ರು, ಲೋಕನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲುವಿಕೆ ನಮಗೆಲ್ಲರಿಗೂ ಅತೀವ ದುಃಖವನ್ನು ತಂದಿದೆ. ಎಲ್ಲಾ ರಾಜಕಾರಣಿಗಳಿಗೂ ಆದರ್ಶಪ್ರಾಯರಾಗಿದ್ದ ಕವಿಹೃದಯಿ ವಾಜಪೇಯಿ, ಬದುಕಿದ್ದಷ್ಟೂ ದಿನ ತಮ್ಮ ಸಿದ್ಧಾಂತಗಳಿಗೆ ಬದ್ಧರಾಗಿದ್ದು ಅಧಿಕಾರ, ಹಣದಾಸೆಗೆ ಬಿದ್ದು ಯಾವುದೇ ಒಪ್ಪಂದವನ್ನು ಮಾಡಿಕೊಳ್ಳಲಿಲ್ಲ. ಭ್ರಷ್ಟಾಚಾರವನ್ನು ತಮ್ಮ ಸನಿಹಕ್ಕೆ ಸುಳಿಯಲು ಅವರು ಬಿಡಲೇ ಇಲ್ಲ. ಈ ಕಾರಣಗಳಿಂದ ಅವರು ಅಸು ನೀಗಿದ್ದರೂ ಜನರ ಹೃನ್ಮನಗಳಲ್ಲಿ ಭದ್ರ ಸ್ಥಾನ ಪಡೆದಿದ್ದಾರೆ.

ಮಾದರಿ ಸಂಸತ್ ಪಟುವಾಗಿದ್ದ ಅವರು ಉತ್ತಮ ವಾಗ್ಮಿಯೂ ಆಗಿದ್ದರು. ಇಡೀ ದೇಶದುದ್ದಗಲಕ್ಕೂ ಸಂಚರಿಸಿ ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸಿದ ಅಪರೂಪದ ಪ್ರಧಾನಿ ವಾಜಪೇಯಿಯವರು. ಎಲ್ಲಾ ಧರ್ಮದ ಜನರನ್ನು ಸಮಾನ ರೀತಿಯಲ್ಲಿ ಗೌರವಿಸಿ ಭಾರತೀಯರೆಲ್ಲರಿಗೂ ಪ್ರೀತಿಪಾತ್ರರಾದರು. ವೈರಿಗಳನ್ನೂ ತಮ್ಮ ಮಿತ್ರರನ್ನಾಗಿಸುವ ಸಹೃದಯಿ ಅವರಾಗಿದ್ದರು. ಬ್ರಿಟಿಷರ ವಿರುದ್ಧ ಭಾರತೀಯರು ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡರು. ಇಂಥಹ ಮುತ್ಸದ್ಧಿ ದೇಶದ ಎಪ್ಪತ್ತೆರಡನೇ ಸ್ವಾತಂತ್ರೋತ್ಸವದ ಸಂಭ್ರಮದ ನೆನಪು ಮಾಸುವ ಮುನ್ನವೇ ನಮ್ಮನ್ನು ಅಗಲಿರುವುದು ದುಃಖಕರ. ದಯಾಮಯ ಭಗವಂತ ಅವರಿಗೆ ಚಿರಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love