ವಾರಾಹಿ ಯೋಜನಾ ಪ್ರದೇಶಕ್ಕೆ ಪ್ರಮೋದ್ ಭೇಟಿ; ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಗರಂ

Spread the love

ವಾರಾಹಿ ಯೋಜನಾ ಪ್ರದೇಶಕ್ಕೆ ಪ್ರಮೋದ್ ಭೇಟಿ; ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಗರಂ

ಕುಂದಾಪುರ: ವಾರಾಹಿ ನೀರಾವರಿ ಯೋಜನಾ ಪ್ರದೇಶದಲ್ಲಿ ಕಾಮಗಾರಿಯ ವೇಳೆ ಸ್ಥಳೀಯರಿಗೆ ಆದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾದ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ಜರುಗಿತು.

ಅವರು ಸೋಮವಾರ ವಾರಾಹಿ ನೀರಾವರಿ ಯೋಜನಾ ಪ್ರದೇಶಗಳಾದ ಶಿರಿಯಾರ, ಗುಡ್ಡಟ್ಟು, ಗಾವಳಿ, ಕಕ್ಕುಂಜೆ, ಮೊಳಹಳ್ಳಿ, ಹುಣ್ಸೆಮಕ್ಕಿ, ಭರತ್ಕಲ್, ಹೊರಿಯಬ್ಬೆ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಸ್ವತಃ ಆಲಿಸಿ ಬಳಿಕ ಹೊಸಂಗಡಿ ಕೆಪಿಸಿ ಎನರ್ಜಿ ಕ್ಲಬ್ ಸಭಾಂಗಣದಲ್ಲಿ ಜರುಗಿದ ವಾರಾಹಿ ನೀರಾವರಿ ಯೋಜನಾ ವೃತ್ತ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಗತಿ ಪರಿಶೀಲನಾ ಸಭೆಯ ವೇಳೆ ಮೊಳಹಳ್ಳಿ ಪ್ರದೇಶದ ಗ್ರಾಮಸ್ಥರೋರ್ವರು ಕಾಮಾಗಾರಿ ವೇಳೆ ಬಂಡೆ ಸ್ಪೋಟದಿಂದಾಗ ಮನೆಗಳು ಬಿರುಕು ಬಿಟ್ಟ್ಟಿದ್ದು ಈ ಕುರಿತು ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದರೂ ಈ ವರೆಗೂ ಯಾವುದೇ ರೀತಿಯ ಪರಿಹಾರ ನೀಡಿಲ್ಲ ಎಂದು ಸಚಿವರಲ್ಲಿ ಸಮಸ್ಯೆಯನ್ನು ತೋಡಿಕೊಂಡರು.

ಈ ವೇಳೆ ಸಚಿವರು ಸಂಬಂಧಪಟ್ಟ ಎಂಜಿನಿಯರ್ ಅವರಲ್ಲಿ ಮಾಹಿತಿ ಕೇಳಿದಾಗ ಅವರಲ್ಲಿ ಯಾವುದೇ ಮಾಹಿತಿ ಇಲ್ಲದೆ ಇದ್ದು ಇದರಿಂದ ಕೋಪಗೊಂಡ ಸಚಿವರು ಎಂಜಿನಿಯರ್ ಅವರನ್ನು ತೀವ್ರವಾಗಿ ಸಾರ್ವಜನಿಕರೆದುರೇ ತರಾಟೆಗೆ ತೆಗದೆದುಕೊಂಡರು ಅಲ್ಲದೆ ಜಿಲ್ಲಾಧಿಕಾರಿಗಳು ಈ ಕುರಿತು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರೀಶೀಲಿಸಿ ಗ್ರಾಮಸ್ಥರ ಮನವಿಯನ್ನು ಪರಿಹರಿಸುವಂತೆ ಸೂಚಿಸಿದರು.

ಕಕ್ಕುಂಜೆ ಭಾಗದಲ್ಲಿ ಕಾಲುವೆ ಒಡೆದು 8 ಮನೆಗಳಿಗೆ ಹಾಗೂ ತೋಟಗಳಿಗೆ ಹಾನಿಯಾಗಿದ್ದು ಯಾವುದೇ ಪರಿಹಾರ ಇದುವರೆಗೆ ಲಭಿಸಿಲ್ಲ ಎಂದು ಆ ಭಾಗದ ಗ್ರಾಮಸ್ಥರು ದೂರಿದಾಗ ಈ ಕುರಿತು ಕೂಡಲೇ ಕುಂದಾಪುರ ಉಪವಿಭಾಗಾಧಿಕಾರಿಗಳು ಪರೀಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು. ಈ ಭಾಗದ ಜನರು ಯೋಜನೆಗೆ ತಮ್ಮ ಭೂಮಿಯನ್ನು ನೀಡಿದ್ದು ಅವರಿಗೆ ಒಂದು ಕಡೆಯಿಂದ ಭೂಮಿಯೂ ಇಲ್ಲ, ಪರಿಹಾರವೂ ಇನ್ನೋಂದು ಕಡೆಯಿಂದ ಯೋಜನೆಯ ನೀರು ಸರಿಯಾಗಿ ಸಿಗುತ್ತಿಲ್ಲ ಆದ್ದರಿಂದ ಇಂತಹ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಯೋಜನೆಗೆ ಈಗಾಗಲೇ ರೂ 589 ಕೋಟಿಗಳನ್ನು ವ್ಯಯಿಸಲಾಗಿದೆ ಆದರೆ ಅದಕ್ಕಾಗಿ ಭೂಮಿ ನೀಡಿದ ರೈತರನ್ನು ಸತಾಯಿಸುವುದು ಅಪರಾಧ ಅಧಿಕಾರಿಗಳ ಇಂತಹ ವರ್ತನೆ ಸಹಿಸಲಾಗದು ಎಂದು ಎಚ್ಚರಿಸಿದರು.

ಅಲ್ಲದೆ ಈ ಭಾಗದ ಎಲ್ಲ ಸಮಸ್ಯೆಗಳ ಬಗ್ಗೆ ಮುಖ್ಯ ಇಂಜಿಯರ್ ತಮ್ಮ ಅಧಿನದಲ್ಲಿ ಬರುವ ಎಲ್ಲಾ ಅಧಿಕಾರಗಳನ್ನು ಸೇರಿಸಿಕೊಂಡು, ಜೊತೆಯಲ್ಲಿ ಸಹಾಯಕ ಕಮಿಷನರ್, ಅರಣ್ಯ, ಕಂದಾಯ ಇಲಾಖೆಯವನ್ನು ಜೊತೆಯಾಗಿ ಸೇರಿಸಿ ಸಭೆ ನಡೆಸಿ 15 ದಿನಗಳ ಒಳಗೆ ಪರಿಹಾರವನ್ನು ಕಂಡುಕೊಳ್ಳುವಂತೆ ಸೂಚಿಸಿದರು ಅಲ್ಲದೆ ಸಭೆಯ ಸಂಪೂರ್ಣ ಮಾಹಿತಿಯನ್ನು ತನಗೆ ನೀಡಬೇಕು ಎಂದು ಸೂಚಿಸಿದರು.

ಈ ಮೊದಲು ವಾರಾಹಿ ನೀರಾವರಿ ಯೋಜನಾ ಪ್ರದೇಶಗಳಾದ ಶಿರಿಯಾರ, ಗುಡ್ಡಟ್ಟು, ಗಾವಳಿ, ಕಕ್ಕುಂಜೆ, ಮೊಳಹಳ್ಳಿ, ಹುಣ್ಸೆಮಕ್ಕಿ, ಭರತ್ಕಲ್, ಹೊರಿಯಬ್ಬೆ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಗ್ರಾಮಸ್ಥರು ಹಲವಾರು ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು. ಮುಖ್ಯವಾಗಿ ಕಾಲುವೆಯ ನೀರು ಸ್ಥಳೀಯ ರೈತರಿಗೆ ಸರಿಯಾಗಿ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ ಅಲ್ಲದೆ ಕೆಲವು ಭಾಗಗಳಲ್ಲಿ ಕಾಮಗಾರಿ ಅಪೂರ್ಣವಾಗಿದ್ದು ಸಂಪೂರ್ಣವಾದರೆ ಸುಮಾರು 100 ರಿಂದ 200 ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಲಿದ್ದು ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಹಾಲಾಡಿ ಪ್ರದೇಶದಲ್ಲಿ ಎರಡು ಭಾಗದಲ್ಲಿ ಕೂಡ ಕಾಲುವೆ ಕಾಮಾಗಾರಿ ಪೂರ್ಣಗೊಂಡು 4 ವರುಷವಾದರೂ ರಸ್ತೆಯ ಮಧ್ಯೆ ಹಾದು ಹೋಗುವ ಸೇತುವೆಗೆ ಸಂಪರ್ಕ ನೀಡದೇ ನೆನೆಗುದಿಗೆ ಬಿದ್ದಿರುವುದು ಸಚಿವರ ಗಮನಕ್ಕೆ ತಂದರು ಇದನ್ನು ಕಂಡು ಕೋಪಗೊಂಡ ಸಚಿವರು ಕೂಡಲೇ ಇದನ್ನು ಫೂರ್ಣಗೊಳಿಸುವಂತೆ ವಾರಾಹಿ ಎಂಜಿನಿಯರ್ ಅವರಿಗೆ ಸೂಚಿಸಿದರು.

ಈ ವೇಳೆ ಶಾಸಕರಾದ ಗೋಪಾಲ ಪೂಜಾರಿ, ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ತಾಲೂಕು ಪಂಚಾಯತ್ ಅಧ್ಯಕ್ಷೆ, ಜಿಲ್ಲಾ ಪಂಚಾಯತ್ ಸದಸ್ಯರು, ವಾರಾಹಿ ಯೋಜನೆಯ ಎಂಜಿನಿಯರ್, ರೈತ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love