ವಿಗ್ರಹ ಮಾರಾಟ ಜಾಲದಲ್ಲಿ ಬಂಧಿತನಾದ ದಕ ಜಿಲ್ಲಾ ಎನ್.ಎಸ್.ಯು.ಐ. ಕಾರ್ಯದರ್ಶಿ ಆಸ್ಟಿನ್ ಸಿಕ್ವೇರಾ ಉಚ್ಚಾಟನೆ

Spread the love

ವಿಗ್ರಹ ಮಾರಾಟ ಜಾಲದಲ್ಲಿ ಬಂಧಿತನಾದ ದಕ ಜಿಲ್ಲಾ ಎನ್ಎಸ್ಯುಐ ಕಾರ್ಯದರ್ಶಿ ಆಸ್ಟಿನ್ ಸಿಕ್ವೇರಾ ಉಚ್ಚಾಟನೆ

ಮಂಗಳೂರು: ಪ್ರಾಚೀನ ವಿಗ್ರಹ ಕಳವು ಮತ್ತು ಮಾರಾಟ ಜಾಲಕ್ಕೆ ಸಂಬಂಧಿಸಿ ಶನಿವಾರ ಕೋಟೇಶ್ವರದಲ್ಲಿ ಬಂಧಿಸಲಾದ ಆರೋಪಿಗಳಲ್ಲಿ ಒಬ್ಬ ದ.ಕ. ಜಿಲ್ಲಾ ಎನ್ಎಸ್ಯು ಐ ಕಾರ್ಯದರ್ಶಿಯಾಗಿದ್ದ ಕುಲಶೇಖರ ನಿವಾಸಿ ಆಸ್ಟಿನ್ ಸಿಕ್ವೇರಾನನ್ನು ದ.ಕ. ಜಿಲ್ಲಾ ಎನ್ಎಸ್ಯು ಐನಿಂದ ಉಚ್ಚಾಟಿಸಿ ಜಿಲ್ಲಾ ಘಟಕ ಅಧ್ಯಕ್ಷ ಅಬ್ದುಲ್ಲಾ ಬಿನ್ನು ಆದೇಶ ಹೊರಡಿಸಿದ್ದಾರೆ.

ನಿವಾಸಿ ಆಸ್ಟಿನ್ ಸಿಕ್ವೇರಾ (27) ಎಂಬಾತ ಈ ಆರೋಪಿ. ಶನಿವಾರ ಕೋಟೇಶ್ವರ ಕೋಟಿಲಿಂಗೇಶ್ವರ ದೇವಾಲಯದ ಹಿಂಬದಿ ಆರೋಪಿಗಳು ವಿಗ್ರಹ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ನವಿಲ್ ವಿಲ್ಫಿ ಮಸ್ಕರೇನ್ಹಸ್, ಶಿವಮೊಗ್ಗದ ಅನಿಲ್ ಫುರ್ಟಾಡೊ, ಕುಲಶೇಖರದ ಆಸ್ಟಿನ್ ಸಿಕ್ವೇರಾನನ್ನು ಬಂಧಿಸಲಾಗಿತ್ತು. ಆ ಪೈಕಿ ಆಸ್ಟಿನ್ ಮಂಗಳೂರಿನ ಯುವ ಕಾಂಗ್ರೆಸ್ ಘಟಕದಲ್ಲಿ ಪ್ರಭಾವಿಯಾಗಿದ್ದು ಶಾಸಕ ಜೆ.ಆರ್. ಲೋಬೋ, ಮೊಯ್ದೀನ್ ಬಾವ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ಆಪ್ತನಾಗಿದ್ದ. ಇದೇ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ, ಪರಮೇಶ್ವರ್ ಜಿಲ್ಲೆಗೆ ಬಂದಾಗ ಅವರ ಜತೆ ಫೋಟೋ ತೆಗೆಸಿಕೊಳ್ಳುತ್ತಿದ್ದ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟೀಕೆಗೆ ಗುರಿಯಾಗಿದ್ದವು. ಆರೋಪಿಯಿಂದ 40ಸಾವಿರ ರೂ., ಕಾರು ವಶಕ್ಕೆ ಪಡೆಸಲಾಗಿದೆ.

ಸಂಘಟನೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಕಳ್ಳಸಾಗಣೆಯಲ್ಲಿ ತೊಡಗಿರುವ ಆಸ್ಟೀನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದು ಮಾತ್ರವಲ್ಲದೆ ಕಾಂಗ್ರೆಸ್ನ ಹಿರಿಯ ನಾಯಕರ ಜತೆ ಈತ ತೆಗೆಸಿಕೊಂಡ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಈತನ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎನ್ಎಸ್ಯುಐ ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಅಬ್ದುಲ್ಲಾ ಬಿನ್ನು ಅವರು ಆಸ್ಟಿನ್ ಸಿಕ್ವೇರಾನನ್ನು ಸಂಘಟನೆಯಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


Spread the love