ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯನ್ನು ರದ್ದುಗೊಳಿಸಲು ಎನ್.ಎಸ್.ಯು.ಐ ಆಗ್ರಹ

Spread the love

ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯನ್ನು ರದ್ದುಗೊಳಿಸಲು ಎನ್.ಎಸ್.ಯು.ಐ ಆಗ್ರಹ

ಮಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಎನ್.ಎಸ್.ಯು.ಐ ಸರಕಾರವನ್ನು ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪದಾಧಿಕಾರಿಗಳು ಸರಕಾರ ಮಾತ್ರ ಹಠ ಮಾರಿತನ ಪ್ರದರ್ಶಿಸುತ್ತಿದೆ. ನಮ್ಮ ಊರಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಗಳಲ್ಲಿ ಹಾಸ್ಟೆಲ್ ಮತ್ತು ಪೇಯಿಂಗ್ ಗೆಸ್ಟ್ ಗಳಲ್ಲಿ ವಾಸಿಸುಕೊಂಡು ಅವರ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈಗ ಹಾಸ್ಟೆಲ್ ಹಾಗೂ ಪೇಯಿಂಗ್ ಗೆಸ್ಟ್ ಗಳು ಕಾರ್ಯಾಚರಣೆ ಮಾಡುತ್ತಿಲ್ಲ.

ಕೋವಿಡ್-19 ಕಾರಣದಿಂದ ಸರಕಾರ ವಿದ್ಯಾ ಸಂಸ್ಥೆಗಳಿಗೆ ರಜೆಯನ್ನು ಘೋಷಣೆ ಮಾಡಿದೆ ಹಾಗು ರಾಜ್ಯಾದ್ಯಂತ ಲಾಕ್ ಡೌನ್ ಕೂಡ ಮಾಡಿದೆ. ಪ್ರಾರಂಭದಲ್ಲಿಯೆ ಸರಕಾರ ಉನ್ನತ ಶಿಕ್ಷಣ ಇಲಾಖೆ ಮತ್ತು ವಿಶ್ವ ವಿದ್ಯಾಲನಿಲಯಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಚಿಂತಿಸಿ ಮಾರ್ಚ್ ತಿಂಗಳಲ್ಲಿ ಪರೀಕ್ಷೆ ನಡೆಸಬಹುದಾಗಿತ್ತು. ಆಗ ಅಷ್ಟೇನು ಸೋಂಕಿತರು ನಮ್ಮಲ್ಲಿ ಇರಲಿಲ್ಲ. ಅದರ ಬದಲಾಗಿ ಸರಕಾರ ತನ್ನ ಪ್ರತಿಷ್ಠೆ, ಅಹಂಕಾರದ ನಡೆಯನ್ನು ಅನುಸರಿಸಿತು. ಪ್ರತಿಪಕ್ಷದ ಸಲಹೆಗಳನ್ನು ಕೇಳಲು ಸಿದ್ಧರಿರಲಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆ ಮಂತ್ರಿಗಳಾದಿಯಾಗಿ ಎಲ್ಲ ಮಂತ್ರಿಗಳು ಮತ್ತು ಆಡಳಿತ ಪಕ್ಷದ ಶಾಸಕರುಗಳು ಕಿಟ್ ಹಂಚಿ ರಾಜಕೀಯದಲ್ಲಿ ಮುಳುಗಿತ್ತು. ಉನ್ನತ ಶಿಕ್ಷಣ ಇಲಾಖೆ ಮಂತ್ರಿ ಅಶ್ವಥ್ ನಾರಾಯಣ ಅವರು ಇಲಾಖೆ ಉನ್ನತ ಅಧಿಕಾರಿಗಳು, ವಿಶ್ವ ವಿದ್ಯಾಲಯಗಳ ಉನ್ನತ ಅಧಿಕಾರಿಗಳು, ಉಪನ್ಯಾಸಕರಾರುಗಳ ಸಂಘ, ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ತು ಸದಸ್ಯರು ಹಾಗು ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿ ಯಾವ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಬಹುದು ಎಂಬ ಬಗ್ಗೆ ಸಮಾಲೋಚನೆ ನಡೆಸುವ ಬದಲು ಕಾಲ ಹರಣ ಮಾಡಿ ಈಗ ಕೋರೋನಾ ಬಿರುಗಾಳಿಯಂತೆ ಹಬ್ಬುತ್ತಿರುವಾಗ ಪದವಿ ಕಾಲೇಜುಗಳ ಪರೀಕ್ಷೆ ನಡೆಸಲು ಮುಂದಾಗಿರುವುದು ಖಂಡನೀಯ.

ಉನ್ನತ ಶಿಕ್ಷಣ ಕೇಂದ್ರ ಮತ್ತು ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಯೂನಿವರ್ಸಿಟಿಗ್ರಾಂಟ್ ಕಮಿಷನ್ ಮತ್ತು ರಾಜ್ಯ ಉನ್ನತ ಶಿಕ್ಷಣ ಇಲಾಖೆ ವಿಶ್ವ ವಿದ್ಯಾನಿಲಯಗಳ ಉಪಕುಲಪತಿ ಮತ್ತು ರಿಜಿಸ್ಟ್ರಾರ್ ಗಳ ಸಲಹೆ ಸೂಚನೆ ಪಡೆದು ಪರೀಕ್ಷೆ ಬಗ್ಗೆ ನಿಯಮಾವಳಿಗಳನ್ನುರೂಪಿಸಬೇಕಾಗಿತ್ತು.

ಪರೀಕ್ಷೆಯನ್ನು ಸೆಪ್ಟೆಂಬರ್ ತಿಂಗಳ ಓಳಗೆ ಮಾಡಲು ಹೊರಟಿದ್ದಾರೆ. ಆಲ್ ಇಂಡಿಯಾ ಇನ್ಸಿಟ್ಯೂಟ್ ಆ ಮೆಡಿಕಲ್ ಸೈನ್ಸ್ ನಿರ್ದೇಶಕರು ಕೊರೋನಾ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ದೇಶದಾದ್ಯಂತ ಹರಡಿ ಗರಿಷ್ಠ ಮಟ್ಟಕ್ಕೆ ತಲುಪುತ್ತದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಸರಕಾರ ಮಾತ್ರ ಏಕಾಏಕಿ ಮಕ್ಕಳ ಆರೋಗ್ಯದ ಮೇಲೆ ಚೆಲ್ಲಾಟವಾಡಲು ಹೊರಟಿದೆ. ಎಲ್ಲ ಕೋರ್ಸುಗಳ ಅಂತಿಮ ವರುಷದ ಮಕ್ಕಳಿಗೆ ಪರೀಕ್ಷೆ ಮಾಡಬೇಕಾಗಿದೆ, ಅದನ್ನು ಹೇಗೆ ಮತ್ತು ಯಾವಾಗ, ಯಾವ ರೀತಿಯಲ್ಲಿ ಆರೋಗ್ಯಕ್ಕೆ ತೊಂದರೆ ಇಲ್ಲದಂತೆ ಮಾಡಬೇಕು ಎಂಬ ರೂಪುರೇಷೆ ಸರಕಾರದ ಬಳಿ ಇಲ್ಲ. ಉಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಅವಶ್ಯಕತೆ ಇಲ್ಲ. ಮುಂದಿನ ವರುಷದಲ್ಲಿ ಅವರ ಪರೀಕ್ಷೆ ನಡೆಸಲು ತೊಂದರೆಯಿಲ್ಲ. ಸರಕಾರ ಪದವಿ ಮಕ್ಕಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮಕ್ಕಳಿಗೆ ಇತ್ತ ಆನ್ ಲೈನ್ ತರಗತಿ ಕೂಡ ಇಲ್ಲ. ಅತ್ತ ಯಾವುದೆ ಗೊತ್ತು ಗುರಿ ಇಲ್ಲದೆ ಮನೆಯಲ್ಲಿ ಟಿ ವಿ, ಮೊಬೈಲುಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇದು ಅವರ ಮಸ್ತಿಷ್ಕಕ್ಕೆ ಕೇಡು ಮಾತ್ರವಲ್ಲದೆ ಅವರ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತದೆ.

ದೇಶದ ಭವಿಷ್ಯ ಇಂದಿನ ಮಕ್ಕಳು, ಸಮಾಜ ಅಭಿವೃದ್ಧಿ ಹೊಂದ ಬೇಕಾದರೆ ಮಕ್ಕಳಿಗೆ ಶಿಕ್ಷಣ ಮುಖ್ಯ ಎಂದು ಭಾಷಣ ಬಿಗಿಯುವ ಮಂತ್ರಿಗಳು ಲಾಕ್ ಡೌನ್ ಸಂದರ್ಭದಲ್ಲಿ ಏನು ಮಾಡುತ್ತಿದ್ದರು ಎಂದು ರಾಜ್ಯದ ಯುವ ಪೀಳಿಗೆಗೆ ಉತ್ತರ ಕೊಡಲಿ. ಒಂದು ಕಡೆ ರಾಜ್ಯದ ಜನರ ಆರೋಗ್ಯ ಕಾಪಾಡುವ ಬಗ್ಗೆ ರೂಪು ರೇಷೆಗಳನ್ನುರೂಪಿಸಿ ಧೈರ್ಯ ತುಂಬ ಬೇಕಾದ ಆರೋಗ್ಯ ಮಂತ್ರಿ ಶ್ರೀ ರಾಮುಲು’ಈ ಮಹಾಮಾರಿಯಿಂದ ನಮ್ಮನ್ನು ದೇವರೇ ಕಾಪಾಡಬೇಕು’ ಎಂಬ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಇನ್ನೊಂದು ಕಡೆ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳಿಗಳಿಗೆ ಕೋವಿಡ್-19 ಸೋಂಕು ಹರಡದೆ ಇರಲು ಯಾವುದೇ ಪೂರ್ವ ತಯಾರಿ ಮಾಡದೇ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಮೊಂಡುತನ ತೋರಿಸುವ ಶಿಕ್ಷಣ ಸಚಿವರು. ಇವರೊಳಗೆಯಾವುದೇ ಹೊಂದಾಣಿಕೆ ಇದ್ದಂತೆ ಕಂಡು ಬರುತ್ತಿಲ್ಲ. ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡಿದರೆ ಎನ್.ಎಸ್.ಯು.ಐ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ರಸ್ತೆಗೆ ಇಳಿದು ಹೋರಾಟ ಮಾಡಲು ಹೇಸುವುದಿಲ್ಲ ಎಂಬ ಎಚ್ಚರಿಕೆ ಸರಕಾರಕ್ಕೆ ನೀಡಿದರು

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ಜಿಲ್ಲಾ ಉಪಾಧ್ಯಕ್ಷರಾದ ಸವಾದ್ ಗೂನಡ್ಕ, ಅನ್ವಿತ್ ಕಟೀಲ್, ಮುಲ್ಕಿ-ಮೂಡಬಿದ್ರೆ ಬ್ಲಾಕ್ ಅಧ್ಯಕ್ಷರಾದ ಭರತ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.


Spread the love