ವಿದ್ಯಾರ್ಥಿನಿ ಶಿಕ್ಷಣಕ್ಕೆ ನೆರವು ನೀಡಿ ಮಾನವೀಯತೆ ಮೆರೆದ ಕಾಪು ಎಸ್ಐ

Spread the love

ವಿದ್ಯಾರ್ಥಿನಿ ಶಿಕ್ಷಣಕ್ಕೆ ನೆರವು ನೀಡಿ ಮಾನವೀಯತೆ ಮೆರೆದ ಕಾಪು ಎಸ್ಐ

ಕಾಪು : ಪತಿಯನ್ನು ಕಳೆದುಕೊಂಡು ಕಷ್ಟದ ಜೀವನ ನಡೆಸುತ್ತಿದ್ದ, ಕುಟುಂಬವೊಂದರ ವಿದ್ಯಾರ್ಥಿನಿಗೆ ಶೈಕ್ಷಣಿಕ ಪರಿಕರ ಹಾಗೂ ಶಾಲಾ ಶುಲ್ಕವನ್ನು ನೀಡುವ ಮೂಲಕ ಕಾಪು ಠಾಣೆಯ ಉಪನಿರೀಕ್ಷಕ ನಿತ್ಯಾನಂದ ಗೌಡ ಡಿ.ಪಿ ಮಾನವೀಯತೆ ಮೆರೆದಿದ್ದಾರೆ.

ಮಟ್ಟು ಪಡುಕರೆ ಮಟ್ಟುವಿನ ನಳಿನಿ ಎಂಬವರ ಪತಿ ಶಿವರಾಮ ಕರ್ಕೇರ ಎಂಬವರು ಮಾರ್ಚ್‌ 22ರಂದು ಮೃತಪಟ್ಟಿದ್ದರು. ನಳಿನಿ ತನ್ನ ಒಂದು ಹೆಣ್ಣು ಹಾಗೂ ಒಂದು ಗಂಡು ಮಕ್ಕಳನ್ನು ಹೊಂದಿದ್ದು, ಈಕೆ ಕೂಲಿ ಕೆಲಸ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಿಕೊಂಡಿದ್ದರು. ಪತಿಯ ಮರಣಾ ನಂತರ ಅಸಹಾಯಕಳಾಗಿ ತಮ್ಮ ಮಕ್ಕಳನ್ನು ಸ್ಥಳೀಯ ಶಾಲೆಯಿಂದ, ಮೂಡುಬೆಳ್ಳೆಯ ಶಾಲೆಗೆ ಸೇರಿಸಿದ್ದರು.

ಈ ಮೊದಲು ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕ ನಿತ್ಯಾನಂದ ಗೌಡ ಡಿ.ಪಿ ಅವರು ಕೋತಲ್ಕಟ್ಟೆಯ ಬಳಿಯ 38 ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿದ್ದರು. ಇದರ ಮಾಹಿತಿ ಪಡೆದ ನಳಿನಿ ಮಗಳು ತ್ರಿಶಾಳೊಂದಿಗೆ ಕಾಪು ಠಾಣೆಗೆ ತೆರಳಿ ಸಮಸ್ಯೆಯ ಬಗ್ಗೆ ಕೋರಿಕೊಂಡ ಮೇರೆಗೆ ಶೈಕ್ಷಣಿಕ ಪರಿಕರಗಳನ್ನು ಹಾಗೂ ಶಾಲಾ ಶುಲ್ಕವನ್ನು ಸಹಿತ ನೆರವನ್ನು ನೀಡಿದ್ದಾರೆ.

ನಳಿನಿಯ ಪತಿ ಮರಣದ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅನುಕಂಪದಿಂದ ₹10 ಸಾವಿರವನ್ನು ಕರ್ಕೇರ ಅವರ ಸಹೋದರರಲ್ಲಿ ನೀಡಿದ್ದು, ಈ ಹಣವನ್ನು ಕೇಳಿದಾಗ ಅದನ್ನು ಮೃತರ ಧಾರ್ಮಿಕ ವಿಧಿವಿಧಾನಕ್ಕೆ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು ಕಾಪು ಪಿಎಸ್ಐ ನಿತ್ಯಾನಂದ ಗೌಡ ಅವರಲ್ಲಿ ನಳಿನಿ ತಿಳಿಸಿದ್ದಾರೆ.


Spread the love