ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶಾಸಕ ಕಾಮತ್ ಪ್ರಮುಖ ಸಭೆ

Spread the love

ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶಾಸಕ ಕಾಮತ್ ಪ್ರಮುಖ ಸಭೆ

ಮಂಗಳೂರು: ಅಮೃತಯೋಜನೆ, ಸ್ಮಾರ್ಟ್ ಸಿಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಮಂಗಳೂರು ನಗರ ದಕ್ಷಿಣ ಡಿ ವೇದವ್ಯಾಸ ಕಾಮತ್ ಅವರು ವಿವಿಧ ಇಲಾಖೆಯ ಅಧಿಕಾರಿಗಳ, ಮನಪಾ ಸದಸ್ಯರ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಶಾಸಕ ಕಾಮತ್ ಅವರು ಮಂಗಳೂರು ನಗರದಲ್ಲಿ ಬಹಳಷ್ಟು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಡ್ರೈನೇಜ್ ಅವ್ಯವಸ್ಥೆಗಳಿವೆ. ಆ ಬಗ್ಗೆ ಜನರಿಂದ ದೂರುಗಳು ಬರುತ್ತಿವೆ. ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗಬೇಕು ಎನ್ನುವ ನಿರೀಕ್ಷೆ ನಾಗರಿಕರಲ್ಲಿದೆ. ಆದ್ದರಿಂದ ವಿವಿಧ ಇಲಾಖೆಗಳ ನಡುವೆ ಸಂವಹನ ಸಮರ್ಪಕವಾಗಿ ನಡೆದರೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯ ಎಂದು ಹೇಳಿದರು.

ಹಿಂದೆ ಎಡಿಬಿ-1 ಯೋಜನೆಯಡಿ ಕೆಲಸ ಮಾಡಿದ ಕುಂಡ್ಸೆಪ್ ಅಧಿಕಾರಿಗಳು, ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡ, ಮರಳಹಳ್ಳಿ, ಗಣೇಶ್ ಹಾಗೂ ಜ್ಯೂನಿಯರ್ ಇಂಜಿನಿಯರ್ ಗಳು, ಸ್ಮಾರ್ಟ್ ಸಿಟಿ ಯೋಜನೆಯ ಮ್ಯಾನೇಜಿಂಗ್ ನಿರ್ದೇಶಕರಾದ ನಾರಾಯಣ್, ಇಂಜಿನಿಯರ್ಸ್, ಅಧಿಕಾರಿಗಳು ಹಾಗೂ ಪಾಲಿಕೆಯ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ನವೀನ್ ಚಂದ್ರ, ಮೀರಾ ಕರ್ಕೇರ, ರೂಪ ಡಿ ಬಂಗೇರ, ವಿಜಯ ಕುಮಾರ್ ಶೆಟ್ಟಿ ,ರಾಜೇಂದ್ರ, ಸುರೇಂದ್ರ, ಜಯಂತಿ ಆಚಾರ್, ಪೂರ್ಣಿಮಾ   ಸಹಿತ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ ಕಾಮತ್ ಅವರು ಎಡಿಬಿ-2 ಯೋಜನೆಯಲ್ಲಿ ಡ್ರೈನೇಜ್ ಕಾಮಗಾರಿಗಳು, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕಾಗಿದೆ. ಹಾಗೆ ಅಮೃತ ಯೋಜನೆಯಲ್ಲಿಯೂ ಎಡಿಬಿ-2 ರಲ್ಲಿ ಆಗದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬಹುದು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಂಟು ವಾರ್ಡ್ ಗಳಲ್ಲಿ ಉತ್ತಮ ಡ್ರೈನೇಜ್ ವ್ಯವಸ್ಥೆ, ಸಮರ್ಪಕ ಕುಡಿಯುವ ನೀರಿನ ಪೂರೈಕೆ ಆಗಬೇಕಾಗುತ್ತದೆ ಎಂದು ಹೇಳಿದರು. ಈಗಾಗಲೇ ಕಾಮಗಾರಿ ಆರಂಭಿಸಿದ ಕುಂಡ್ಸೆಪ್, ಪಾಲಿಕೆ, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸುಮಾರು 10-15 ವಾರ್ಡ್ ಗಳಲ್ಲಿರುವ ಕುಡಿಯುವ ನೀರಿನ, ಡ್ರೈನೇಜ್ ಸಮಸ್ಯೆ ಪರಿಹಾರವಾಗಿ ಮಾದರಿ ವಾರ್ಡ್ ಗಳನ್ನಾಗಿ ಮಾಡಬೇಕಾಗಿದೆ. ಇನ್ನು ಯಾವ ವಾರ್ಡಿನ ಡ್ರೈನೇಜ್ ಮತ್ತು ಕುಡಿಯುವ ನೀರಿನ ಕಾಮಗಾರಿ ಈ ಯೋಜನೆಗಳಲ್ಲಿ ಬರದೇ ಬಿಟ್ಟು ಹೋಗಿದ್ದಲ್ಲಿ ಅವುಗಳಿಗೆ ಮುಖ್ಯಮಂತ್ರಿಯವರ ಬಳಿ ಮಾತನಾಡಿ ಬೇರೆ ವಿಶೇಷ ಪ್ಯಾಕೇಜ್ ನೀಡಲು ವಿನಂತಿಸುತ್ತೇನೆ ಎಂದು ಶಾಸಕ ಕಾಮತ್ ತಿಳಿಸಿದರು.

ಈಗ ಹೊಸದಾಗಿ ಅಳವಡಿಸುತ್ತಿರುವ ಎಂಟು ಇಂಚಿನ ಪೈಪುಗಳು ಸಾಕಾಗುವುದಿಲ್ಲ ಎಂದು ಮನಪಾ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದಾಗ ಅದಕ್ಕೆ ಆಗಬೇಕಾದ ಪರ್ಯಾಯ ಕಾರ್ಯಗಳ ಬಗ್ಗೆ ಚಿಂತನೆ ನಡೆಸಲಾಯಿತು. ಎಡಿಬಿ-2 ಮತ್ತು ಅಮೃತ ಯೋಜನೆಯನ್ನು ಕುಡ್ಸೆಂಪು ಮೇಲ್ವಿಚಾರಣೆಯಲ್ಲಿ, ಅಮೃತ ಯೋಜನೆಯ ಕೆಲವು ಕಾಮಗಾರಿಗಳು ಪಾಲಿಕೆಯ ಅಡಿಯಲ್ಲಿ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಸ್ಮಾರ್ಟ್ ಸಿಟಿ ನಿರ್ದೇಶಕರ ಮಂಡಳಿಯ ಮೂಲಕ ನಡೆಯುವುದರಿಂದ ಎಲ್ಲ ಇಲಾಖೆಗಳು ಪರಸ್ಪರ ಸಂವಹನ ಮಾಡಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.


Spread the love